ಬೆಂಗಳೂರು : ರಾಜ್ಯದಲ್ಲಿ 2 ರಿಂದ 18 ವರ್ಷ ಒಳಗಿನ ಸುಮಾರು 1.5 ಕೋಟಿ ಮಕ್ಕಳಿದ್ದಾರೆ ಎಂದು ಅಂದಾಜಿಸಲಾಗಿದೆ. ಹಾಗಾಗಿ, ಮಕ್ಕಳಿಗೆ ಲಸಿಕೆ ನೀಡಲು ಸುಮಾರು 3 ಕೋಟಿ ಡೋಸ್ ಲಸಿಕೆ ಅವಶ್ಯಕತೆ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದರು.
ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಫಿಸಿಟಾಲ್ ಸೆಂಟರ್ ಆಫ್ ಅಕಾಡೆಮಿಕ್ಸ್ಗೆ ಚಾಲನೆ ನೀಡಿ ಅವರು ಮಾತನಾಡಿದರು. ಆವಿಷ್ಕಾರ, ಸಂಶೋಧನೆಗಳಿಂದಲೇ ಪ್ರಗತಿ ಸಾಧ್ಯವಾಗಿದೆ. ಇದಕ್ಕಾಗಿ ಪ್ರತಿ ವಿಶ್ವವಿದ್ಯಾಲಯಗಳು ಸಂಶೋಧನಾ ಚಟುವಟಿಕೆಗೆ ಆದ್ಯತೆ ನೀಡಬೇಕು ಎಂದರು.
ಖಾಸಗಿ ವೈದ್ಯಕೀಯ ಕಾಲೇಜುಗಳು ಬಹಳಷ್ಟಿವೆ. ಆದರೆ, ಚಿಕಿತ್ಸೆ, ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಕೋವಿಡ್ ಲಸಿಕೆಯನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಆವಿಷ್ಕಾರ ಮಾಡಿದೆ. ಅದೇ ರೀತಿ ನಮ್ಮಲ್ಲೂ ವಿಶ್ವವಿದ್ಯಾಲಯಗಳು ಸಂಶೋಧನೆಗೆ ಆದ್ಯತೆ ನೀಡಬೇಕು.
ಹಾಗೆಯೇ, ಯುವಜನರು ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕು. ಅನೇಕ ಯುವಜನರು ವೈದ್ಯರಾಗಬೇಕೆಂದು ಮುಂದೆ ಬರುತ್ತಾರೆ. ಆದರೆ, ಎಷ್ಟು ಜನರು ಸಂಶೋಧಕರಾಗಲು ಮುಂದೆ ಬರುತ್ತಾರೆ ಎಂದು ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪ್ರತಿ ರಾಜ್ಯದಲ್ಲಿ ಏಮ್ಸ್ ನಿರ್ಮಿಸಲು ಕ್ರಮವಹಿಸಿದೆ. ಪ್ರತಿ ಜಿಲ್ಲೆಯಲ್ಲಿ ಉತ್ತಮ ಆರೋಗ್ಯ ಸೌಲಭ್ಯ ಒದಗಿಸಬೇಕು. ಇದಕ್ಕಾಗಿ ರಾಜ್ಯದ ನಾಲ್ಕು ಕಡೆಗಳಲ್ಲಿ ಮೆಡಿಕಲ್ ಕಾಲೇಜುಗಳು ಶೀಘ್ರ ಆರಂಭವಾಗಿವೆ. ಇತ್ತೀಚೆಗೆ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜು ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರತಿ ಜಿಲ್ಲೆಗಳಲ್ಲಿ ಹೃದಯ ಸಂಬಂಧಿ ಆರೋಗ್ಯ ಸೌಲಭ್ಯಗಳನ್ನು ನೀಡಬೇಕಿದೆ. ಜಯದೇವ ಆಸ್ಪತ್ರೆ ಯಾವುದೇ ಕಾರ್ಪೊರೇಟ್ ಸಂಸ್ಥೆಗೆ ಕಡಿಮೆ ಇಲ್ಲದಂತೆ ಬೆಳೆದಿದೆ. ಈ ಆಸ್ಪತ್ರೆಯಲ್ಲಿ ಸದಾ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುತ್ತದೆ. ಅದೇ ರೀತಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಏಕೆ ಬೆಳೆಯುವುದಿಲ್ಲ? ಎಂದು ಚಿಂತಿಸಬೇಕಿದೆ. ಪ್ರತಿ ವೈದ್ಯರು, ಆಡಳಿತ ಮಂಡಳಿ ಇದನ್ನು ಮಾದರಿಯಾಗಿಸಿ ಬದ್ಧತೆ, ಜವಾಬ್ದಾರಿ ವಹಿಸಿಕೊಂಡು ಆಸ್ಪತ್ರೆಯನ್ನು ಅಭಿವೃದ್ಧಿ ಮಾಡಬೇಕು ಎಂದು ಹೇಳಿದರು.
ಮಕ್ಕಳ ಲಸಿಕೆ : ಮಕ್ಕಳ ಲಸಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಕೊವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೆ ತುರ್ತು ಪರಿಸ್ಥಿತಿಯಲ್ಲಿ ನೀಡಲು ಅನುಮೋದನೆ ದೊರೆತಿದೆ. 2 ರಿಂದ 18 ವರ್ಷದ ಮಕ್ಕಳಿಗೆ ನೀಡಲು ಅನುಮತಿ ದೊರತಿದೆ. ಪೋಷಕರೆಲ್ಲರು ಬಹಳ ಕಾತರದಿಂದ ಕಾಯುತ್ತಿರುವುದರಿಂದ ಇದು ಬಹಳ ಸಂತಸದ ಸಂಗತಿ ಎಂದರು.
ಇದರ ಪೂರೈಕೆ ಬಗ್ಗೆ ಕೇಂದ್ರ ಸಚಿವಾಲಯದೊಂದಿಗೆ ಚರ್ಚೆ ಮಾಡಿ ಮಾಹಿತಿ ಪಡೆದುಕೊಳ್ಳುತ್ತೇನೆ. ಜೈಡಸ್ ಎಂಬ ಭಾರತೀಯ ಸಂಸ್ಥೆ ವಿಶ್ವದಲ್ಲೇ ಮೊದಲ ಡಿಎನ್ಎ ಲಸಿಕೆ ಸಂಶೋಧನೆ ಮಾಡಿರುವುದು ಸಹ ಹೆಗ್ಗಳಿಕೆಯ ವಿಷಯ.
ಇಂಡಿಯಾ ಟುಡೆ ಸಂಸ್ಥೆ ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಲು ಬಂದಿದ್ದ ಭಾರತ್ ಬಯೋಟೆಕ್ ಸಂಸ್ಥೆಯ ಕೃಷ್ಣಾ ಎಲ್ಲಾ ಅವರನ್ನು ಭೇಟಿ ಮಾಡುವ ಅವಕಾಶ ದೊರೆಯಿತು.
ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿ ಪಡಿಸುತ್ತಿರುವ ಮೂಗಿಗೆ ಹಾಕುವ ನೇಸಲ್ ವ್ಯಾಕ್ಸಿನ್ ಕೂಡ ಅಂತಿಮ ಹಂತದಲ್ಲಿದೆ. ಇದಕ್ಕೆ ಅನುಮತಿ ದೊರೆತರೆ ಇನ್ನಷ್ಟು ಶೀಘ್ರವಾಗಿ ಲಸಿಕೆ ಹಾಕಬಹುದು. ನೇಸಲ್ ವ್ಯಾಕ್ಸಿನ್ಗೆ ನುರಿತ ಆರೋಗ್ಯ ಸಿಬ್ಬಂದಿ ಅವಶ್ಯಕತೆ ಇಲ್ಲದಿರುವುದರಿಂದ ಹೆಚ್ಚು ವೇಗವಾಗಿ ಲಸಿಕೆ ವಿತರಿಸಬಹುದು ಎಂದು ಅಭಿಪ್ರಾಯಪಟ್ಟರು.
ಓದಿ: ಏರ್ಪೋರ್ಟ್ ಆವರಣದಲ್ಲಿ ಒಳ್ಳೇ ಒಳ ಚರಂಡಿ ವ್ಯವಸ್ಥೆ ಇದೆ, ಭಾರಿ ಮಳೆಯಿಂದ ನೀರು ನಿಂತಿದೆ ಅಷ್ಟೇ .. ಸಿ ಶ್ರೀನಿವಾಸ್