ಬೆಂಗಳೂರು : ಸಚಿವ ಆನಂದ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿರುವ ವಿಚಾರವಾಗಿ ಸಚಿವ ಸುನಿಲ್ ಕುಮಾರ್ ಮಾತನಾಡಿ, ಈಗಾಗಲೇ ಆನಂದ್ ಸಿಂಗ್ ಕುರಿತು ಸಿಎಂ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಈ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿದ್ದಾರೆ. ಸಹಜವಾಗಿ ಸ್ವಲ್ಪ ದಿನ ಇಂತಹ ಭಾವನೆಗಳು ಇರುತ್ತವೆ ಎಂದು ಅಭಿಪ್ರಾಯಪಟ್ಟರು.
ವರನಟ ಡಾ. ರಾಜ್‌ಕುಮಾರ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸಮಾಧಿಗಳಿಗೆ ಭೇಟಿ ನೀಡಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಆಂತರಿಕ ವ್ಯವಸ್ಥೆ ಇದೆ. ಯಾವುದೇ ಗೊಂದಲ, ನೋವು, ಅಸಮಾಧಾನ ಇದ್ದರು ಕೂಡ ಇದನ್ನ ಸರಿ ಮಾಡಿಕೊಳ್ಳಲು ನಮ್ಮ ಪಕ್ಷದಲ್ಲಿ ವ್ಯವಸ್ಥೆ ಇದೆ.
ನಮ್ಮ ಆಂತರಿಕ ವ್ಯವಸ್ಥೆಯಲ್ಲಿ ಎಲ್ಲವನ್ನು ಸರಿ ಮಾಡಿಕೊಳ್ಳುತ್ತೇವೆ. ಜನರಿಗೆ ಒಂದು ಒಳ್ಳೆಯ ಸರ್ಕಾರ ಕೊಡುವ ಕೆಲಸ ಮಾಡುತ್ತೇವೆ ಎಂದರು.
![anand singh](https://etvbharatimages.akamaized.net/etvbharat/prod-images/kn-bng-01-minister-sunil-kumar-on-anand-singh-revolt-rajkumar-ambareesh-burial-place-visit-ka10032_11082021154637_1108f_1628676997_460.jpg)
ರಾಜ್‌ಕುಮಾರ್ ಮತ್ತು ಅಂಬರೀಶ್ ಸಮಾಧಿಗೆ ನಮನ : ಸಚಿವ ಸುನಿಲ್‌ಕುಮಾರ್ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಇವತ್ತು ರಾಜ್‌ಕುಮಾರ್ ಮತ್ತು ಅಂಬರೀಶ್ ಸಮಾಧಿಗೆ ನಮನ ಸಲ್ಲಿಸಿದ್ದೇನೆ. ಈ ಇಲಾಖೆ ಸಿಎಂ ನನಗೆ ಕೊಟ್ಟಿರುವುದು ನನ್ನ ಸುದೈವ ಎಂದು ಭಾವಿಸುತ್ತೇನೆ ಎಂದರು.
ಕನ್ನಡದ ಕೆಲಸ ಮಾಡಲು ಇನ್ನಷ್ಟು ಶಕ್ತಿ ಬೇಕು ಎಂದು ಮೇರು ನಟರ ಆಶೀರ್ವಾದ ಪಡೆದಿದ್ದೇನೆ. ನನ್ನ ಅಧಿಕಾರದ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡುವ ಪ್ರಯತ್ನ ಮಾಡುತ್ತೇನೆ. ಕನ್ನಡ ಭಾಷೆ, ಕನ್ನಡ ಸಂಸ್ಕೃತಿ ವಿಚಾರದಲ್ಲಿ ಹೊಸ ವಿಚಾರಗಳು ಮೂಡಿ ಬರುವಂತೆ ಕೆಲಸ ಮಾಡ್ತೀನಿ ಎಂದು ಸಚಿವ ಸುನಿಲ್‌ಕುಮಾರ್ ಹೇಳಿದರು.