ಬೆಂಗಳೂರು: ರಾಜ್ಯದಲ್ಲಿರುವ ಪ್ರಾಥಮಿಕ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ 1246 ಸಾಮಾನ್ಯ ವೈದ್ಯರು ಹಾಗೂ 824 ತಜ್ಞ ವೈದ್ಯರನ್ನು ಒಂದೆರಡು ತಿಂಗಳೊಳಗೆ ನೇರ ನೇಮಕಾತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ.ಸುಧಾಕರ್ ವಿಧಾನಸಭೆಯಲ್ಲಿ ಇಂದು ತಿಳಿಸಿದ್ದಾರೆ.
ಓದಿ: ನಮ್ಮ ದೇಶದ ಬಗ್ಗೆ ಮೂಗು ತೂರಿಸಲು ರಿಹಾನ್ನಾಗೆ ಹಕ್ಕಿಲ್ಲ: ಎಂಎಲ್ಸಿ ರವಿ ಕುಮಾರ್
ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಶಾಸಕ ನರೇಂದ್ರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ, ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಹುದ್ದೆಗಳು ಖಾಲಿಯಿವೆ. ಹಾಗಾಗಿ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 9850 ಕಿರಿಯ ಆರೋಗ್ಯ ಸಹಾಯಕರ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ ಖಾಲಿ ಇದ್ದ 224 ಹುದ್ದೆಗಳನ್ನು 2018ರ ಸಾಲಿನಲ್ಲಿ ವಿಶೇಷ ನೇಮಕಾತಿಯಡಿ ಭರ್ತಿ ಮಾಡಿಕೊಳ್ಳಲಾಗಿದೆ. ಒಟ್ಟು 7123 ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದರಲ್ಲಿ 2727 ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದರು.
ಆ್ಯಂಬುಲೆನ್ಸ್ಗಳಲ್ಲಿ 12 ಸೇವೆ:
ಇನ್ನು ಮುಂದೆ ಆ್ಯಂಬುಲೆನ್ಸ್ಗಳಲ್ಲಿ 12 ಸೇವೆಗಳನ್ನು ಸಮರ್ಪಕ ಮತ್ತು ಉತ್ಕೃಷ್ಟ ಸೇವೆ ನೀಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ಎರಡು-ಮೂರು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದರು. ಕಳೆದ 10 ವರ್ಷಗಳಿಂದ ಆ್ಯಂಬುಲೆನ್ಸ್ ನೀಡುತ್ತಿರುವ ಸೇವೆಯಿಂದ ನಾವು ಸಾಕಷ್ಟು ಪಾಠ ಕಲಿತಿದ್ದೇವೆ. ಮುಂದಿನ ದಿನಗಳಲ್ಲಿ ಆ್ಯಂಬುಲೆನ್ಸ್ಗಳಲ್ಲಿ 12 ಸೇವೆಗಳನ್ನು ನೀಡಲಾಗುವುದು ಎಂದರು.
ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉತ್ತಮವಾದ ಸೇವೆ ನೀಡಲು ವೈದ್ಯರಿಗೆ ಸೂಚಿಸಲಾಗಿದೆ. ಪ್ರಸ್ತುತ ಒಂದು ಲಕ್ಷ ಜನಸಂಖ್ಯೆ ಇರುವ ತಾಲೂಕುಗಳಲ್ಲಿ ಒಂದು ಆ್ಯಂಬುಲೆನ್ಸ್ ಇದೆ. ಇನ್ನು ಮುಂದೆ 30ರಿಂದ 35 ಸಾವಿರ ಜನರಿಗೆ ಒಂದು ಆ್ಯಂಬುಲೆನ್ಸ್ ನೀಡಲಾಗುವುದು ಎಂದು ತಿಳಿಸಿದರು.
ಮಲೆಮಹೇಶ್ವರ ಬೆಟ್ಟದಲ್ಲಿ 30 ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಸಿಎಂ ಒಪ್ಪಿಗೆ ಕೊಟ್ಟಿದ್ದಾರೆ. ಈ ವರ್ಷದ ಅಂತ್ಯದೊಳಗೆ ಇಲ್ಲಿ ಹೊಸ ಆಸ್ಪತ್ರೆ ತಲೆ ಎತ್ತಲಿದೆ ಎಂದರು.
ಹೊಸದಾಗಿ ರಚನೆಯಾಗಿರುವ 49 ತಾಲೂಕುಗಳಲ್ಲಿ ಹೊಸ ಕಟ್ಟಡಗಳ ಮೂಲಕ ನಾವು ಆರೋಗ್ಯ ಕೇಂದ್ರಗಳನ್ನು ನಿರ್ಮಿಸಬೇಕು. ಈಗಾಗಲೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಿದ್ದೇವೆ. ಮುಖ್ಯಮಂತ್ರಿ ಕೂಡ ಆರೋಗ್ಯ ಮತ್ತು ಶಿಕ್ಷಣಕ್ಕೆ ವಿಶೇಷ ಒತ್ತು ಕೊಡಬೇಕೆಂದು ಸೂಚಿಸಿದ್ದಾರೆ.
ಹನೂರು ತಾಲೂಕಿನಲ್ಲಿರುವ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಆರ್ಥಿಕ ನಿರ್ಬಂಧ ಇರುವುದರಿಂದ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಪರಿವರ್ತಿಸುವ ಪ್ರಸ್ತಾವನೆಯನ್ನು ತಡೆ ಹಿಡಿಯಲಾಗಿದೆ. ಎಲ್ಲೆಲ್ಲಿ ಸಿಬ್ಬಂದಿ ಕೊರತೆ ಇದೆಯೋ ಆದಷ್ಟು ಶೀಘ್ರ ಭರ್ತಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಬಾಕಿ ವೇತನ ಶೀಘ್ರದಲ್ಲೇ ಬಿಡುಗಡೆ:
ಆರೋಗ್ಯ ಬಂಧು ಯೋಜನೆಯಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‍ಜಿಒಗಳಿಗೆ ತಡೆ ಹಿಡಿದಿರುವ ಬಾಕಿ ವೇತನವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ. ಸುಧಾಕರ್, ಪ್ರಶ್ನೋತ್ತರ ವೇಳೆ ಶಾಸಕ ನಾಗೇಶ್ ಬಿ.ಸಿ. ಅವರ ಪ್ರಶ್ನೆಗೆ ಉತ್ತರಿಸಿದರು.
ಕಳೆದ ಮೇ ತಿಂಗಳಿನಿಂದ ಇಲ್ಲಿಯವರೆಗೂ ಆರೋಗ್ಯ ಬಂಧು ಯೋಜನೆಯಡಿ ಕಳೆದ ಮೇ ತಿಂಗಳಿನಿಂದ ಈವರೆಗೂ ರಾಜ್ಯದ ಒಟ್ಟು 49 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎನ್‍ಜಿಒಗಳು ಕಾರ್ಯನಿರ್ವಹಿಸುತ್ತಿವೆ. ಈವರೆಗೆ 42 ಕೇಂದ್ರಗಳಲ್ಲಿ ಎನ್‍ಜಿಒಗಳಿಗಾಗಿ 2602.67 ಲಕ್ಷ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ರಾಷ್ಟ್ರೀಯ ಹೆದಾರಿಗಳಲ್ಲಿ 15 ಕಿ.ಮೀ. ದೂರ ಇರುವ ಆರೋಗ್ಯ ಕೇಂದ್ರಗಳಲ್ಲಿ ಇವರು ಕಾರ್ಯನಿರ್ವಹಿಸುತ್ತಾರೆ. ಎನ್‍ಜಿಒಗಳಿಗೆ ವೇತನದ ಜವಾಬ್ದಾರಿಯನ್ನ ಜಿಪಂ ಮುಖ್ಯಸ್ಥರಿಗೆ ನೀಡಲಾಗುತ್ತದೆ. ಆದರೆ ಕಳೆದ ಹಲವು ತಿಂಗಳಿನಿಂದ ವೇತನ ಬಿಡುಗಡೆಯಾಗದಿರುವುದು ನನ್ನ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಜಿಪಂ ಸಿಇಒ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜೊತೆ ಚರ್ಚಿಸಲಾಗುವುದು. ಕಾಲಮಿತಿಯೊಳಗೆ ವೇತನವನ್ನು ಬಿಡುಗಡೆ ಮಾಡುವ ಭರವಸೆ ನೀಡಿದರು.