ಬೆಂಗಳೂರು: ಸಚಿವರಾಗುತ್ತಿದ್ದಂತೆ ಚಿಕ್ಕಬಳ್ಳಾಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿಸಿಕೊಂಡಿದ್ದ ಸಚಿವ ಸುಧಾಕರ್ ಇದೀಗ ತವರು ಜಿಲ್ಲೆಯನ್ನು ಕೈಗಾರಿಕಾ ಹಬ್ ಆಗಿ ಪರಿವರ್ತನೆ ಮಾಡಲು ಯತ್ನಿಸುತ್ತಿದ್ದಾರೆ ಇದಕ್ಕಾಗಿ ಕೇಂದ್ರ ಸರ್ಕಾರದ ಬಾಗಿಲನ್ನೂ ತಟ್ಟಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಭೇಟಿ ಮಾಡಿದರು.
ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲೇ ಇರುವ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಕೈಗಾರಿಕಾ ಹಬ್ ಆಗಿ ಬೆಳೆಸಬೇಕು ಎಂದು ಮನವಿ ಪತ್ರ ಸಲ್ಲಿಸಿದ್ದಾರೆ.
ಬೆಂಗಳೂರು ನಗರ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿರುವ ಈ ಜಿಲ್ಲೆ, ಹೆಚ್ಚು ಕೈಗಾರಿಕಾಭಿವೃದ್ಧಿಯನ್ನು ಕಂಡಿಲ್ಲ. ಈ ಜಿಲ್ಲೆ ಎರಡು ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಬಂದರು ನಗರಗಳಾದ ಚೆನ್ನೈ ಹಾಗೂ ಮಂಗಳೂರಿಗೆ ಸಂಪರ್ಕ ಕಲ್ಪಿಸುತ್ತದೆ. ಜಿಲ್ಲೆಯ ಗಡಿಭಾಗಕ್ಕೆ 10 ಕಿ.ಮೀ. ದೂರದಲ್ಲೇ ವಿಮಾನ ನಿಲ್ದಾಣವಿದೆ. ಹಾಗೆಯೇ ರೈಲು ಸಂಪರ್ಕವನ್ನೂ ಹೊಂದಿದೆ. ಉದ್ಯಮಗಳಲ್ಲಿ ದುಡಿಯುವ ಪ್ರತಿಭಾವಂತರು ಚಿಕ್ಕಬಳ್ಳಾಪುರದಲ್ಲಿದ್ದು, ಬೆಂಗಳೂರಿನಲ್ಲಿರುವ ಉದ್ಯಮಗಳಲ್ಲಿ ಕೆಲಸ ಮಾಡಲು ತೆರಳುತ್ತಿದ್ದಾರೆ. ಭೂಮಿ, ಎತ್ತಿನಹೊಳೆ ಮೂಲಕ ಸಿಗುವ ನೀರು ಮೊದಲಾದ ನೈಸರ್ಗಿಕ ಸಂಪನ್ಮೂಲಗಳನ್ನು ಜಿಲ್ಲೆ ಹೊಂದಿದೆ. ಜಿಲ್ಲೆಯಲ್ಲಿ ಕೈಗಾರಿಕಾ ಹಬ್ ನಿರ್ಮಾಣದಿಂದ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗಲಿದೆ. ಜೊತೆಗೆ ಮಾಲಿನ್ಯ, ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ ಎಂದು ಸಚಿವರು ಪತ್ರದಲ್ಲಿ ವಿವರಿಸಿ ಕೈಗಾರಿಕಾ ಹಬ್ ಆಗಿ ಬೆಳೆಯಲು ಪೂರಕ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಮೆಟ್ರೊ, ಉಪನಗರ ರೈಲು:
ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿದ ವೇಳೆ, ಮೆಟ್ರೊ ಹಾಗೂ ಉಪನಗರ ರೈಲು ಯೋಜನೆಗಳ ಮಾರ್ಗಗಳನ್ನು ಚಿಕ್ಕಬಳ್ಳಾಪುರವರೆಗೆ ವಿಸ್ತರಣೆ ಮಾಡಬೇಕೆಂದು ಸಚಿವ ಡಾ.ಕೆ.ಸುಧಾಕರ್ ಕೋರಿದ್ದಾರೆ.
ಎತ್ತಿನಹೊಳೆಗೆ ರಾಷ್ಟ್ರೀಯ ಸ್ಥಾನಮಾನ:
ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರೊದಗಿಸುವ ಎತ್ತಿನಹೊಳೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಸ್ಥಾನಮಾನ ನೀಡುವಂತೆ ಸಚಿವ ಸುಧಾಕರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಸಚಿವ ಡಾ.ಕೆ.ಸುಧಾಕರ್ ಭೇಟಿ ಮಾಡಿದ ಸುಧಾಕರ್, ಈ ಸಂಬಂಧ ಮನವಿ ಪತ್ರ ಸಲ್ಲಿಸಿದರು. ಅಲ್ಲದೆ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳ ಹೂಳೆತ್ತಲು ವಿಶೇಷ ಯೋಜನೆ ರೂಪಿಸಬೇಕು. ಕೃಷ್ಣಾ ನದಿ ನೀರನ್ನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಿಂದ ಕರ್ನಾಟಕದ ಗಡಿ ಜಿಲ್ಲೆಗಳಿಗೆ ಹಂಚಿಕೆ ವಿಸ್ತರಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಬೈಪಾಸ್ ನಿರ್ಮಾಣಕ್ಕೆ ಮನವಿ:
ರಾಷ್ಟ್ರೀಯ ಹೆದ್ದಾರಿ-234 ನಲ್ಲಿ ಚಿಕ್ಕಬಳ್ಳಾಪುರ-ಚಿಂತಾಮಣಿ ಬೈಪಾಸ್ ನಿರ್ಮಾಣ ಕುರಿತು ಸಚಿವ ಡಾ.ಕೆ.ಸುಧಾಕರ್ ಅವರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದರು.
ಈ ಯೋಜನೆ ಕುರಿತ ಡಿಪಿಆರ್ ಅನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಲ್ಲಿಸಿದ್ದು, ಇದು ಚಿಕ್ಕಬಳ್ಳಾಪುರದ ಸಂಚಾರ ದಟ್ಟಣೆ ನಿವಾರಿಸಲಿದೆ. ಕೃಷಿ ಹಾಗೂ ಕೈಗಾರಿಕಾ ಸಂಬಂಧಿತ ಉತ್ಪನ್ನಗಳನ್ನು ಸಾಗಿಸಲು ಇದು ನೆರವಾಗಲಿದೆ. ಮುಖ್ಯವಾಗಿ ತರಕಾರಿ, ಹೂವು, ಹಣ್ಣು ಮೊದಲಾದ ಕೃಷಿ ಆಧಾರಿತ ಕೈಗಾರಿಕೆಗೆ ಇದು ಹೆಚ್ಚು ಅನುಕೂಲವಾಗಲಿದೆ. ಈ ಬೈಪಾಸ್, ಎನ್‍ಎಚ್-234 ನಲ್ಲಿ 395 ಕಿ.ಮೀ. ನಿಂದ ಆರಂಭವಾಗಿ 407 ಕಿ.ಮೀ.ಗೆ ಮುಕ್ತಾಯಗೊಳ್ಳಲಿದೆ. ಒಟ್ಟು 12.756 ಕಿ.ಮೀ. ಉದ್ದದ ರಸ್ತೆಯ ಈ ಯೋಜನೆ ಇದಾಗಿದೆ. ಚಿಂತಾಮಣಿ ಬೈಪಾಸ್ 428 ಕಿ.ಮೀ. ನಿಂದ ಆರಂಭವಾಗಿ 442 ಕಿ.ಮೀ.ಗೆ ಮುಕ್ತಾಯಗೊಳ್ಳಲಿದೆ. ಇದು ಒಟ್ಟು 14.370 ಕಿ.ಮೀ. ಉದ್ದದ ರಸ್ತೆಯ ಯೋಜನೆಯಾಗಿದೆ ಎಂದು ಸಚಿವರು ಮನವಿ ಪತ್ರದಲ್ಲಿ ವಿವರಿಸಿದ್ದು,ಡಿಪಿಆರ್ ಅನ್ನು ಶೀಘ್ರ ಪರಿಗಣಿಸಿ ಅಗತ್ಯ ಕ್ರಮಗಳನ್ನು ವಹಿಸಬೇಕೆಂದು ಸಚಿವರು ಕೋರಿದ್ದಾರೆ.
ನಂದಿ ಬೆಟ್ಟ ರಸ್ತೆ ವಿಸ್ತರಣೆ:
ನಂದಿ ಬೆಟ್ಟ ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಪ್ರಮುಖ ಆತಿಥ್ಯ ಕ್ಷೇತ್ರವಾಗಿ ಬೆಳೆಯುತ್ತಿದೆ. ಆದರೆ ನಂದಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಿರಿದಾಗಿದೆ. ಆದ್ದರಿಂದ ಎನ್‍ಎಚ್-7 ಹಾಗೂ ನಂದಿ ಬೆಟ್ಟ ಸಂಪರ್ಕಿಸುವ ರಸ್ತೆಯನ್ನು ನಾಲ್ಕು ಪಥಗಳ ರಸ್ತೆಯಾಗಿ ವಿಸ್ತರಣೆ ಮಾಡುವಂತೆ ಸಚಿವ ಡಾ.ಕೆ.ಸುಧಾಕರ್ ಮನವಿ ಸಲ್ಲಿಸಿದ್ದಾರೆ.