ಬೆಂಗಳೂರು: ನಾಡಪ್ರಭು ಕೆಂಪೇಗೌಡ 108 ಅಡಿ ಕಂಚಿನ ಭವ್ಯ ಪ್ರತಿಮೆ ಅನಾವರಣ ಪ್ರಯುಕ್ತ ಡಾ ರಾಜ್ ಕುಮಾರ್ ವಾರ್ಡ್ನಲ್ಲಿ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ ಮತ್ತು 1000 ಸಾವಿರ ಬೈಕ್ಗಳ ಜಾಥಾ ಕಾರ್ಯಕ್ರಮ ನಡೆಯಿತು.
ಸ್ಥಳೀಯ ಶಾಸಕ, ವಸತಿ ಸಚಿವ ವಿ ಸೋಮಣ್ಣ ಕಳಸಪೂಜೆ ನೆರವೇರಿಸಿ, ಪವಿತ್ರ ಮೃತ್ತಿಕೆ ಸಂಗ್ರಹ ಮಾಡಿ, ಬೈಕ್ ಜಾಥಾಗೆ ಚಾಲನೆ ನೀಡಿದರು. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ 9 ವಾರ್ಡ್ಗಳಲ್ಲಿ ಪವಿತ್ರ ಮೃತ್ತಿಕೆ ಸಂಗ್ರಹ ನಾಡಪ್ರಭು ಕೆಂಪೇಗೌಡ ಭವ್ಯ ರಥ ಸಂಚರಿಸಿತು.
ಈ ವೇಳೆ ಮಾತನಾಡಿದ ವಿ ಸೋಮಣ್ಣ, ನಾಡಪ್ರಭು ಕೆಂಪೇಗೌಡರು ದೂರದೃಷ್ಟಿ ಚಿಂತಕ, ಅಭಿವೃದ್ಧಿಯ ಹರಿಕಾರ. 500 ವರ್ಷಗಳ ಹಿಂದೆ ಬೆಂಗಳೂರು ನಗರ ನಿರ್ಮಾಣ ಮಾಡಿದರು. ಅದರ ಇತಿಹಾಸವನ್ನು ಎಲ್ಲರು ಅರಿಯಬೇಕು. ಇತಿಹಾಸ ಪುರುಷ ನಾಡಪ್ರಭು ಕೆಂಪೇಗೌಡರ ಸಾಧನೆಗಳನ್ನು ರಾಷ್ಟ್ರ ಮತ್ತು ವಿಶ್ವಕ್ಕೆ ಪರಿಚಯಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ 108 ಅಡಿಯ ಕಂಚಿನ ಭವ್ಯ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ಕೆಂಪೇಗೌಡರು ಜಾತ್ಯತೀತ ಸಿದ್ದಾಂತದ ಹರಿಕಾರ: ನಾಡಪ್ರಭು ಕೆಂಪೇಗೌಡರು ಜಾತ್ಯತೀತ ಸಿದ್ದಾಂತದ ಹರಿಕಾರ ಉದ್ಯೋಗದ ತಕ್ಕಂತೆ ಪೇಟೆಗಳನ್ನು ನಿರ್ಮಿಸಿದರು. ಬಳೇಪೇಟೆ, ಅಕ್ಕಿಪೇಟೆ, ಗಾಣಿಗರ ಪೇಟೆ, ಚಿಕ್ಕಪೇಟೆ ಹೀಗೆ ಹಲವಾರು ಪೇಟೆಗಳನ್ನು ನಿರ್ಮಿಸಿದರು. ನಾಡಪ್ರಭು ಕೆಂಪೇಗೌಡರು ಅಪಾರ ದೈವ ಭಕ್ತರು ಹಾಗೂ ನಗರ ಪರಿಸರ ಮತ್ತು ಮಳೆ ನೀರು ಪೋಲಾಗದಂತೆ ತಡೆಯಲು 200ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿದರು ಎಂದು ಹೇಳಿದರು.
ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ಪವಿತ್ರ ಮೃತ್ತಿಕೆ ಸಂಗ್ರಹ: ಆದಿಚುಂಚನಗಿರಿಮಠ ಪೀಠಾಧಿಪತಿ ಬಾಲಗಂಗಾಧರನಾಥ ಮಹಾಸ್ವಾಮೀಜಿ ಮತ್ತು ಇಂದಿನ ಪೀಠಾಧಿಪತಿ ನಿರ್ಮಾಲಾನಂದನಾಥ ಸ್ವಾಮೀಜಿ ಆಶೀರ್ವಾದದಿಂದ ನಾಡಪ್ರಭು ಕೆಂಪೇಗೌಡ ಮೃತ್ತಿಕ ಸಂಗ್ರಹ ರಥಯಾತ್ರೆ ಸಾಗುತ್ತಿದೆ. ನಾಡಿನ ಎಲ್ಲ ಜಿಲ್ಲೆಗಳು, ಬೆಂಗಳೂರುನಗರ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ಪವಿತ್ರ ಮೃತ್ತಿಕೆ ಸಂಗ್ರಹ ಮಾಡಲಾಗುತ್ತಿದೆ. ನಾಡಪ್ರಭು ಕೆಂಪೇಗೌಡರ ರಥಯಾತ್ರೆ ಮತ್ತು ಪ್ರತಿಮೆ ಉದ್ಘಾಟನೆ ನಾಡಿನ ಆರುವರೆ ಕೋಟಿ ಜನರು ಪಾಲ್ಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಂಟಿ ಆಯುಕ್ತ ಯೋಗೇಶ್, ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯ ಗಂಗಭೈರಯ್ಯ, ಕೆ.ಉಮೇಶ್ ಶೆಟ್ಟಿ, ವಾಗೇಶ್, ದಾಸೇಗೌಡ, ರಾಮಪ್ಪ, ಜಯರತ್ನ ಮತ್ತು ಬಿಜೆಪಿ ಮುಖಂಡರಾದ ರಾಜಪ್ಪ, ಶ್ರೀಧರ್ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದ ಥೀಮ್ ಪಾರ್ಕ್ ದೃಶ್ಯ: ಗ್ರಾಫಿಕ್ಸ್ ನೋಟದಲ್ಲಿ..