ಬೆಂಗಳೂರು: ಪಾದರಾಯನಪುರ ಗಲಾಟೆ ವಿಚಾರದಲ್ಲಿ ನಾನು ಕೆಲವೊಂದು ಸಲಹೆ ನೀಡಿದ್ದೇನೆ ಅಷ್ಟೆ. ಸಂಪುಟ ಸಭೆಯಲ್ಲಿ ನನ್ನ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ನಡುವೆ ಯಾವುದೇ ಜಟಾಪಟಿ ನಡೆದಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆದರು. ನಾನು ಬೆಂಗಳೂರಲ್ಲಿ ಸುಮಾರು 40 ವರ್ಷದಿಂದ ರಾಜಕಾರಣ ಮಾಡುತ್ತಿದ್ದೇನೆ. ದೇವರಾಜ ಅರಸು ಅವರಿಂದ ಹಿಡಿದು, ಹೆಚ್.ಡಿ.ದೇವೇಗೌಡ, ಜೆ.ಹೆಚ್.ಪಟೇಲ್, ರಾಮಕೃಷ್ಣ ಹೆಗಡೆ ಮತ್ತಿತರ ಹಿರಿಯ ನಾಯಕರ ಜೊತೆ ಕೆಲಸ ಮಾಡಿದ್ದೇನೆ. ಈಗಿರುವ ನಾಯಕರೆಲ್ಲಾ ರಾಜಕಾರಣದಲ್ಲಿ ನನಗಿಂತ ಚಿಕ್ಕವರು ಎಂದರು.
ಇನ್ನು ಪಾದರಾಯನಪುರ ಈ ಹಿಂದೆ ನನ್ನ ಕ್ಷೇತ್ರದ (ವಿಜಯನಗರ) ವ್ಯಾಪ್ತಿಗೆ ಒಳಪಟ್ಟಿತ್ತು. ಈ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದು ಬಂದಿದ್ದೆ. ಹೀಗಾಗಿ ಗೃಹ ಸಚಿವರಿಗೆ ಕೆಲ ವಿಚಾರಗಳನ್ನು ಹೇಳಬೇಕಿತ್ತು, ಹೇಳಿದ್ದೇನೆ ಅಷ್ಟೇ. ಅದು ಬಿಟ್ಟು ಯಾವುದೇ ಜಟಾಪಟಿಗೆ ಆಸ್ಪದ ಇಲ್ಲ ಎಂದು ಹೇಳಿದರು.
ಪಾದರಾಯನಪುರ ಘಟನೆ ನಿರ್ವಹಣೆ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವೈಫಲ್ಯದ ಬಗ್ಗೆ ಹೈಕಮಾಂಡ್ಗೆ ದೂರು ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯಡಿಯೂರಪ್ಪನವರು ಈ ವಿಚಾರದಲ್ಲಿ ಸಮರ್ಥವಾಗಿ ನಡೆದುಕೊಳ್ಳುತ್ತಿದ್ದಾರೆ. ಆದರೆ, ಶಾಸಕ ಜಮೀರ್ ಅಹ್ಮದ್ ಹುಡುಗಾಟ ನಿಲ್ಲಿಸಬೇಕು. ಅವರು ಕೂಡ ಜವಾಬ್ದಾರಿಯುತ ವ್ಯಕ್ತಿ. ಹೀಗಾಗಿ ಹುಡುಗಾಟ ನಿಲ್ಲಿಸಿದರೆ ಒಳ್ಳೆಯದು ಎಂದರು.
ಪಾದರಾಯನಪುರದಲ್ಲಿ ಗಲಾಟೆಯಾದ ಬಳಿಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಆದರೆ, ತಮಗೆ ತಿಳಿಸದೆ ಬೊಮ್ಮಾಯಿ ಅವರು ಸ್ಥಳಕ್ಕೆ ತೆರಳಿದ್ದಕ್ಕೆ ಸಚಿವ ಸೋಮಣ್ಣ ಗರಂ ಆಗಿದ್ದರು. ಇಬ್ಬರ ನಡುವೆ ವಾಗ್ವಾದ ನಡೆದಿತ್ತು ಎಂಬುದಾಗಿ ವರದಿಯಾಗಿತ್ತು.