ಬೆಂಗಳೂರು: ಶಾಸಕಾಂಗ ಸಭೆಯಿದೆ ಎಂದು ನೋಟಿಸ್ ಬಂದಿಲ್ಲ. ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆ ಶಾಸಕರನ್ನು ಔತಣಕೂಟಕ್ಕೆ ಆಹ್ವಾನಿಸಲಾಗಿದೆ ಅಷ್ಟೇ ಎಂದಿದ್ದ ಸಚಿವ ಆರ್. ಅಶೋಕ್ ಈಗ ಯೂ ಟರ್ನ್ ಹೊಡೆದಿದ್ದಾರೆ.
ಸಿಎಂ ಭೇಟಿ ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಜುಲೈ 26 ರಂದು ಎರಡು ವರ್ಷ ಪೂರ್ಣಗೊಳ್ಳುತ್ತಿದೆ. ಹೀಗಾಗಿ ಸಾಧನಾ ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಪೂರ್ಣ ಚಿತ್ರಣ ಬಿಡುಗಡೆ: ಕೊರೊನಾ ಸಂದರ್ಭದಲ್ಲಿಯೂ ಇಲಾಖೆಗಳಲ್ಲಿ ಎರಡು ವರ್ಷದಲ್ಲಿ ಏನೇನು ಅಭಿವೃದ್ಧಿ ಮಾಡಿದ್ದೇವೆ ಎನ್ನುವ ಸಂಪೂರ್ಣ ಚಿತ್ರಣವನ್ನು ಬಿಡುಗಡೆ ಮಾಡಲಿದ್ದೇವೆ.ಈ ಬಗ್ಗೆ ಈಗಾಗಲೇ ಇಲಾಖೆಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದರು.
ನಾವೆಲ್ಲ ಒಟ್ಟಾಗಿದ್ದೇವೆ: ಇಂದು ಬೆಳಗ್ಗೆ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗಿಯಾದ ನಂತರ ಮಾತನಾಡಿದ್ದ ಅವರು, ಸರ್ಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆ ಔತಣ ಕೂಟ ಏರ್ಪಡಿಸಲಾಗುತ್ತಿದೆ. ಶಾಸಕಾಂಗ ಪಕ್ಷದ ಸಭೆ ಎಂದು ನನಗೆ ನೋಟಿಸ್ ಬಂದಿಲ್ಲ, ಔತಣಕೂಟವಿದೆ. ನಮ್ಮ ಶಾಸಕರ ಜೊತೆ ಮಾತುಕತೆ ಇದ್ದೇ ಇರುತ್ತದೆ. ಯಾರೋ ಒಂದಿಬ್ಬರು ಮಾತಾಡಿದರೆ ಏನು ಆಗೋದಿಲ್ಲ. ನಾವೆಲ್ಲ ಒಟ್ಟಾಗಿದ್ದೇವೆ ಎಂದಿದ್ದರು.
ಬಿಜೆಪಿಯಲ್ಲಿ ಸಮರ್ಥ ನಾಯಕತ್ವ: ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಿ ಅವರನ್ನು ಯಡಿಯೂರಪ್ಪ ಭೇಟಿ ಮಾಡಿ ಬಂದಿದ್ದಾರೆ. ಕೊರೊನಾ ಇದ್ದ ಕಾರಣ, ಇಷ್ಟು ದಿನ ಹೋಗಿರಲಿಲ್ಲ. ಇನ್ಮುಂದೆ ಸಿಎಂ ಪ್ರತಿ ತಿಂಗಳು ದೆಹಲಿ ಹೋಗುತ್ತೇನೆ ಎಂದಿದ್ದಾರೆ. ನಾಯಕತ್ವದ ಬದಲಾವಣೆ ಸಂದೇಶ ಕೇಂದ್ರ ನಾಯಕರಿಂದ ಬಂದಿಲ್ಲ. ಬಿಜೆಪಿಯಲ್ಲಿ ಸಮರ್ಥ ನಾಯಕತ್ವವಿದೆ. ಕೇಂದ್ರದ ನಾಯಕತ್ವ ಕೂಡ ಬಲಿಷ್ಠವಾಗಿದೆ. ಹೀಗಾಗಿ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ವಲಸಿಗರು ದೆಹಲಿ ಭೇಟಿಗೆ ಅವಕಾಶ ಕೇಳಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಅಶೋಕ್, ದೆಹಲಿಗೆ ಹೋಗುತ್ತಿರುತ್ತಾರೆ. ನಾನು ಹೋಗಬೇಕು ಎಂದುಕೊಂಡಿದ್ದೇನೆ. ಬಿ.ಸಿ. ಪಾಟೀಲ್ ದೆಹಲಿಗೆ ಹೋಗುವ ವಿಚಾರ ಗೊತ್ತಿಲ್ಲ. ನಾವ್ಯಾರು ಹೋಗ್ತಿಲ್ಲ ಎಂದು ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ ಎಂದರು.
ಓದಿ: ಸಿಎಂ ಬದಲಾವಣೆ ವಿಚಾರ ಹೇಳ್ತಾನೇ ಇರ್ತಾರೆ, ಏನಾದ್ರು ಬದಲಾವಣೆ ಆಗಿದೆಯಾ? ಸಂಸದ ಸಿದ್ದೇಶ್ವರ್ ಪ್ರಶ್ನೆ