ಬೆಂಗಳೂರು: ಕಾಂಗ್ರೆಸ್ ದಿವಾಳಿಯಾಗಿದೆ. ಹೀಗಾಗಿ ಸಂತೆಯಲ್ಲಿ ನಿಂತು ಬನ್ನಿ ಬನ್ನಿ ಎಂದು ಕರೆಯುತ್ತಿದ್ದಾರೆ. 125 ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷಕ್ಕೆ ಈ ಪರಿಸ್ಥಿತಿ ಬರಬಾರದಿತ್ತು ಎಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ನಾಯಕರಿಗೆ ಮರಳಿ ಕಾಂಗ್ರೆಸ್ಗೆ ಬರುವಂತೆ ಆಹ್ವಾನ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ಕಂದಾಯ ಸಚಿವ ಆರ್ ಅಶೋಕ್ ತಿರುಗೇಟು ನೀಡಿದ್ದಾರೆ.
ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ದಿವಾಳಿಯಾಗಿದೆ. ಅದಕ್ಕಾಗಿ ಡಿಕೆ ಶಿವಕುಮಾರ್ ಬನ್ನಿ ಬನ್ನಿ ಅಂತಿದ್ದಾರೆ. ಅವರಲ್ಲಿ ಯಾರು ಗತಿ ಇಲ್ಲ ಅಂತಾ ಈ ರೀತಿ ಪಕ್ಷ ತೊರೆದವರನ್ನ ಕರೆಯುತ್ತಿದ್ದಾರೆ. ಹತಾಶೆಯಿಂದ ಸಂತೆಯಲ್ಲಿ ನಿಂತು ಕರೆದಂತೆ ಕರೆಯುತ್ತಿದ್ದಾರೆ. 125 ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಪಾರ್ಟಿಗೆ ಈ ಪರಿಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದರು.
ಮನಸ್ಸು ಮಾಡಿರೋದು ನಿಜ.. ಆದರೆ?: ಬಿಜೆಪಿಯಲ್ಲಿರೋರು ಹೋಗಲು ಮನಸ್ಸು ಮಾಡ್ತಿದ್ದಾರೆ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅಶೋಕ್, ನಮ್ಮಲ್ಲಿರೋರು ಮನಸ್ಸು ಮಾಡಿದ್ದಾರೆ ಅನ್ನೋದು ನಿಜ. ಇನ್ನೆಂದೂ ಕಾಂಗ್ರೆಸ್ಗೆ ಹೋಗಬಾರದು ಅಂತ ಮನಸ್ಸು ಮಾಡಿದ್ದಾರೆ. ಡಿಸೆಂಬರ್ನಲ್ಲಿ ಬಿಜೆಪಿಯ ಪರ್ವ ಆರಂಭವಾಗಲಿದೆ. ಅವಾಗ ಬಿಜೆಪಿಯೇ ಲೀಡರ್, ಕಾಂಗ್ರೆಸ್ನಲ್ಲಿ ಎಲ್ಲರೂ ಖಾಲಿಯಾಗಿ ಬಿಜೆಪಿ ಕಡೆ ಬರುತ್ತಾರೆ. ಈಗ ತುಮಕೂರಿಂದ ಮುದ್ದಹನುಮೇಗೌಡ್ರು ಬಂದಿದ್ದಾರೆ. ಇನ್ನೂ ಸ್ವಲ್ಪ ದಿನಗಳಲ್ಲಿ ಮಂಡ್ಯ ಮೈಸೂರು ಭಾಗದಿಂದಲೂ ಬರ್ತಾರೆ. ಮಂಡ್ಯದಲ್ಲಿ ಕನಿಷ್ಠ ನಾಲ್ಕು ಸ್ಥಾನಗಳನ್ನು ಗೆಲ್ಲಬೇಕು. ಈ ನಿಟ್ಟಿನಲ್ಲಿ ಅನ್ಯಪಕ್ಷದವರು ಬಿಜೆಪಿಗೆ ಬರಲಿದ್ದಾರೆ ಎಂದರು.
ಮೈತ್ರಿ ಸರ್ಕಾರದ ವೇಳೆ ಬಂದ 17 ಜನರು ಕೂಡ ಬಿಜೆಪಿಯಲ್ಲಿ ಇರುತ್ತಾರೆ. ಅವರು ಬಿಜೆಪಿಯಲ್ಲೇ ಇರಬೇಕೆಂದು ಮನಸ್ಸು ಮಾಡಿದ್ದಾರೆ. ಅವರು ಯಾರೂ ಕೂಡ ಬೇರೆ ಪಕ್ಷಕ್ಕೆ ಹೋಗಲ್ಲ. 17 ಜನರು ನಮ್ಮೊಂದಿಗೆ ವಿಲೀನ ಆಗಿದ್ದಾರೆ. ಕಾಂಗ್ರೆಸ್ಗೆ 15 ಜನರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇಲ್ಲ. ಅಧಿಕಾರ ಇದ್ದಾಗಲೇ ಉಳಿಸಿಕೊಳ್ಳಲು ಅವರಿಗೆ ಆಗಲಿಲ್ಲ. ಅಧಿಕಾರ ಹೋದ ಮೇಲೆ ಸಾಧ್ಯವಾ? ಎಂದು ಪ್ರಶ್ನಿಸಿದರು.
ಮರಳಿ ಕಾಂಗ್ರೆಸ್ಗೆ ಹೋಗಲ್ಲ: ನಾವು ಬಿಜೆಪಿಯಲ್ಲಿ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡುತ್ತಿದ್ದೇವೆ. ಮತ್ತೆ ಕಾಂಗ್ರೆಸ್ಗೆ ಹೋಗುವ ಪ್ರಮೇಯ ಇಲ್ಲ. ಯಾರೇ ಆಹ್ವಾನ ಮಾಡಿದ್ರೂ ಕಾಂಗ್ರೆಸ್ಗೆ ಹೋಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಹ್ವಾನವನ್ನು ಸಚಿವ ಎಸ್ ಟಿ ಸೋಮಶೇಖರ್ ತಿರಸ್ಕರಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಕಾರಣಕ್ಕೂ ಮತ್ತೆ ಕಾಂಗ್ರೆಸ್ಗೆ ಹೋಗುವ ಪ್ರಮೇಯ ಇಲ್ಲ. ನಾವು ಪಕ್ಷ ಬಿಟ್ಟು ಹೋದಾಗ ಆಕಾಶ ಕೆಳಗೆ ಬಂದರೂ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಅಂತ ಅವರೇ ಹೇಳಿದ್ದಾರೆ. ಈಗ ಸಹಕಾರ ಸಚಿವನಾಗಿ, ಶಾಸಕನಾಗಿ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ನಾವು ಯಾವ ಕಾರಣಕ್ಕೂ ಮತ್ತೆ ಕಾಂಗ್ರೆಸ್ಗೆ ಹೋಗಲ್ಲ ಎಂದರು.
ಓದಿ: ಡಿಕೆಶಿ ಆಹ್ವಾನ ತಿರಸ್ಕರಿಸಿ ಬೇಷರತ್ತಾಗಿ ಬಿಜೆಪಿ ಸೇರಿದ ಮುದ್ದಹನುಮೇಗೌಡ: ಪಕ್ಷ ಸಂಘಟನೆಗೆ ಪಣ ತೊಟ್ಟ ಶಶಿಕುಮಾರ್