ಬೆಂಗಳೂರು: ಧಾರವಾಡ ಜಿಲ್ಲೆಯಲ್ಲಿ ಉದ್ದೇಶಿತ ಎಫ್ಎಂಸಿಜಿ ಕ್ಲಸ್ಟರ್ ರಚನೆ ಕುರಿತ ಅಧ್ಯಯನ ವರದಿಯನ್ನು ಅನುಷ್ಠಾನಕ್ಕೆ ತರುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಉದ್ದೇಶಿತ ಎಫ್ಎಂಸಿಜಿ ಕ್ಲಸ್ಟರ್ ನ ಕುರಿತಾಗಿ ತಯಾರಿಸಲಾಗಿರುವ ಟ್ರಾನ್ಸ್ ಫಾರ್ಮ್ ಹುಬ್ಬಳ್ಳಿ- ಧಾರವಾಡ 2020-25 ಅನ್ನು ಕ್ಲಸ್ಟರ್ ವೇಳೆ ವಿಜನ್ ಗ್ರೂಪ್ ಅಧ್ಯಕ್ಷ ಉಲ್ಲಾಸ್ ಕಾಮತ್ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಸಲ್ಲಿಸಿದರು. ಸರ್ಕಾರಿ ನಿವಾಸದಲ್ಲಿ ವರದಿ ಸ್ವೀಕರಿಸಿದ ಸಚಿವರು ವಿಜನ್ ಗ್ರೂಪ್ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.
ನಂತರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನಮ್ಮನ್ನೆಲ್ಲಾ ಉಲ್ಲಾಸ್ ಕಾಮತ್ ಗೌಹಾತಿಗೆ ಕರೆದೊಯ್ದಿದ್ದರು. ಅಲ್ಲಿ ಎಫ್ಎಂಸಿಜಿ ಕೈಗಾರಿಕೆ ಬೆಳವಣಿಗೆ ಆಗಿರುವುದನ್ನು ತೋರಿಸಿದ್ದರು. ಅಲ್ಲಿಯ ಕೈಗಾರಿಕೋದ್ಯಮಿಗಳ ಜೊತೆ ಸಮಾಲೋಚನೆ ಮಾಡಿಸಿದರು. ಮುಂಬೈ ಮತ್ತು ಹೈದರಾಬಾದ್ ನಲ್ಲಿ ರೋಡ್ ಶೋ ನಡೆಸಿ ಅಲ್ಲಿಯೂ ಕೈಗಾರಿಕೋದ್ಯಮಿಗಳ ಜೊತೆ ಸಮಾಲೋಚನೆ ನಡೆಸುವ ಕೆಲಸ ಆಗಿತ್ತು. ಫೆಬ್ರವರಿ 14 ರಂದು ಹುಬ್ಬಳ್ಳಿಯಲ್ಲಿ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಕಾರ್ಯಕ್ರಮ ನಡೆದಿತ್ತು. ಅಲ್ಲಿಯೂ ಎಲ್ಲ ವಿಚಾರವನ್ನು ಗಣ್ಯರ ಜೊತೆ ಸಂವಾದ ಮಾಡಿ ತಿಳಿಸುವ ಕೆಲಸವನ್ನು ಉಲ್ಲಾಸ್ ಕಾಮತ್ ಮಾಡಿದ್ದು ಬಹಳ ಪರಿಣಾಮ ಬೀರಿದೆ ಎಂದರು.
ಕೈಗಾರಿಕಾ ಇಲಾಖೆ ಹುಬ್ಬಳ್ಳಿ-ಧಾರವಾಡ ಜಿಲ್ಲೆಗೆ ಎಫ್ಎಂಸಿಜಿ ಕ್ಲಸ್ಟರ್ ಘೋಷಣೆ ಬಜೆಟ್ ನಲ್ಲಿ ಆಗಿದ್ದು, ಅಲ್ಲಿ ಯಾವ ರೀತಿ ಎಫ್ಎಂಸಿಜಿ ಅನುಷ್ಠಾನ ಮಾಡಬೇಕು ಅದಕ್ಕೆ ಪೂರಕವಾಗಿ ಏನೆಲ್ಲಾ ಇರಬೇಕು ಎನ್ನುವ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ವಿಜನ್ ಗ್ರೂಪ್ ರಚನೆ ಮಾಡಿ ಉಲ್ಲಾಸ್ ಕಾಮತ್ ರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೆವು. ಅವರು ಅಧ್ಯಯನ ನಡೆಸಿ ಇಂದು ವರದಿ ಕೊಟ್ಟಿದ್ದಾರೆ. ನಾನಿನ್ನು ವರದಿಯನ್ನು ಅವಲೋಕನ ಮಾಡಿಲ್ಲ, ಎಲ್ಲವನ್ನು ಸವಿಸ್ತಾರವಾಗಿ ಅಧ್ಯಯನ ಮಾಡಿ, ಅಧಿಕಾರಿಗಳ ಜೊತೆ ಎಲ್ಲ ಆಯಾಮದಲ್ಲಿ ಚರ್ಚಿಸಿ ನಂತರ ಸಿಎಂ ಬಿ.ಎಸ್. ಯಡಿಯೂರಪ್ಪ ಜೊತೆ ಸಮಾಲೋಚನೆ ಮಾಡಲಾಗುತ್ತದೆ. ಸರ್ಕಾರದ ನಿಲುವು ಏನು? ಯಾವ ರೀತಿ ಎಫ್ಎಂಸಿಜಿ ವರದಿ ಅನುಷ್ಠಾನಕ್ಕೆ ತರಬೇಕು ಎನ್ನುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.