ಬೆಂಗಳೂರು: ರಾಜ್ಯಾದ್ಯಂತ ಇಂದು ಮಧ್ಯಾಹ್ನ 3.30ರ ವೇಳೆಗೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಳ್ಳಲಿದೆ. ಹೀಗಾಗಿ, ಸಚಿವ ಸುರೇಶ್ ಕುಮಾರ್, ಪೋಷಕರಲ್ಲಿ ನಿಮ್ಮ ಮಕ್ಕಳ ಪರೀಕ್ಷೆ ಫಲಿತಾಂಶ ಏನೇ ಬರಲಿ ಬೇರೆಯವರೊಂದಿಗೆ ಹೋಲಿಕೆ ಮಾಡಿ ನೋವಾಗುವಂತೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ತಮ್ಮ ಮೊಬೈಲಿಗೆ ಫಲಿತಾಂಶ ಬರಲಿದೆ. ಕೊರೊನಾ ವಾತಾವರಣದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುವುದೇ ದೊಡ್ಡ ಸಾಧನೆ ಎಂಬುದು ತಿಳಿದಿರಲಿ. ತಮ್ಮ ಮಕ್ಕಳ ಫಲಿತಾಂಶ ಎಷ್ಟೇ ಆಗಿರಲಿ ಅವರಿಗೆ ಹೇಳುವಾಗ ನಿಧಾನವಾಗಿ ಪ್ರೀತಿಯಿಂದ ತಿಳಿಸಿ. ಗಳಿಸಿದ ಅಂಕಗಳಿಗೆ ತೃಪ್ತಿ ಪಡುವಂತೆ ಮನವೊಲಿಸಿ, ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿ. ಅವರನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿ ನೋವಾಗುವಂತೆ ಮಾಡಬೇಡಿ ಎಂದು ತಿಳಿಸಿದ್ದಾರೆ.
ಅವರು ಯಾವ ಕೋರ್ಸ್ ಆಯ್ಕೆ ಮಾಡಿದ್ದರೂ ಆ ಕೋರ್ಸಿಗೆ ಸೇರಿಸಿ ಮುಂದೆ ಚೆನ್ನಾಗಿ ಓದಲು ಹೇಳಿ ಹಾಗೂ ಒಂದು ವೇಳೆ ಅವರ ನಿರೀಕ್ಷೆಗಿಂತ ಯಾವುದಾದರೂ ವಿಷಯದಲ್ಲಿ ಕಡಿಮೆ ಅಂಕ ಬಂದಲ್ಲಿ ಮರು ಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅವಕಾಶವಿರುತ್ತದೆ. ಮಗು ಮನೆಯ ಬೆಳಕು ಆ ಬೆಳಕು ಸದಾ ಪ್ರಜ್ವಲಿಸಲಿ ಎಂಬುದೇ ನಮ್ಮೆಲ್ಲರ ಆಶಯ ಎಂದು ಅವರು ತಿಳಿಸಿದ್ದಾರೆ.