ಬೆಂಗಳೂರು : ಕನಿಷ್ಠ ದರಕ್ಕೆ ಸರ್ಕಾರ ಜಾಗವನ್ನು ಗುತ್ತಿಗೆ ನೀಡುವ ಪದ್ದತಿ ಮುಂದುವರೆಸುವುದಿಲ್ಲ. ಇನ್ಮುಂದೆ ಗುತ್ತಿಗೆ ಅವಧಿ ಮುಗಿದ ಸರ್ಕಾರಿ ಜಾಗಗಳನ್ನ ವಶಪಡಿಸಿಕೊಂಡು ಇವತ್ತಿನ ದರಕ್ಕೆ ಮಾರಾಟ ಮಾಡುತ್ತೇವೆ. ಭೂಗಳ್ಳರ ವಿರುದ್ಧ ಸರ್ಕಾರ ಕ್ರಮ ಜರುಗಿಸಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಬಿ. ಕೆ ಹರಿಪ್ರಸಾದ್, ರಾಜ್ಯದಲ್ಲಿ ಗೋಮಾಳ ಜಮೀನು ಎಷ್ಟಿದೆ? ಎಷ್ಟು ಒತ್ತುವರಿಯಾಗಿದೆ? ಬೆಂಗಳೂರಿನಲ್ಲಿ 10 ಲಕ್ಷ ಬಾಡಿಗೆ ಹೋಗುವ ಜಾಗಗಳನ್ನ ಕೇವಲ ಐನೂರರಿಂದ ಸಾವಿರ ರೂಪಾಯಿಗೆ ಲೀಜ್ಗೆ ಕೊಟ್ಟಿದ್ದಾರೆ. ಲೀಜ್ ಅವಧಿ ಮುಗಿದಿರೋದು ಎಷ್ಟಿದೆ? ನಕಲಿ ದಾಖಲೆಗಳನ್ನ ಸೃಷ್ಟಿಸಿ ಭೂಗಳ್ಳರ ಕಬಳಿಕೆ ಹೆಚ್ಚಾಗುತ್ತಿದೆ. ಕೆಲವು ಕೇಸ್ಗಳಲ್ಲಿ ನಿಮ್ಮ ವಕೀಲರೇ ಅಪೀಲ್ ಹೋಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಕ್ರಮದ ಭರವಸೆಗೆ ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಆರ್. ಅಶೋಕ್, ನಕಲಿ ದಾಖಲೆ ಸೃಷ್ಟಿ ಮಾಡೋದ್ರಲ್ಲಿ ಕೆಲವರು ನಿಸ್ಸೀಮರಿದ್ದಾರೆ. ಅಂತಹ ನಕಲಿ ಭೂಗಳ್ಳರು ನಾಲ್ಕೈದು ಲಕ್ಷ ತೆಗೆದುಕೊಳ್ಳುವ ವಕೀಲರನ್ನ ನೇಮಿಸಿಕೊಳ್ಳುತ್ತಾರೆ. ನಾವು ಅದನ್ನ ಎದುರಿಸುವುದು ತುಂಬಾ ಕಷ್ಟವಾಗಿದೆ. ಹೀಗಾಗಿ, ಇಂತಹ ಜಮೀನುಗಳನ್ನ ಉಳಿಸಲು ಸರ್ಕಾರಕ್ಕೆ ಕಷ್ಟವಾಗುತ್ತಿದೆ ಎಂದು ಅಸಾಹಕತೆ ತೋಡಿಕೊಂಡರು.
ಬೆಂಗಳೂರಿನ ಸ್ಲಂ ಬೋರ್ಡ್ ಜಾಗಗಳನ್ನ ಕೂಡ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಗಮನಕ್ಕೆ ಬಂದಿದೆ. ಖಾಲಿ ಇರುವ ಸರ್ಕಾರಿ ಜಾಗಗಳನ್ನ ಸಾರ್ವಜನಿಕರಿಗಾಗಿ ಶಾಲೆ-ಕಾಲೇಜು, ಆಸ್ಪತ್ರೆಗೆ ಕೂಡಲೇ ಬಳಸುತ್ತೇವೆ. ಲೀಜ್ ಪಿರಿಯಡ್ ಮುಗಿದವರು ಇವತ್ತಿನ ದರ ಕಟ್ಟಿ ಖರೀದಿಸಬಹುದು. ಇನ್ಮುಂದೆ ಐನೂರು ಹಾಗೂ ಸಾವಿರಕ್ಕೆ ಲೀಜ್ಗೆ ಕೊಡೋದಿಲ್ಲ.
ಇದರಿಂದ ಸರ್ಕಾರದ ಆದಾಯಕ್ಕೂ ನಷ್ಟವುಂಟಾಗುತ್ತಿದೆ. ಕೆಲವರು ಇದರ ವಿರುದ್ಧ ಕೋರ್ಟ್ ಮೊರೆ ಹೋಗಿದ್ದಾರೆ. ನಾವೂ ಕೂಡ ಅಪೀಲ್ ಮಾಡಿದ್ದೇವೆ. ಕೂಡಲೇ ಲೀಜ್ ಅವಧಿ ಮುಗಿದ ಜಾಗಗಳನ್ನ ವಶಪಡಿಸಿಕೊಂಡು ಇವತ್ತಿನ ದರಕ್ಕೆ ಕೊಡುವ ವ್ಯವಸ್ಥೆ ಮಾಡುತ್ತೇವೆ. ಭೂಗಳ್ಳರ ವಿರುದ್ಧ ಸರ್ಕಾರ ಕ್ರಮಜರುಗಿಸಲಿದೆ ಎಂದು ಭರವಸೆ ನೀಡಿದರು.
ವಸತಿ ಯೋಜನೆಗಳ ಅನುದಾನ ಹೆಚ್ಚಳಕ್ಕೆ ಸರ್ಕಾರ ನಕಾರ!
ವಸತಿ ಯೋಜನೆಯಡಿ ಸೂರುಗಳನ್ನು ಕಟ್ಟಿಕೊಳ್ಳಲು ಸರ್ಕಾರ ನೆರವು ನೀಡಬಹುದೇ ಹೊರತು ಮನೆ ಕಟ್ಟಿಕೊಡಲು ಪೂರ್ಣ ಪ್ರಮಾಣದ ಹಣ ಒದಗಿಸಲು ಸಾಧ್ಯವಿಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಆರ್ ಬಿ ತಿಮ್ಮಾಪುರ ಒಂದು ಮನೆ ಕಟ್ಟಲು ಎಷ್ಟು ಹಣ ಬೇಕು ನೀವ್ ಹೇಳಿ.. ಮನೆಗಳಿಗೆ ಅಡಮಾನ ಕೊಟ್ಟು ಅವರಿಗೆ ಬ್ಯಾಂಕ್‌ನವರು ಹಿಂಸಿಸುತ್ತಿದ್ದಾರೆ. ಬಡವರು ಮನೆ ಕಟ್ಟಲು ಕೊಡುತ್ತಿರುವ ಹಣ ಸಾಕಾಗುತ್ತಿಲ್ಲ. ಅದನ್ನು ಹೆಚ್ಚಿಸಿ ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ವಸತಿ ಸಚಿವ ವಿ. ಸೋಮಣ್ಣ ಎಸ್‌ಸಿ ಹಾಗೂ ಎಸ್‌ಟಿಯವರಿಗೆ ಯಾವುದೇ ಸಾಲ ಕೊಟ್ಟಿಲ್ಲ. ಆಶ್ರಯ ಯೋಜನೆಯಡಿಯ ಮನೆಗಳಿಗೆ ಯಾವುದೇ ಅಡಮಾನ ಇಟ್ಟುಕೊಂಡು ಸಾಲ ಕೊಟ್ಟಿಲ್ಲ. ಹಿಂದೆಯೇ ಅಡಮಾನ ಅಂತಾ ಇಟ್ಟಿದ್ದ ಎಲ್ಲವನ್ನೂ ಮನ್ನಾ ಮಾಡಿದ್ದೇವೆ. ಒಂದೇ ಒಂದು ಸಾಲದ ನಿದರ್ಶನ ಇದ್ದರೆ ನನಗೆ ಹೇಳಿ ಸರಿಪಡಿಸುತ್ತೇನೆ. ಈಗಾಗಲೇ 2488 ಕೋಟಿಯನ್ನ ನಾವೂ ಮನ್ನಾ ಮಾಡಿದ್ದೇವೆ.
ಸದ್ಯ ಎಸ್‌ಸಿ ಹಾಗೂ ಎಸ್‌ಟಿಯವರಿಗೆ ಮನೆ ಕಟ್ಟಲು ಒಂದೂವರೆ ಲಕ್ಷ ಕೊಡುತ್ತಿದ್ದೇವೆ. ಮುಂದೆ ಕೊಡುವ ಐದು ಲಕ್ಷ ಮನೆಗಳಿಗೆ ನಾಲ್ಕು ಕಂತುಗಳ ಬದಲು ಮೂರು ಕಂತಲ್ಲೇ ಹಣ ಕೊಡುತ್ತಿದ್ದೇವೆ. ಅಡಮಾನ ಇಟ್ಟಿಕೊಳ್ಳುವುದನ್ನೇ ತೆಗೆದು ಹಾಕಿದ್ದೇವೆ. ಸರ್ಕಾರ ಕೊಡುವ ಹಣದಿಂದ ಮನೆ ಕಟ್ಟೋಕೆ ಆಗೋದಿಲ್ಲ ಎಂದು ಗೊತ್ತಿದೆ. ಆದರೆ, ಇದು ಸರ್ಕಾರ ಕೊಡುವ ಸಹಾಯಧನವಷ್ಟೇ.. ನಮಗೂ ಹೆಚ್ಚು ಕೊಡಬೇಕು ಅನ್ನೋ ಆಸೆ ಇದೆ. ಆದರೆ, ಅದು ಕಷ್ಟ. ಸದ್ಯ ನಾವು ಮನೆ ಕಟ್ಟಿಕೊಳ್ಳಲು ನೆರವನ್ನ ಮಾತ್ರ ನೀಡಬಹುದು ಅಷ್ಟೇ ಎಂದರು.
ಸಿ ದರ್ಜೆ ದೇವಸ್ಥಾನ ದಾನಿಗಳ ಸುಪರ್ದಿಗೆ
ಅರ್ಚಕರಿಗೆ ಕೊಡುವ ಮಾಸಿಕ 4 ಸಾವಿರ ರೂ.ಗಳ ತಸ್ತಿಕ್ ಹಣವನ್ನು ಹೆಚ್ಚಳ ಮಾಡುವ ಕುರಿತು ಚಿಂತನೆ ನಡೆಸಲಿದ್ದೇವೆ. ಸಿ ಗ್ರೇಡ್ ದೇವಸ್ಥಾನಗಳನ್ನ ಆಯಾ ಜಿಲ್ಲಾ ದಾನಿಗಳ ಸುಪರ್ದಿಗೆ ನೀಡಿ ದೇವಾಲಯಗಳನ್ನ ಮೇಲ್ದರ್ಜೆಗೆ ಏರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾಶಿ ಯಾತ್ರೆ ಮಾಡುವವರಿಗೆ ಸರ್ಕಾರದ ಅನುದಾನವನ್ನ 30 ಸಾವಿರದಿಂದ 50 ಸಾವಿರಕ್ಕೆ ಏರಿಸುವ ನಿರ್ಧಾರ ಮಾಡಿದ್ದೇವೆ. ಇದಕ್ಕೆ 10 ಕೋಟಿ ಮೀಸಲಿಡಲಾಗಿದೆ. ಇದನ್ನು 100 ಕೋಟಿಗೆ ಮೀಸಲಿಟ್ಟು ಹಿಂದೂಗಳ ಪವಿತ್ರ ಜಾಗಕ್ಕೆ ಹೆಚ್ಚಿನ ಯಾತ್ರಿಗಳು ಹೋಗುವ ವ್ಯವಸ್ಥೆ ಕಲ್ಪಿಸಬೇಕು ಎನ್ನುವ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ನಿರ್ಧರಿಸಲಾಗುತ್ತದೆ ಎಂದರು.
ಓದಿ: ವಿಧಾನಸಭೆ ಸಭಾಂಗಣದಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕಲು ಸ್ಪೀಕರ್ ಒಪ್ಪಿಗೆ