ಬೆಂಗಳೂರು : ಸಿಸಿಬಿ ಬಲೆಗೆ ಬಿದ್ದ ಯುವರಾಜನಿಗೂ ನನಗೂ ಯಾವುದೇ ವ್ಯಕ್ತಿಗತ ಸಂಬಂಧ ಇಲ್ಲ ಎಂದು ವಸತಿ ಸಚಿವ ವಿ ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.
ವಿಜಯನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಯುವರಾಜನ ಮನೆಯಲ್ಲಿ ಕಾಫಿ ಕುಡಿದಿದ್ದೆ. ಆತ ಕೊಟ್ಟ ತಟ್ಟೆ ನೋಡಿಯೇ ದಿಗಿಲಾಗಿತ್ತು. ಯುವರಾಜ್ ಯಾರು ಅಂತಾ ಗೊತ್ತಿರಲಿಲ್ಲ. ಬಿಜೆಪಿ ಕಾರ್ಯಕರ್ತ ಅಂತಾ ಗುರ್ತಿಸಿಕೊಂಡಿದ್ದ. ಒಂದು ದಿನ ಬಲವಂತವಾಗಿ ಅವರ ಮನೆಗೆ ಕರೆದುಕೊಂಡು ಹೋಗಿದ್ದ. ಹೋಗಿ ತಿಂಡಿ ತಿಂದು ಬಂದಿದ್ದೆ ಅಷ್ಟೇ..
ಆತನ ವೈಭವಯುತ ಮನೆ ನೋಡಿದಾಗ ಅಲ್ಲೇ ನನ್ನ ಸಿಕ್ತ್ ಸೆನ್ಸ್‌ಗೆ ಅನಿಸಿತ್ತು. ಹುಷಾರಾದೆ.. ಅದು ಬಿಟ್ಟರೆ ಅವನಿಂದ ನನಗೆ ಯಾವ ಅನ್ಯಾಯವೂ ಆಗಿಲ್ಲ. ಬ್ಲ್ಯಾಕ್‌ಮೇಲ್ ಆಗಿಲ್ಲ. ನಾನು ಅವನಿಗೆ ದುಡ್ಡೂ ಕೊಟ್ಟಿಲ್ಲ. ಅದರ ಅಗತ್ಯವೂ ನನಗಿಲ್ಲ ಎಂದರು.
ಒಂದು ವೇಳೆ ಅವನೇನಾದ್ರೂ ನನ್ನ ಹೆಸರು ಹೇಳಿಕೊಂಡು ಬೇರೆಯವರಿಗೆ ಮೋಸ ಮಾಡಿದ್ದಾನೆ ಎಂದು ಸಣ್ಣ ಸುಳಿವು ಸಿಕ್ಕಿದ್ರೂ ನನ್ನ ಬೆಂಬಲಿಗರು ಅವನನ್ನು ಸುಮ್ಮನೆ ಬಿಡುತ್ತಿರಲಿಲ್ಲ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಯಾವ ತನಿಖೆ ಬೇಕಾದರೂ ಆಗಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರು.
ಓದಿ...ಯಾರ ಜೊತೆಗೋ ಫೋಟೋ ಇದ್ದಾಕ್ಷಣ ಅಪರಾಧವಾಗೋದಿಲ್ಲ : ಸಿಎಂ ಬಿ ಎಸ್ ಯಡಿಯೂರಪ್ಪ
ಮಾಧ್ಯಮಗಳಲ್ಲಿ ಬಂದ ಮೇಲೇನೇ ಆತ ವಂಚಕ, ತುಂಬಾ ಜನಕ್ಕೆ ಮೋಸ ಮಾಡಿದಾನೆ ಅಂತಾ ಗೊತ್ತಾಗಿರೋದು. ನಡೆ, ವೇಷಭೂಷಣ ನೋಡಿ ದೈವಭಕ್ತ ಇರಬೇಕು ಅನ್ಕೊಂಡೆ. ಹಾಗಾಗಿ, ಮನೆಗೆ ಹೋಗಿದ್ದೆ. ಆತ ನಾಲ್ಕೈದು ಬಾರಿ ಕರೆ ಮಾಡಿದ್ದ. ಈಗ ಅನಿಸ್ತಿದೆ, ಅವನ ಮನೆಗೆ ಹೋಗಿದ್ದು ತಪ್ಪು ಅಂತಾ.. ಒಮ್ಮೆ ಮನೆಗೆ ಕರೆದಾಗ ಹೋಗಿ ಬಂದಿದ್ದೆ.. ಫೋಟೋ ಯಾರು ತೆಗೆದರೋ ಗೊತ್ತಿಲ್ಲ ಎಂದರು.
ಆತನ ಮನೆ ಅದ್ದೂರಿಯಾಗಿದೆ. ತಪ್ಪು ಮಾಡಿದವರ ಪಾಪದ ಕೊಡ ತುಂಬಿದ್ರೆ ಹೊರಗೆ ಬರುತ್ತೆ. ಅದಕ್ಕೆ ಯುವರಾಜನೇ ನಿದರ್ಶನ. ಆತ ಮಹಾ ಬುದ್ಧಿವಂತ ಅನ್ಕೊಂಡಿದ್ದೆ, ಇಂಥ ಬುದ್ಧಿವಂತ ಅಂತಾ ಗೊತ್ತಿರಲಿಲ್ಲ.
ಸಿಸಿಬಿ ಕರೆದ್ರೆ ಹೋಗೋಣಂತೆ. ಆದ್ರೆ, ನಾನು ಮತದಾರ ಅಂತಷ್ಟೇ ಮನೆಗೆ ಹೋಗಿದ್ದು.. ನಾನು ಯಾರನ್ನೂ ನೋಯಿಸಲ್ಲ. ಆತನ ಮನೆಗೆ ಹೋಗಿದ್ದೇ ಕೊನೆ. ಮತ್ತೆಂದೂ ಆತನನ್ನು ನೋಡಿಲ್ಲ ಎಂದರು.