ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸರ್ಕಾರದ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರ ಅವರ ಪದಗ್ರಹಣಕ್ಕೆ ಯಾವುದೇ ರೀತಿಯಿಂದ ಅಡ್ಡಿಪಡಿಸುತ್ತಿಲ್ಲ. ಡಿ ಕೆ ಶಿವಕುಮಾರ್ ಅವರಿಗೂ ಸರ್ಕಾರಕ್ಕೂ ಎಣ್ಣೆ ಸೀಗೆಕಾಯಿ ಇದ್ದ ಹಾಗೆ. ಅವರಿಗೆ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಮಾಡಬೇಕಾದ್ರೆ ನಿಯಮಗಳನ್ನೇ ಬದಲಾವಣೆ ಮಾಡಬೇಕಾಗುತ್ತದೆ. ಅವರ ಪದಗ್ರಹಣ ದೇಶಕ್ಕೆ ರಾಜ್ಯಕ್ಕೆ ಬಹಳ ಮುಖ್ಯ ಎಂದು ವ್ಯಂಗ್ಯವಾಗಿ ಹೇಳಿದರು.
ವಿಧಾನಪರಿಷತ್ಗೆ ಈಗಷ್ಟೇ ಚುನಾವಣೆ ಘೋಷಣೆಯಾಗಿದೆ. ಕೇಂದ್ರ ಮತ್ತು ರಾಜ್ಯದ ನಾಯಕರು ಚರ್ಚೆ ಮಾಡಿ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿ ಪ್ರಕಟಿಸುತ್ತಾರೆ. ಈಗಾಗಲೇ ಯಡಿಯೂರಪ್ಪನವರು ಮಾತು ಕೊಟ್ಟಿರುವವರು ಇದ್ದಾರೆ. ಚರ್ಚೆ ನಂತರ ಅಭ್ಯರ್ಥಿಗಳ ಹೆಸರು ಹೇಳಲಾಗುವುದು ಎಂದರು.
ರಾಜ್ಯಸಭೆಯಲ್ಲಿ ಪಕ್ಷದ ವರಿಷ್ಠರು ನಿಷ್ಠಾವಂತರಿಗೆ ಅವಕಾಶ ನೀಡಿದ್ದಾರೆ. ಕಾಂಗ್ರೆಸ್ನಂತೆ ಕುಟುಂಬ ರಾಜಕಾರಣಕ್ಕೆ ಮನೆ ಹಾಕಿಲ್ಲ. ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದ ನಂತರ ಕಾಂಗ್ರೆಸ್ನಲ್ಲಿ ದೊಡ್ಡಮಟ್ಟದ ಬಂಡಾಯ ಶುರುವಾಗಿದೆ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡಲಾಗಿದೆ. ಕಾಂಗ್ರೆಸ್ನಲ್ಲಿ ಕಾರ್ಯಕರ್ತರಿಗೆ ಅವಕಾಶ ಕೊಡಿ ಎಂಬ ಒತ್ತಡ ಹೆಚ್ಚಾಗುತ್ತಿದೆ ಎಂದರು.