ಬೆಂಗಳೂರು: ರಾಜ್ಯಾದ್ಯಂತ ಜುಲೈ 19-22 ರಂದು ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತ್ತಿದ್ದು, ಇಂದು ಪರೀಕ್ಷಾ ಸಿದ್ಧತೆಯ ಅಣುಕು ಪ್ರದರ್ಶನ ನಡೆಸಲಾಯ್ತು. ಇಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಾ ಕೇಂದ್ರದ ಅಂತಿಮ ಸಿದ್ಧತೆಯನ್ನ ವೀಕ್ಷಣೆ ಮಾಡಿದರು. ನಗರದ ಮಲ್ಲೇಶ್ವರಂ ಪ್ರೌಢಶಾಲೆಗೆ ಭೇಟಿ ನೀಡಿ, ಪರಿಶೀಲಿಸಿದರು.
ಬಳಿಕ ಮಾತಾನಾಡಿದ ಸುರೇಶ್ ಕುಮಾರ್, ಈಗಾಗಲೇ ರಾಜ್ಯದಲ್ಲಿ ಈ ವರ್ಷ 4,885 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಕಳೆದ ವರ್ಷ ಮೂರು ಸಾವಿರ ಪರೀಕ್ಷಾ ಕೇಂದ್ರಗಳು, 48 ಸಾವಿರ ಪರೀಕ್ಷಾ ಕೊಠಡಿಗಳು ಇದ್ದವು. ಈ ಬಾರಿ 73 ಸಾವಿರಕ್ಕೂ ಅಧಿಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಇವತ್ತು ಎಲ್ಲ ಕೇಂದ್ರಗಳಲ್ಲಿ ರಿಹರ್ಸಲ್ ನಡೆಯುತ್ತದೆ. ಸಾಮಾಜಿಕ ಅಂತರವನ್ನು ಶಾಲೆ ಒಳಗೆ ಹಾಗೂ ಹೊರಗೆ ಕಾಪಾಡುವಂತೆ ಸೂಚಿಸಲಾಗಿದೆ. ಓಎಂಆರ್ ಶೀಟ್ ಮೇಲೆ ಮಕ್ಕಳ ಫೋಟೋ ಹಾಗೂ ರಿಜಿಸ್ಟರ್ ನಂಬರ್ ಇರಲಿದ್ದು, ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಎದುರಿಸುವಂತೆ ಸಲಹೆ ನೀಡಿದರು.
ಇದನ್ನೂ ಓದಿ: ಕಾವೇರಿ ಕಣಿವೆ ಪ್ರದೇಶದಲ್ಲಿ ಬಿರುಸಿನ ಮಳೆ: KRSಗೆ ಒಳ ಹರಿವು ಹೆಚ್ಚಳ
ಈ ಬಾರಿ ಒಂದು ಲಕ್ಷಕ್ಕೂ ಅಧಿಕ ಹೆಚ್ಚುವರಿ ಸಿಬ್ಬಂದಿ ಭಾಗಿಯಾಗುತ್ತಿದ್ದಾರೆ. ಎಲ್ಲ ಜಿಲ್ಲೆಗೆ ಒಂದೊಂದು ನೋಡಲ್ ಆಫೀಸರ್ ನೇಮಕ ಮಾಡಲಾಗಿದೆ. ಎಸ್ಓಪಿಯಲ್ಲಿ ಯಾವುದೇ ದೋಷವಿಲ್ಲದೇ ಕ್ರಮ ವಹಿಸಲಾಗಿದೆ. ಮಕ್ಕಳಿಗೆ ಬಿಸಿ ನೀರಿನ ವ್ಯವಸ್ಥೆ ಕೂಡ ಇರಲಿದ್ದು, ಪರೀಕ್ಷೆಯು ಯಾವುದೇ ಸಮಸ್ಯೆ ಇಲ್ಲದೇ ನಡೆಯುತ್ತೆ ಅನ್ನೋ ವಿಶ್ವಾಸವಿದೆ ಎಂದು ತಿಳಿಸಿದರು.