ಬೆಂಗಳೂರು: ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ವಿಚಾರದಲ್ಲಿ ನನ್ನ ಹೆಸರು ಚಾಲ್ತಿಯಲ್ಲಿರುತ್ತದೆ. ಪ್ರತಿ ಬಾರಿಯೂ ನನ್ನ ಹೆಸರು ಏಕೆ ಚಾಲ್ತಿಯಲ್ಲಿರುತ್ತದೆ ಎಂಬುದು ನನಗೂ ಗೊತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ನಮ್ಮ ರಾಷ್ಟ್ರೀಯ ನಾಯಕರಾಗಲಿ, ರಾಜ್ಯ ನಾಯಕರಾಗಲಿ ನನಗೆ ಸಚಿವ ಸ್ಥಾನ ತೊರೆಯುವ ಬಗ್ಗೆ ಸೂಚಿಸಿಲ್ಲ. ಕೇವಲ ಮಾಧ್ಯಮಗಳಲ್ಲಿ ನನ್ನ ಹೆಸರು ಬರುತ್ತಿದೆ. ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿ ನಾನು ಏಕೈಕ ಮಹಿಳಾ ಸಚಿವೆಯಾಗಿದ್ದು, ನನ್ನನ್ನು ಸಂಪುಟದಿಂದ ಕೈ ಬಿಡುವುದಿಲ್ಲ ಎಂಬ ವಿಶ್ವಾಸವಿದೆ. ನನ್ನನ್ನು ಯಾವ ಕಾರಣಕ್ಕಾಗಿ ಸಂಪುಟದಿಂದ ಕೈ ಬಿಡುತ್ತಾರೆ? ಕೇವಲ ಸುದ್ದಿ ಮಾಧ್ಯಮಗಳಲ್ಲಿ ಆಗಾಗ ಇಂತಹ ವರದಿಯಾಗುತ್ತಿರುವುದು ಏಕೆ ಎಂದು ನನಗೆ ತಿಳಿಯುತ್ತಿಲ್ಲ ಎಂದರು.
ಬಿಜೆಪಿಯಿಂದ ಮೂವರು ಮಹಿಳಾ ಶಾಸಕಿಯರು ಗೆದ್ದಿದ್ದೇವೆ. ಅದರಲ್ಲಿ ನಾನು ಏಕೈಕ ಮಹಿಳಾ ಸಚಿವೆಯಾಗಿರುವುದರಿಂದ ನನ್ನನ್ನು ಸಂಪುಟದಲ್ಲಿ ಮುಂದುವರಿಸುತ್ತಾರೆ ಎಂಬ ವಿಶ್ವಾಸವಿದೆ. ಸಚಿವೆಯಾಗಿ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ. ಇಲಾಖೆಯಲ್ಲಿ ಒಂದಷ್ಟು ಸುಧಾರಣೆಗಳನ್ನು ತಂದಿದ್ದೇನೆ ಎಂದು ತಿಳಿಸಿದರು.
ನಾನು ಇಲಾಖೆಯ ಕಾರ್ಯಕ್ರಮದ ನಿಮಿತ್ತ ದೆಹಲಿಗೆ ಭೇಟಿ ನೀಡಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ದೆಹಲಿಗೆ ಹೋದ ಸಂದರ್ಭದಲ್ಲಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡದಿದ್ದರೆ ಹೇಗೆ? ಹಾಗಾಗಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದೆ. ಅದಕ್ಕೂ, ಸಂಪುಟ ವಿಸ್ತರಣೆಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.