ಬೆಂಗಳೂರು: ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆ ಎ.ಹೆಚ್.ಬಿ ಘಟಕದಡಿ ನಿರ್ಮಿಸಲಾಗುತ್ತಿರುವ ಮನೆಗಳಿಗೆ ಹಾಗೂ ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳಿಗೆ ಜನವರಿ 15 ರೊಳಗೆ ಸಾಲ ಮಂಜೂರಾತಿ ಮಾಡುವಂತೆ ವಿವಿಧ ಬ್ಯಾಂಕುಗಳ ಮುಖ್ಯಾಧಿಕಾರಿಗಳಿಗೆ ವಸತಿ ಸಚಿವ ವಿ.ಸೋಮಣ್ಣ ಸೂಚಿಸಿದ್ದಾರೆ.
ವಿಧಾನಸೌಧದಲ್ಲಿ ವಸತಿ ಸಚಿವ ವಿ ಸೋಮಣ್ಣ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳ ವಂತಿಕೆಗೆ ಬ್ಯಾಂಕುಗಳಿಂದ ಸಾಲ ಸೌಲಭ್ಯ ಕಲ್ಪಿಸುವ ಬಗ್ಗೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿರ್ಮಿಸುವ ಪಿ.ಎಂ.ಎ.ವೈ, ಎ.ಹೆಚ್.ಪಿ ಮನೆಗಳಿಗೆ ನಗರ ಸ್ಥಳೀಯ ಸಂಸ್ಥೆಗಳಿಂದ ಅನುದಾನ ಬಿಡುಗಡೆ ಮಾಡುವ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸಚಿವ ಸೋಮಣ್ಣ ಸಾಲ ಮಂಜೂರಾತಿ ವಿಳಂಬ ವಿಚಾರ ಕುರಿತು ಬ್ಯಾಂಕ್ಗಳಿಗಿರುವ ಸಮಸ್ಯೆಯನ್ನು ಆಲಿಸಿದ ಸಚಿವರು ಶೀಘ್ರದಲ್ಲಿ ಲೋನ್ ವಿತರಣೆ ಮಾಡುವಂತೆ ಸೂಚನೆ ನೀಡಿದರು. ಬಡವರು ಮತ್ತು ಮಧ್ಯಮವರ್ಗದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮನೆಗಳನ್ನು ನಿರ್ಮಿಸಲಾಗಿದ್ದು, ಫಲಾನುಭವಿಗಳಿಗಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ಬದಿಗಿಟ್ಟು ಫ್ಲ್ಯಾಟ್ ಹಂಚಿಕೆ ಮಾಡಿರುವ ಆಧಾರದ ಮೇಲೆ ಸ್ಪೆಷಲ್ ಪ್ಲ್ಯಾನ್ ಅಡಿಯಲ್ಲಿ ಸಾಲ ಮಂಜೂರಾತಿ ಮಾಡುವಂತೆ ವಿವಿಧ ಬ್ಯಾಂಕ್ಗಳ ಮುಖ್ಯಸ್ಥರಿಗೆ ಸೂಚಿಸಿದರು.
ಜನವರಿ 15 ರೊಳಗೆ ಒಂದು ಲಕ್ಷ ಮನೆಗಳ ಫಲಾನುಭವಿಗಳಿಗೆ ಫಲಾನುಭವಿ ವಂತಿಕೆ ಆಧಾರದ ಮೇಲೆ ಸಾಲ ಮಂಜೂರಾತಿ ಮಾಡುವಂತೆ ಕೆನರಾ ಲೀಡ್ ಬ್ಯಾಂಕ್, ಎಸ್ಎಲ್ಬಿಸಿ, ಎಸ್ಬಿಐ, ಬ್ಯಾಂಕ್ ಆಫ್ ಬರೋಡಾ, ಐಡಿಬಿಐ ಸೇರಿದಂತೆ ವಿವಿಧ ಬ್ಯಾಂಕ್ಗಳ ಮುಖ್ಯಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
'ಸೂರಿಲ್ಲದವರಿಗೆ ಸೂರು' ಎಂಬ ಧ್ಯೇಯದಡಿ 2016-17 ಮತ್ತು 2017-2018 ರಲ್ಲಿ 'ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ'ಗೆ ಕೇಂದ್ರ ಸರ್ಕಾರದಿಂದ ಮೊದಲನೇ ಕಂತಿನ 600 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು, ಕಂದಾಯ ಇಲಾಖೆಯಿಂದ 553 ಎಕರೆ ಜಮೀನನ್ನು ನಿಗಮಕ್ಕೆ ಹಸ್ತಾಂತರಿಸಿಕೊಳ್ಳಲಾಗಿದೆ. ಬೆಂಗಳೂರಲ್ಲಿ ಸುಮಾರು 10 ಕಿಮೀ ದೂರದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಮೊದಲನೇ ಹಂತದಲ್ಲಿ ಈಗಾಗಲೇ 2,000 ಮನೆಗಳು ಪೂರ್ಣಗೊಂಡಿದ್ದು, 10,000 ಮನೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ. 2023 ಮಾರ್ಚ್ ತಿಂಗಳೊಳಗೆ 25,000 ಮನೆಗಳನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ಸುಸಜ್ಜಿತ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಮಧ್ಯಮವರ್ಗದ ಕುಟುಂಬವೊಂದು ವಾಸ ಮಾಡಲು ಅನುಕೂಲಕರವಾದ ವಾತಾವರಣ ಕಲ್ಪಿಸಲಾಗಿದೆ. ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಕಾಂಪೌಂಡ್, ಒಳರಸ್ತೆ, ಕುಡಿಯುವ ನೀರು, ಬೀದಿ ದೀಪ ಹಾಗೂ ಇತರೆ ವ್ಯವಸ್ಥಿತವಾದ ಸೌಲಭ್ಯಗಳನ್ನು ಒದಗಿಸಲಾಗಿದೆ. ಎಲ್ಲಾ ಮನೆಗಳಿಗೂ ಕಾವೇರಿ ನೀರು ಅಥವಾ ಬೋರ್ ವೆಲ್ ವ್ಯವಸ್ಥೆಯನ್ನು ಕಲ್ಪಿಸಿ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗಿದೆ.
ವಸತಿ ಇಲಾಖೆ ನಿರ್ಮಿಸುತ್ತಿರುವ ಮನೆಗಳನ್ನು ಬಡವರು, ಕೂಲಿ ಕಾರ್ಮಿಕರು, ಆಟೋ ಚಾಲಕರು, ಗಾರ್ಮೆಂಟ್ಸ್ ನೌಕರರು, ಬೀಡಿ ಕಟ್ಟುವವರು, ಬೀದಿ ಬದಿ ವ್ಯಾಪಾರಿಗಳು ಸಣ್ಣ ಸಣ್ಣ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು ಹಾಗೂ 3 ಲಕ್ಷ ಆದಾಯ ಇರುವವರು ಸೇರಿ ಅರ್ಹ ಬಡವರಿಗೆ ನೀಡಲಾಗುತ್ತಿದೆ. ಸಾಮಾನ್ಯ ವರ್ಗದ ಜನರು ರೂ.6.50 ಲಕ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು 6 ಲಕ್ಷ ರೂ. ಪಾವತಿಸಬೇಕಾಗಿರುತ್ತದೆ. ಆದ್ದರಿಂದ ಫ್ಲ್ಯಾಟ್ ಹಂಚಿಕೆ ಮಾಡಿರುವ ಆಧಾರದ ಮೇಲೆ ಸ್ಪೆಷಲ್ ಪ್ಲ್ಯಾನ್ ಅಡಿಯಲ್ಲಿ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಮಾಡುವಂತೆ ಬ್ಯಾಂಕ್ ಮುಖ್ಯಸ್ಥರಿಗೆ ಸಚಿವರು ಸೂಚನೆ ನೀಡಿದರು.
ಇದನ್ನೂ ಓದಿ: ಒಂದು ಲಕ್ಷ ವಸತಿ ಯೋಜನೆ, ಫಲಾನುಭವಿಗಳ ವಂತಿಕೆ ಮೊತ್ತ ಕಡಿತ: ಸಚಿವ ಸೋಮಣ್ಣ