ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಬಿಕ್ಕಟ್ಟು ಎದುರಾಗಿರುವ ಹಿನ್ನೆಲೆ ಸರ್ಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ.
ನಿನ್ನೆಯಷ್ಟೇ ಶೃಂಗೇರಿ ಶಾರದಾಂಬೆ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಂದಿದ್ದ ರೇವಣ್ಣ ಅವರು ತಿಮ್ಮಪ್ಪ ದೇವರ ದರ್ಶನ ಪಡೆಯಲು ಬುಧವಾರ ರಾತ್ರಿ ಅಧಿಕಾರಿಗಳೊಂದಿಗೆ ತಿರುಪತಿಗೆ ತೆರಳಿದ್ದಾರೆ .
ಬುಧವಾರ ರಾತ್ರಿ ತಿರುಪತಿಯಲ್ಲಿ ತಂಗುವ ಸಚಿವ ರೇವಣ್ಣ ಗುರುವಾರ ಬೆಳಗ್ಗೆ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು, ಸರ್ಕಾರಕ್ಕೆ ಎದುರಾಗಿರುವ ಸಂಕಷ್ಟ ಪರಿಹಾರ ಮಾಡುವಂತೆ ಬೇಡಿಕೊಳ್ಳಲಿದ್ದಾರೆ ಎನ್ನಲಾಗಿದೆ.
ದೇವರು, ಜ್ಯೋತಿಷ್ಯ ಹಾಗೂ ವಾಸ್ತು ಬಗ್ಗೆ ಅಪಾರ ನಂಬಿಕೆ ಹೊಂದಿರುವ ರೇವಣ್ಣ "ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿನ ಸರ್ಕಾರವನ್ನು ದೇವರು ಕೊಟ್ಟ ಸರ್ಕಾರ ಎಂದೇ ಕರೆಯುತ್ತಿದ್ದರು. ಕೇವಲ 37 ಶಾಸಕರನ್ನು ಹೊಂದಿದ ಜೆಡಿಎಸ್ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಿ ಬೆಂಬಲ ನೀಡಿರುವುದು ದೇವರ ಕೊಟ್ಟ ವರ ಎಂದು ಭಾವಿಸಿದ್ದರು. ಸರ್ಕಾರ ಅಸ್ಥಿತ್ವಕ್ಕೆ ಬಂದ ಬಳಿಕ ಹಲವು ಬಾರಿ ರೇವಣ್ಣ, ರಾಜ್ಯದ ಮತ್ತು ಹೊರ ರಾಜ್ಯದ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದಿದ್ದರು. ಈ ಹಿಂದೆ ಶಾಸಕರ ಬಂಡಾಯದಿಂದ ಸರ್ಕಾರಕ್ಕೆ ಅಪಾಯ ಉಂಟಾದಾಗ ಶೃಂಗೇರಿ ಶಾರದಾಂಬೆ ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳಿಗೆ ತೆರಳಿ ಹೋಮ-ಹವನ ಮಾಡಿಸಿದ್ದರು.