ಬೆಂಗಳೂರು : ಯಾರ್ಯಾರು ಬಿಜೆಪಿಗೆ ಹೋಗಿದ್ದಾರೋ ಅವರೆಲ್ಲಾ ಮರಳಿ ಬಂದರೆ ಕಾಂಗ್ರೆಸ್ಗೆ ಸಹಕಾರಿಯಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಅವರು, ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಈ ವಿಚಾರವನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಅವರೆಲ್ಲ ಬರ್ತಾರಂದ್ರೆ ಸ್ವಾಗತವಿದೆ. ಕಾಲ ಬದಲಾವಣೆ ಆಗ್ತಾ ಹೋಗುತ್ತೆ, ನಿರ್ಧಾರಗಳೂ ಬದಲಾಗುತ್ತವೆ. ಸಿಎಂ ಸಿದ್ದರಾಮಯ್ಯ ಅವತ್ತಿನ ಸಂದರ್ಭಕ್ಕೆ ಸೇರಿಸಿಕೊಳ್ಳಲ್ಲ ಅಂದಿದ್ರು. ಆದರೆ ಇವತ್ತಿನ ಕಾಲಕ್ಕೆ ನಿರ್ಧಾರ ಬದಲಾಗಿದೆ ಎಂದರು.
ಬಿಜೆಪಿಗೆ ಹೋಗಿರುವವರು ಕಾಂಗ್ರೆಸ್ಗೆ ಬಂದರೆ ಮುಂಬರುವ ಲೋಕಸಭೆ, ಬಿಬಿಎಂಪಿ ಎರಡೂ ಚುನಾವಣೆಗೆ ಅನುಕೂಲವಾಗಲಿದೆ. ಅವರು ತಪ್ಪು ತಿಳುವಳಿಕೆಯಿಂದ ಬಿಜೆಪಿಗೆ ಹೋಗಿದ್ದರು. ಆದರೆ ಕಾಂಗ್ರೆಸ್ ಪಕ್ಷವೇ ಸರಿ ಅಂತ ಅನಿಸಿದೆ. ಬಿಜೆಪಿಯಲ್ಲಿ ಉಸಿರುಕಟ್ಟಿಸುವ ವಾತಾವರಣ ಇದೆ. ಹಕ್ಕಿಗಳು ಹಾರಾಡಿಕೊಂಡಿರುತ್ತವೆ. ಕಾಂಗ್ರೆಸ್ ಕಲ್ಚರ್ ಅದು.
ಬಿಜೆಪಿಯವರು ತೆಗೆದುಕೊಂಡು ಹೋಗಿ ಕೇಜ್ನಲ್ಲಿ ಹಾಕಿದ್ದಾರೆ. ಹೀಗಾಗಿ ಅವರಿಗೆ ಕಿರಿಕಿರಿ ಆಗಿದೆ. ಬಿಜೆಪಿಯಲ್ಲಿ ಬೋನಿನಲ್ಲಿ ಹಾಕಿದಂತೆ ಇರುತ್ತದೆ. ಬಿಜೆಪಿಯವರಿಗೆ ಅಲ್ಲಿನ ವಾತಾವರಣ ರೂಢಿ ಆಗಿದೆ. ನಮ್ಮವರಿಗೆ ಅದಿನ್ನೂ ರೂಢಿ ಇಲ್ಲ. ಬಿಜೆಪಿಯಲ್ಲಿ ಹಕ್ಕಿಗಳನ್ನು ಗೂಡಿನಲ್ಲಿ ಹಾಕಿದಂತೆ ಇಟ್ಟಿರ್ತಾರೆ. ನಮ್ಮಲ್ಲಿ ಹಕ್ಕಿಗಳು ಸ್ವತಂತ್ರವಾಗಿ ಹಾರಾಡಿಕೊಂಡಿರುತ್ತವೆ ಎಂದು ಹೇಳಿದರು.
ದೇವಾಲಯಗಳ ಅಭಿವೃದ್ಧಿ ಅನುದಾನ ತಡೆ ಆದೇಶ ಸಂಬಂಧ ಆಯುಕ್ತರಿಗೆ ಬಹಳ ಸ್ಪಷ್ಟವಾಗಿ ಹೇಳಿದ್ದೇನೆ. ಆದೇಶ ವಾಪಸ್ ಪಡೆಯುವಂತೆ ಸೂಚನೆ ನೀಡಿದ್ದೇನೆ. ಅರ್ಧ ಹಣ ಬಿಡುಗಡೆ ಆಗಿರುವುದನ್ನು ಯಾಕೆ ನಿಲ್ಲಿಸಬೇಕು?. ಯಾವುದೇ ಅನುಮಾನ ಇಲ್ಲ. ಅಕ್ರಮ ನಡೆದಿದೆ ಎಂಬ ಯಾವ ಅನುಮಾನವೂ ಇಲ್ಲ. ಯಾವ ದೇವಸ್ಥಾನದ ಕೆಲಸವನ್ನೂ ನಿಲ್ಲಿಸುವುದಕ್ಕೆ ಹೋಗುವುದಿಲ್ಲ. ಕೇವಲ ಸ್ಟೇಟಸ್ ರಿಪೋರ್ಟ್ ಕೇಳಿದ್ದನ್ನು ಕನ್ಫ್ಯೂಸ್ ಆಗಿ ನಮ್ಮ ಆಯುಕ್ತರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಸಮಜಾಯಿಷಿ ನೀಡಿದರು.
ಪ್ರಹ್ಲಾದ್ ಜೋಶಿ ಹೇಳಿಕೆ: ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣವಿದೆ ಎಂದು ರಾಮಲಿಂಗಾರೆಡ್ಡಿಗೆ ಹೇಗೆ ಗೊತ್ತು?. ಅವರೇನು ಬಿಜೆಪಿ ಪಕ್ಷದಲ್ಲಿದ್ದಾರಾ?, ಸದ್ಯದಲ್ಲೇ ಪ್ರತಿಪಕ್ಷ ನಾಯಕನ ನೇಮಕವಾಗುತ್ತದೆ. ಕೃಷಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಮತ್ತೊಬ್ಬರ ಹೇಳಿಕೆಗೆ ನಾನು ಉತ್ತರ ಕೊಡುವ ಅಗತ್ಯವಿಲ್ಲ. ಚಲುವರಾಯಸ್ವಾಮಿ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಮೊದಲು ಅವರು ರಾಜಿನಾಮೆ ಕೊಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಒತ್ತಾಯಿಸಿದರು.
ತತ್ವ, ಸಿದ್ಧಾಂತ ಒಪ್ಪಿ ಬಂದವರಿಗೆ ಸ್ವಾಗತ : ಪಕ್ಷದ ತತ್ವ, ಸಿದ್ಧಾಂತ ಒಪ್ಪಿಕೊಂಡು ಯಾರು ಕಾಂಗ್ರೆಸ್ ಪಕ್ಷಕ್ಕೆ ಬರ್ತಾರೋ ಅವರೆಲ್ಲರಿಗೂ ಸ್ವಾಗತವಿದೆ. ಬಹಳಷ್ಟು ಜನ ಈಗಾಗಲೇ ನಮ್ಮ ರಾಜ್ಯ ನಾಯಕರ ಜೊತೆ ಸಂಪರ್ಕದಲ್ಲಿದ್ದು, ಅವರಲ್ಲಿ ಯಾರು ಬರುವರಿದ್ದಾರೆ ಎನ್ನುವುದನ್ನು ನಾನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಹೆಸರುಗಳು ಬಹಿರಂಗವಾದರೆ ನಿರ್ಧಾರ ತೆಗೆದುಕೊಳ್ಳಲು ಅವರಿಗೆ ಗೊಂದಲ ಆಗಬಹುದು ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ರಾಯಚೂರಿನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ : ನನಗೆ ಕಾಂಗ್ರೆಸ್ ನಾಯಕರಿಂದ ಯಾವುದೇ ಆಹ್ವಾನ ಬಂದಿಲ್ಲ: ಬಿ.ವಿ.ನಾಯಕ್