ಬೆಂಗಳೂರು: ರಾಜ್ಯದಲ್ಲಿ ಇನ್ನೇನು ಕೊರೊನಾಗೆ ಮುಕ್ತಿ ಸಿಕ್ತು, ಸೋಂಕಿತರ ಸಂಖ್ಯೆ ಕಡಿಮೆ ಆಯ್ತು ಎನ್ನುವಾಗಲೇ ಯುಕೆ ಪ್ರಯಾಣಿಕರು ಮತ್ತೊಂದು ಕೊರೊನಾ ಬಾಂಬ್ ಸಿಡಿಸಿದ್ದಾರೆ.
ಕೊರೊನಾ ರೂಪಾಂತರ ತಳಿ ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ಯಾ ಅನ್ನೋ ಸುದ್ದಿ ಇನ್ನೂ ಹಾಗೇ ಇದೆ. ಕೇಂದ್ರದಿಂದ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ. ಆದರೆ ಇದ್ಯಾವುದು ಈಗ ಸರ್ಕಾರಕ್ಕೆ ಕಷ್ಟವಾಗಿಲ್ಲ, ಬದಲಿಗೆ ಯುಕೆ ಯಿಂದ ಬಂದ ಹಲವು ಪ್ರಯಾಣಿಕರು ತಮ್ಮ ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡು ನಾಪತ್ತೆ ಆಗಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಪ್ರಯಾಣಿಕರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದೇ, ತಲೆಮರೆಸಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಸುಧಾಕರ್, ಈಗಾಗಲೇ ಮಿಸ್ ಆಗಿರುವವರು ಸಿಕ್ಕಿಲ್ಲ. ಯುಕೆಯಿಂದ ಬಂದವರು ಸರ್ಕಾರದ ಜೊತೆ ಸಹಕರಿಸಬೇಕು. ಜವಾಬ್ದಾರಿಯುತ ನಾಗರಿಕರು ಪರೀಕ್ಷೆ ಮಾಡಿಸಿಕೊಳ್ಳಬೇಕು. ಗೃಹ ಸಚಿವರ ಜೊತೆ ಮಾತನಾಡಿ ಇವರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಕ್ಯಾಬಿನೆಟ್ ಬಳಿಕ ಶಾಲಾರಂಭದ ಬಗ್ಗೆ ಮತ್ತೊಂದು ಸಭೆ
ಶಾಲೆಗಳ ರೀ ಓಪನ್ ವಿಚಾರವಾಗಿ ಮಾತಾಡಿರುವ ಸಚಿವರು, ಸಚಿವ ಸಂಪುಟ ಸಭೆ ಇದ್ದು ಅದು ಮುಗಿಸಿ ಗೃಹ ಸಚಿವರ ಜೊತೆ ಮಾತನಾಡುತ್ತೇವೆ. ಶಾಲೆ ತೆರೆಯುವ ಬಗ್ಗೆ ಸಚಿವ ಸುರೇಶ್ ಕುಮಾರ್ ಅವರೊಟ್ಟಿಗೂ ಮಾತನಾಡುತ್ತೇವೆ. ಈಗ ಸೋಂಕು ಕಡಿಮೆ ಇದ್ದು, ಶಾಲೆ ಆರಂಭಕ್ಕೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.
ಯುಕೆಯಿಂದ ಬಂದಿರುವ 26 ಮಂದಿಗೆ ಕೊರೊನಾ ಬಂದಿದ್ದು, ಅವರನ್ನೆಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಅವರೆಲ್ಲರೂ ಆರೋಗ್ಯವಾಗಿದ್ದಾರೆ. ಎಲ್ಲರಿಗೂ ರೋಗದ ಲಕ್ಷಣ ಇದ್ದು, ಗಂಭೀರವಾಗಿಲ್ಲ. ಈಗಾಗಲೇ ಸ್ಯಾಂಪಲ್ಸ್ ನೀಡಿದ್ದು, ಅದರ ವರದಿ ನಿಮ್ಹಾನ್ಸ್ನಿಂದ ICMR ಗೆ ಕಳಿಸಿಕೊಡಲಾಗಿದೆ. ಇದು ತುಂಬಾ ಸೂಕ್ಷ್ಮ ವಿಚಾರ, ದೆಹಲಿಯಿಂದಲೇ ಅವರು ಪ್ರಕಟಿಸುತ್ತಾರೆ. ನಾನು ಕೂಡಾ ICMR ಜೊತೆ ಮಾತನಾಡುತ್ತೇನೆ ಎಂದರು.
ನ್ಯೂ ಇಯರ್‌ಗೆ ಬೀಳುತ್ತಾ ಬ್ರೇಕ್..?
ಇಂದು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ಇದ್ದು, ಆ ವಿಚಾರವನ್ನೇ ಚರ್ಚಿಸುತ್ತಿದ್ದೇವೆ. ಬಳಿಕ ಗೃಹ ಸಚಿವರ ಜೊತೆ ಮಾತನಾಡುತ್ತೇವೆ. ಆ ಬಳಿಕ ಹೊಸ ರೂಲ್ಸ್ ಜಾರಿಗೆ ತರಲಾಗುವುದು ಎಂದರು.