ಬೆಂಗಳೂರು: ಇಂಧನ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಳವಳ ಆಗುತ್ತಿರುವುದು ನಿಜ. ಪೆಟ್ರೋಲ್, ಡೀಸೆಲ್ ದರ ತಹಬದಿಗೆ ತರಲು ಮೋದಿ ಕೆಲಸ ಮಾಡ್ತಿದ್ದಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.
ನಗರದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಕೇಂದ್ರ ಸರ್ಕಾರದ ಬಜೆಟ್ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರ ಬವಣೆ ನೀಗಬೇಕು ಅನ್ನೋದು ನನ್ನ ವೈಯುಕ್ತಿಕ ಅಭಿಪ್ರಾಯ. ಇದೊಂದು ವಿಶೇಷ ಸಂದರ್ಭ, ಎಲ್ಲವನ್ನೂ ಕಡಿಮೆ ಮಾಡ್ತಾರೆ ಎಂದರು.
ಕೇಂದ್ರ ಬಜೆಟ್ ಸಮರ್ಥಿಸಿಕೊಂಡ ವಿ. ಸೋಮಣ್ಣ, ರಾಜ್ಯದ 33 ಹೆದ್ದಾರಿಗಳಿಗೆ ಅಡಿಗಲ್ಲು ಹಾಕಿದ್ದಾರೆ. ಬೆಂಗಳೂರು ಮೆಟ್ರೋ ಕಾಮಗಾರಿ, ಕರ್ನಾಟಕದ ರೈಲ್ವೇ ಯೋಜನೆಗಳಿಗೆ ಅಗತ್ಯ ಹಣ ನೀಡಿದ್ದಾರೆ. ತುಮಕೂರಿನ ವಸಂತನರಸಾಪುರದ ಕೈಗಾರಿಕೆ ವಲಯವನ್ನು ರಾಷ್ಟ್ರ ಮಟ್ಟಕ್ಕೆ ತೆಗೆದುಕೊಂಡು ಹೋಗ್ತಿದ್ದಾರೆ. ಅಮೆರಿಕಾದ ವಿದ್ಯುತ್ ಚಾಲಿತ ಕಾರು ಉತ್ಪಾದನ ಸಂಸ್ಥೆಯಾದ ಟೆಸ್ಲಾ ಘಟಕವನ್ನು ಕರ್ನಾಟಕದಲ್ಲಿ ಸ್ಥಾಪಿಸಲು ಉತ್ಸುಕರಾಗಿದ್ದಾರೆ ಎಂದರು.
ಮೋದಿ ಬರೋವರೆಗೂ ಯಾರನ್ನೇ ಕೇಳಿದ್ರೂ ಇಂದಿರಾಗಾಂಧಿ ಪ್ರಧಾನಿ ಅಂತಿದ್ರು, ಆದ್ರೆ ಮೋದಿ ಬಂದ್ಮೇಲೆ ಯಾರನ್ನೂ ಕೇಳಿದ್ರೂ ಮೋದಿ ಅಂತಿದ್ದಾರೆ. ಸಾಮಾನ್ಯ ಜನರ ಹೃದಯ ಗೆಲ್ಲುವ ಕೆಲಸ ಮಾಡುತ್ತಿದ್ದೇವೆ ಎಂದರು.
ಇನ್ನು ವೀರಶೈವ ಸ್ವಾಮಿಜಿಗಳ ಸಭೆ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನನಗೆ ಮಾಹಿತಿಯಿಲ್ಲ. ನಾನು ಬೆಳಗ್ಗೆಯೇ ಕ್ಷೇತ್ರ ಬಿಟ್ಟು ನನ್ನ ಕೆಲಸದಲ್ಲಿ ಬ್ಯುಸಿಯಾಗಿರುವೆ ಎಂದು ಹೇಳಿದರು.