ಬೆಂಗಳೂರು : ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಚಿವ ವಿ ಸೋಮಣ್ಣ ಸ್ಪಷ್ಟನೆ ನೀಡಿದ್ದು, ನಾನೆಲ್ಲಾದರೂ ಕಾಂಗ್ರೆಸ್‌ಗೆ ಹೋಗ್ತೀನಿ ಅಂತ ಹೇಳಿದೀನಾ? ಎಂದು ತಿಳಿಸಿದರು. ಗೋವಿಂದರಾಜನಗರ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ವಿ ಸೋಮಣ್ಣ, ವದಂತಿಗಳಿಗೆ ನಾನು ಉತ್ತರ ಕೊಡಕ್ಕಾಗಲ್ಲ. ನಾನ್ಯಾಕೆ ವದಂತಿಗಳಿಗೆ ಉತ್ತರ ಕೊಡಲಿ?. ನಾನೆಲ್ಲಾದರೂ ಕಾಂಗ್ರೆಸ್‌ಗೆ ಹೋಗ್ತೀನಿ ಅಂತ ಹೇಳಿದೀನಾ? ಎಂದು ಪ್ರಶ್ನಿಸಿದರು.
ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಆರ್ ಅಶೋಕ್, ಸೋಮಣ್ಣಗೆ ಯಾವುದೇ ಅಸಮಾಧಾನ ಇಲ್ಲ. ನಾನು ಸೋಮಣ್ಣ ಅವರ ಸಂಪರ್ಕದಲ್ಲಿ ಸತತವಾಗಿದ್ದೇನೆ. ಕಾಂಗ್ರೆಸ್‌ಗೆ ಹೋಗ್ತಾರೆ ಅಂತ ಇಲ್ಲ ಸಲ್ಲದ ಆರೋಪ ಮಾಡ್ತಿದಾರೆ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾವೆಲ್ಲ ಒಟ್ಟಾಗಿ ಇದ್ದೇವೆ. ಸೋಮಣ್ಣ ನಮ್ಮ ನಾಯಕ ಎಂದರು.
ಕರ್ನಾಟಕ ದಕ್ಷಿಣ ಭಾರತಕ್ಕೆ ಹೆಬ್ಬಾಗಿಲು. ಕರ್ನಾಟಕವನ್ನು ಗೆಲ್ಲಿಸುತ್ತೇವೆ, ನಮ್ಮ ವರಿಷ್ಠರು ಬರ್ತಿದಾರೆ. ಮತ್ತೆ ನಾವೇ ಗೆದ್ದು ಅಧಿಕಾರ ಹಿಡೀತೇವೆ. ಕಾಂಗ್ರೆಸ್ ಧೂಳೀಪಟ ಆಗಲಿದೆ. ಈ ರಾಜ್ಯದಲ್ಲಿ ಮತದಾರ ದೊಡ್ಡವನು. ಯಾರ ಪಾಳೇಗಾರಿಕೆ ನಡೆಯಲ್ಲ. ಕುಮಾರಸ್ವಾಮಿಗೆ ಅಧಿಕಾರ ಕೊಟ್ಟಾಗ ಆಡಳಿತ ನಡೆಸದೇ ಬಿಟ್ ಹೋದ್ರು, ಕುದುರೆ ಏರದೇ ಬಿಟ್ ಹೋದ್ರು. ಮತ್ತೆ ಅಧಿಕಾರಕ್ಕೆ ಬರ್ತೀನಿ ಅಂದ್ರೆ ಹೆಚ್ಡಿಕೆಯನ್ನು ಜನ ನಂಬಲ್ಲ. ಕಾಂಗ್ರೆಸ್ ಜೆಡಿಎಸ್ ಅವರದ್ದು ಕಳ್ಳಮಳ್ಳ ಆಟ. ಕಾಂಗ್ರೆಸ್ನ ಬಿ ಟೀಮ್ ಜೆಡಿಎಸ್. ಕಾಂಗ್ರೆಸ್ ವೋಟು ದಳದ್ದು, ದಳ ವೋಟ್ ಕಾಂಗ್ರೆಸ್ದು ಎಂದು ಟಾಂಗ್ ನೀಡಿದರು.
ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣವಾಗಿ ಬಂದ್ಗೆ ಕಾಂಗ್ರೆಸ್ ಕರೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಡಿಕೆಶಿಗೆ ಸೋಲೋ ಭಯ ಕಾಡ್ತಿದೆ. ಸಿದ್ದರಾಮಯ್ಯ ಓಡಿ ಹೋಗುವ ಹಂತದಲ್ಲಿದ್ದಾರೆ. ಎಸಿಬಿ ರಚಿಸಿ ಅವರ ವಿರುದ್ಧ ಇರೋ ಎಲ್ಲ ಕೇಸ್ ಮುಚ್ಚಿ ಹಾಕಿದ್ರು. ಒಂದೇ ಒಂದು ಕೇಸ್ನಲ್ಲಿ ಬಂಧನ ಮಾಡಲಿಲ್ಲ. ಎಲ್ಲ ಕೇಸ್ ಮುಚ್ಚಿಹಾಕಿದ್ರು. ನಾವು ಪಾರದರ್ಶಕವಾಗಿದ್ದೇವೆ. ನಮ್ಮ ಪಕ್ಷದವರೇ ತಪ್ಪು ಮಾಡಿದ್ರೂ ಜೈಲಿಗೆ ಹಾಕ್ತೀವಿ, ಶಿಕ್ಷೆ ಆಗುತ್ತೆ. ನಾವು ಯಾವುದೇ ಕೇಸ್ ಮುಚ್ಚಿ ಹಾಕಿಲ್ಲ ಎಂದರು.
ಆರ್. ಅಶೋಕ್ - ವಿ. ಸೋಮಣ್ಣ ತಿಕ್ಕಾಟಕ್ಕೆ ಯಾತ್ರೆ ಮೊಟಕು: ಬಿಜೆಪಿ ರಥಯಾತ್ರೆ ನಾಗರಭಾವಿಯಲ್ಲೇ ಮೊಟಕಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಯಿತು. ನಾಯಂಡನಹಳ್ಳಿವರೆಗೂ ಸಾಗದ ರಥಯಾತ್ರೆ ಅರ್ಧಕ್ಕೆ ಮೊಟಕಾಯಿತು. ಸಚಿವ ಆರ್ ಅಶೋಕ್ ಮತ್ತು ವಿ ಸೋಮಣ್ಣ ಮಧ್ಯೆ ಗೊಂದಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ಯಾತ್ರೆ ಮೊಟಕು ಕಂಡಿದೆ.
ಅಶೋಕ್ ಮೇಲೆ ಕೋಪಗೊಂಡ ಸಚಿವ ವಿ. ಸೋಮಣ್ಣ, ನಾಗರಬಾವಿಯಲ್ಲೇ ಯಾತ್ರೆಯನ್ನು ಮೊಟಕುಗೊಳಿಸಿದರು. ನಾಗರಭಾವಿಯಿಂದ ನಾಯಂಡಹಳ್ಳಿವರೆಗೂ ರಥಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಆದರೆ ನಾಯಂಡಹಳ್ಳಿವರೆಗೂ ರಥಯಾತ್ರೆಯಲ್ಲಿ ತೆರಳಲು ಅಶೋಕ್ ನಿರಾಕರಿಸಿದರು. ನಾಯಂಡನಹಳ್ಳಿವರೆಗೂ ಬರುವುದಕ್ಕೆ ಆಗುವುದಿಲ್ಲ ಎಂದು ಸಚಿವ ಆರ್ ಅಶೋಕ್ ತೆರಳಿದರು. ಆರ್ ಅಶೋಕ್ ಹೋದ ಹಿನ್ನೆಲೆಯಲ್ಲಿ ಕೋಪಗೊಂಡ ವಿ. ಸೋಮಣ್ಣ ತಾವೂ ನಾಗರಭಾವಿಯಲ್ಲೇ ರಥಯಾತ್ರೆ ಮೊಟಕುಗೊಳಿಸಿದರು. ತಮ್ಮ ಕ್ಷೇತ್ರದಲ್ಲಿ ಸಾಗುತ್ತಿದ್ದ ರಥಯಾತ್ರೆ ವಾಹನ ಬಿಟ್ಟು ಕಾರಿನಲ್ಲಿ ತೆರಳಿದರು.
ಬೆಳಗ್ಗೆ ವಿ ಸೋಮಣ್ಣ ಅವರನ್ನು ಹೊಗಳಿದ್ದ ಆರ್ ಅಶೋಕ್, ಮಧ್ಯಾಹ್ನವಾಗುತ್ತಿದ್ದ ಹಾಗೇ ಪರಸ್ಪರ ಮುನಿಸಿಕೊಂಡು ಯಾತ್ರೆ ಮೊಟಕುಗೊಳಿಸಿರುವುದು ಇಬ್ಬರ ಮಧ್ಯೆ ಇನ್ನೂ ತಿಕ್ಕಾಟ ಮುಂದುವರಿದಿದೆ ಎಂಬ ಅನುಮಾನ ಮೂಡಿದೆ. ಯಾತ್ರೆ ಆರಂಭದಲ್ಲಿ ಬೆಳಗ್ಗೆ ಮಾತನಾಡಿದ್ದ ಸಚಿವ ಆರ್ ಅಶೋಕ್, ವಿ ಸೋಮಣ್ಣ ಇಡೀ ಕರ್ನಾಟಕದ ಫಿಗರ್. ಅವರನ್ನು ಚಾಮರಾಜನಗರಕ್ಕೋ ವಿಜಯನಗರಕ್ಕೋ ಸೀಮಿತ ಮಾಡಬೇಡಿ. ಯಾವುದೇ ಮಠ ಇದ್ರೂ ಬಾಗಿಲು ತೆಗೆಸಿ ಹೋಗೋ ಶಕ್ತಿ ಇರೋ ಪ್ರಭಾವಿ ನಾಯಕ ಸೋಮಣ್ಣ ಎಂದು ಹೊಗಳಿದ್ದರು.
ಇದನ್ನೂ ಓದಿ : ಸಿದ್ದರಾಮಯ್ಯ ಸರ್ಕಾರದಲ್ಲಿ ಭ್ರಷ್ಟಾಚಾರ: ಸಿಎಂ ಕಚೇರಿ ಕಾಫಿ - ತಿಂಡಿಗೆ 200 ಕೋಟಿ ರೂ.ದುಂದು ವೆಚ್ಚ: ಎನ್.ಆರ್.ರಮೇಶ್ ಆರೋಪ