ಬೆಂಗಳೂರು: ಪಿಯು ಉಪನ್ಯಾಸಕರ ಅಹೋರಾತ್ರಿ ಧರಣಿ ಮುಂದುವರೆದಿದೆ. ಈ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದು, ನನ್ನ ಮೇಲೆ ನೀವು ಭರವಸೆ ಇಡುವುದಾದಲ್ಲಿ ತಕ್ಷಣವೇ ಈ ಹೋರಾಟವನ್ನ ಕೈಬಿಡಿ ಎಂದಿದ್ದಾರೆ.
ನಿಮ್ಮ ಪ್ರತಿಭಟನೆ ಇನ್ನೂ ಮುಂದುವರೆದಿರುವುದು ನಿಜಕ್ಕೂ ನನಗೆ ವೇದನೆಯಾಗಿದೆ. ಇಷ್ಟೆಲ್ಲಾ ಮನವಿಗಳ ಬಳಿಕವೂ ಹೀಗೆ ಹಠ ಮಾಡುವುದು ಒಳಿತಲ್ಲ. ನನಗೆ ವೈದ್ಯರು ಅನುಮತಿ ಕೊಟ್ಟಿದ್ದರೆ ನಾನೇ ತಮ್ಮನ್ನೆಲ್ಲಾ ಬಂದು ಭೇಟಿ ಮಾಡುತ್ತಿದ್ದೆ. ತಮ್ಮ ಮಧ್ಯೆ ಕುಳಿತು ಮಾತನಾಡುತ್ತಿದ್ದೆ. ಆದರೆ ಅದಕ್ಕೆ ಈಗ ಅವಕಾಶವಿಲ್ಲ ಅಂತ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ..
ನೇಮಕಾತಿ ಎಷ್ಟು ವರ್ಷಗಳಿಂದ ಬಾಕಿಯಿತ್ತು, ಅದು ಈ ಹಂತದವರೆಗೆ ಬರುವಲ್ಲಿ ನಾನು ನಿಮಗೆ ಎಷ್ಟು ಸಹಕರಿಸಿದ್ದೇನೆಂಬ ವಿಷಯ ನಿಮಗೆಲ್ಲಾ ತಿಳಿದಿದೆ. ಸಚಿವನಾಗಿ ಖಾತೆ ಹಂಚಿಕೆಗೂ ಮುನ್ನವೇ 21.08.2019ರಂದು ನಾನು ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ನೀಡಿದ ಸೂಚನೆಗಳು, ನಂತರ ಉದ್ಭವವಾದ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ನಾನು ತೆಗೆದುಕೊಂಡ ಕ್ರಮಗಳು, ಕಡೆಗೆ ಕೌನ್ಸೆಲಿಂಗ್ ನಡೆಸುವ ಪ್ರಕ್ರಿಯೆ ಹೀಗೆ ಪ್ರತಿ ಬಾರಿ ನಿಮಗೆ ಒಳಿತಾಗಲೆಂಬ ಆಶಯವಷ್ಟೇ ನನ್ನಲ್ಲಿ ಇತ್ತು.
ಇಡೀ ವಿಶ್ವವನ್ನು ಅಲುಗಾಡಿಸಿರುವ ಕೊರೊನಾ ಮಹಾಮಾರಿ ನಮ್ಮ ಶೈಕ್ಷಣಿಕ ಚಟುವಟಿಕೆಗಳ ಮೇಲೆ, ಆರ್ಥಿಕತೆಯ ಮೇಲೆ ಅಪಾರವಾದ ಪರಿಣಾಮ ಬೀರಿದೆ. ಬೇರಾವ ಇಲಾಖೆಗಳ ನೇಮಕಾತಿಗೆ ಇಂದು ನಮ್ಮ ಸರ್ಕಾರ ಅನುಮತಿಸಿಲ್ಲ. ನಿಮ್ಮದೊಂದು ವಿಶೇಷ ಪ್ರಕರಣವೆಂಬಂತೆ ಮುಖ್ಯಮಂತ್ರಿಗಳೊಂದಿಗೆ, ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಶಾಲಾ-ಕಾಲೇಜುಗಳ ಪ್ರಾರಂಭದ ಬಳಿಕ ನೇಮಕಾತಿ ಆದೇಶ ಹೊರಡಿಸುವ ಅನುಮತಿಯನ್ನ ಪಡೆದಿದ್ದೇನೆ. ಆರ್ಥಿಕ ಇಲಾಖೆಯ ಆದೇಶದ ಸಂಪೂರ್ಣ ಮಾಹಿತಿ ನಿಮ್ಮೆಲ್ಲರಲ್ಲಿದೆ.
ಡಿಸಿಎಂ ಡಾ. ಅಶ್ವತ್ಥ ನಾರಾಯಣ ಇದೆಲ್ಲವನ್ನೂ ನಿಮಗೆ ವಿವರಿಸಿದ್ದಾರೆ. ಆದರೂ ನೀವು ನೇಮಕಾತಿ ಆದೇಶ ನೀಡಬೇಕೆಂದು ಹಠ ಹಿಡಿದು ಕೂರುವುದು ಒಳ್ಳೆಯದಲ್ಲ, ಹೋರಾಟ ತಾರ್ಕಿಕವಾಗಿರಬೇಕು. ಎಲ್ಲಾ ಭರವಸೆಗಳು ದೊರೆತ ನಂತರವೂ ಹಠ ಹಿಡಿಯುವುದು ಹೋರಾಟದ ಅರ್ಥ ಕಳೆದುಕೊಳ್ಳುವ ಹಾಗೆ ಮಾಡುತ್ತದೆ. ಹೆಣ್ಣುಮಕ್ಕಳೂ ಪ್ರತಿಭಟನೆಯಲ್ಲಿದ್ದೀರಿ. ಸಾಂಕ್ರಾಮಿಕದ ಸಂದರ್ಭದಲ್ಲಿ ಎಲ್ಲರ ಆರೋಗ್ಯ ಸೂಕ್ಷ್ಮ ಸ್ಥಿತಿಯಲ್ಲಿ ಇರುತ್ತದೆ. ಯಾರಿಗೂ ಸಮಸ್ಯೆಯಾಗಬಾರದು. ಜೀವದ ಬೆಲೆ ದೊಡ್ಡದು. ನೀವೆಲ್ಲಾ ಇನ್ನೂ ಯುವಕರು, ವಿಶೇಷವಾಗಿ ಗುರು ಸ್ಥಾನವನ್ನು ಅಲಂಕರಿಸುವವರು. ಹತ್ತಾರು ವರ್ಷ ಇಲಾಖೆಯ ಸೇವೆ ಮಾಡಬೇಕಾದವರು. ಸಾವಿರಾರು, ಲಕ್ಷಾಂತರ ಯುವಕರಿಗೆ ದಾರಿದೀಪವಾಗಬೇಕಾದವರು. ನೀವು ಹಾಕುವ ಮೇಲ್ಪಂಕ್ತಿ ಸಮಾಜವನ್ನು ಮುನ್ನಡೆಸಬೇಕೆಂಬುದು ನಿಮ್ಮೆಲ್ಲರ ನೆನಪಿನಲ್ಲಿರಲಿ. ನೇಮಕಾತಿ ಆದೇಶ ನೀಡುವುದರ ಕುರಿತು ನನ್ನ ಮೇಲೆ ನೀವು ಭರವಸೆ ಇಡುವುದಾದಲ್ಲಿ ತಕ್ಷಣವೇ ಈ ಹೋರಾಟವನ್ನ ಕೈಬಿಡಿ. ನಿಮ್ಮ ಬಗ್ಗೆ ಇನ್ನಷ್ಟು ಪ್ರೀತಿಯಿಂದ, ಆಸ್ಥೆಯಿಂದ ಮುಂದಿನ ಕೆಲಸಗಳನ್ನು ಮಾಡಲು ಅದು ನನಗೆ ಶಕ್ತಿ ತುಂಬುತ್ತದೆ ಎಂದು ತಿಳಿಸಿದ್ದಾರೆ.