ಬೆಂಗಳೂರು: ಬೆಂಗಳೂರು ಹೊರವಲಯದ ಪ್ರಯಾಣಿಕರ ಅನುಕೂಲಕ್ಕಾಗಿ ಈ ಹೊಸ ಬಸ್ ಮಾರ್ಗವನ್ನು ತೆರೆಯಲಾಗಿದೆ. ನೈಸ್ ಸಾರಿಗೆ ಸೇವೆಗಳ ಉಪಯೋಗವನ್ನು ಪ್ರಯಾಣಿಕರು ಅತಿ ಹೆಚ್ಚು ಪಡೆಯಬೇಕು. ಪ್ರಮುಖವಾಗಿ ವಿವಿಧ ಪ್ರಮುಖ ಸ್ಥಳಗಳಿಂದ ನೈಸ್ ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್‌ಗೆ ಬೆಳಗ್ಗೆ ಮತ್ತು ಸಂಜೆ ಒಟ್ಟು 65 ಟ್ರಿಪ್ಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಬೆಂಗಳೂರಿನ ಹೊರವಲಯದ ಮಾದವಾರ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ಮಾರ್ಗ ಸಂಖ್ಯೆ ನೈಸ್- 10 ಗೆ ಚಾಲನೆ ನೀಡಿ ಮಾತನಾಡಿದರು. ನೈಸ್ ಕಾರಿಡಾರ್ ಸಮೂಹ ಸಂಸ್ಥೆ ಬಿಎಂಟಿಸಿ ಬಸ್ಗಳಿಗೆ ನೈಸ್ ಟೋಲ್ ಶುಲ್ಕವನ್ನು ರದ್ದು ಮಾಡಲು ಅಥವಾ ಕಡಿಮೆ ಮಾಡಿ ಪಾಸ್ ವಿತರಿಸಬೇಕು. ಇದರಿಂದ ಸಾರಿಗೆ ಸಂಸ್ಥೆ ಹೆಚ್ಚು ಪ್ರಯಾಣಿಕರಿಗೆ ಕಡಿಮೆ ವೆಚ್ಚದಲ್ಲಿ ಸೇವೆಗಳನ್ನು ಒದಗಿಸಬಹುದು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬೆಂಗಳೂರು ನಗರ ಹಾಗೂ ಹೊರ ವಲಯದ ಪ್ರಯಾಣಿಕರ ದಟ್ಟಣೆ/ಬೇಡಿಕೆ ಅನುಗುಣವಾಗಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸುವ ಧ್ಯೇಯದೊಂದಿಗೆ ಪ್ರಯಾಣಿಕರಿಗೆ ದಕ್ಷ, ಉತ್ತಮ, ಸುಲಭ ಸಾರಿಗೆ ಸೇವೆ ಒದಗಿಸಲು ಸಾರಿಗೆ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಸಾರ್ವಜನಿಕ ಪ್ರಯಾಣಿಕರ ಹೊಣೆಗಾರಿಕೆಯಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ 25 ಕಿ.ಮೀ. ವರೆಗೆ ಕಾರ್ಯಾಚರಣೆ ವ್ಯಾಪ್ತಿ ಹೊಂದಿದ್ದು, ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸಾರಿಗೆ ಸೌಲಭ್ಯ ಒದಗಿಸುವ ಏಕೈಕ ಸಾರಿಗೆ ಸಂಸ್ಥೆಯಾಗಿದೆ. ಈ ನಿಟ್ಟಿನಲ್ಲಿ ಪ್ರತಿದಿನ 5,571 ಬಸ್ಗಳು 57,565 ಸುತ್ತುವಳಿಗಳನ್ನು ಮತ್ತು 11.33 ಲಕ್ಷ ಕಿ.ಮೀ ಪ್ರಯಾಣಿಸುತ್ತದೆ. ಪ್ರತಿದಿನ ಸರಾಸರಿ 40 ಲಕ್ಷ ಪ್ರಯಾಣಿಕರು ಸಂಸ್ಥೆಯ ಸಾರಿಗೆಗಳ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ನೈಸ್-10 ಬಸ್ಗಳು ತುಮಕೂರು ರಸ್ತೆ ಹಾಗೂ ಎಲೆಕ್ಟ್ರಾನಿಕ್ ಸಿಟಿ ನೈಸ್ ರಸ್ತೆ ಜಂಕ್ಷನ್‌ನಿಂದ ವಿವಿಧ ಸಾರಿಗೆಗಳ ಮೂಲಕ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಗಮನಿಸಿ, ಅವರ ಸುರಕ್ಷಿತ ಪ್ರಯಾಣದ ದೃಷ್ಟಿಯಿಂದ ಮಾದವಾರದಿಂದ ನೈಸ್ ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿಗೆ ಬೆಳಗ್ಗೆ 6 ರಿಂದ ರಾತ್ರಿ 9 ರವರೆಗೆ 21 ಅನುಸೂಚಿಗಳನ್ನು ಪ್ರತಿ 10 ನಿಮಿಷಕ್ಕೊಂದರಂತೆ ಒಟ್ಟು 147 ಟ್ರಿಪ್ಗಳನ್ನು ಕಾರ್ಯಾಚರಣೆಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಈ ಬಸ್ಗಳಿಗೆ ಮಾಗಡಿ ರಸ್ತೆ ನೈಸ್ ಜಂಕ್ಷನ್, ಮೈಸೂರು ರಸ್ತೆ ನೈಸ್ ಜಂಕ್ಷನ್, ಕನಕಪುರ ರಸ್ತೆ ನೈಸ್ ಜಂಕ್ಷನ್ ಹಾಗೂ ಬನ್ನೇರುಘಟ್ಟ ರಸ್ತೆ ನೈಸ್ ಜಂಕ್ಷನ್ಗಳಲ್ಲಿ ನಿಲುಗಡೆ ನೀಡಲಾಗುತ್ತಿದೆ. ಮಾದಾವರದಿಂದ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣ ದರ 35 ರೂ ಹಾಗೂ ಟೋಲ್ ಬಳಕೆದಾರರ ಶುಲ್ಕ 25 ರೂ ಸೇರಿದಂತೆ ಒಟ್ಟು 60 ರೂ ನಿಗದಿಪಡಿಸಲಾಗಿದೆ. ಶಕ್ತಿ ಯೋಜನೆಯ ಫಲಾನುಭವಿಗಳಿಗೆ ನೈಸ್ ಸಾರಿಗೆ ಸೌಲಭ್ಯವು ಸಂಪೂರ್ಣ ಉಚಿತವಾಗಿರುತ್ತದೆ ಎಂದು ರಾಮಲಿಂಗ ರೆಡ್ದಿ ತಿಳಿಸಿದರು.
ಈ ಸಂದರ್ಭದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಮುನಿರಾಜು, ಬೆಂ ಮ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಜಿ ಸತ್ಯವತಿ, ನಿರ್ದೇಶಕಿ ಕಲಾ ಕೃಷ್ಣಸ್ವಾಮಿ, ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ.ಪ್ರಭಾಕರ ರೆಡ್ಡಿ, ನೈಸ್ ಕಾರಿಡಾರ್ ಸಮೂಹದ ನಿರ್ದೇಶಕ ಸುಧಾಕರ್ ರೆಡ್ಡಿ (ನಿವೃತ್ತ ಐಪಿಎಸ್), ಉತ್ತರ ಮತ್ತು ವಾಯುವ್ಯ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ವಿಭಾಗೀಯ ಸಂಚಾರಾಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಕೆಕೆಆರ್ಟಿಸಿ ಸಿಬ್ಬಂದಿಗೆ ₹1.20 ಕೋಟಿ ಮೊತ್ತದ ಅಪಘಾತ ಪರಿಹಾರ ವಿಮಾ ಯೋಜನೆ