ಬೆಂಗಳೂರು: ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಮುಖವಾಗಿ ಪಂಚ ರಾಜ್ಯಗಳ ಚುನಾವಣೆ ಬಗ್ಗೆ ಸಮಾಲೋಚನೆ ನಡೆಯಿತು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿ ಸಭೆಯ ಬಳಿಕ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಈ ಸಭೆಯಲ್ಲಿ ದೇಶಾದ್ಯಂತ 338 ಪ್ರಮುಖರು, ರಾಜ್ಯದಿಂದ 17 ಜನ ಭಾಗವಹಿಸಿದ್ದೆವು. ಕೊರೊನಾ ಸಮರ್ಥವಾಗಿ ನಿರ್ವಹಣೆ ಮಾಡಿದ್ದಕ್ಕೆ ಹಾಗೂ 100 ಕೋಟಿ ಲಸಿಕೆ ಪೂರೈಸಿದ್ದಕ್ಕೆ ಪ್ರಧಾನಿಗೆ ಅಭಿನಂದನೆ ಸಲ್ಲಿಸಲಾಯಿತು.
ಸಭೆಯಲ್ಲಿ ಮುಖ್ಯವಾಗಿ ಐದು ರಾಜ್ಯಗಳ ಚುನಾವಣೆ ಬಗ್ಗೆ ಚರ್ಚೆ ನಡೆಯಿತು. ಆ ರಾಜ್ಯಗಳಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಮೇಲೆ ಚುನಾವಣೆ ಎದುರಿಸುವ ತೀರ್ಮಾನವಾಗಿದೆ. ಐದು ರಾಜ್ಯಗಳ ಚುನಾವಣೆ ಗೆಲ್ಲುವ ಬಗ್ಗೆ ಪ್ರಧಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.
ಇದೇ ವೇಳೆ, ಪುನೀತ್ ರಾಜ್‌ಕುಮಾರ್ ಹಾಗೂ ಸಿ.ಎಂ.ಉದಾಸಿಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪಶ್ಚಿಮ ಬಂಗಾಳದಲ್ಲಿ ಪಕ್ಷದ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣಗಳ ಬಗ್ಗೆ ಚರ್ಚೆ ನಡೆದಿದ್ದು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯ ನಡೆಯನ್ನು ಸಭೆಯಲ್ಲಿ ಖಂಡಿಸಲಾಯಿತು ಎಂದರು.
ಎರಡನೇ ಡೋಸ್ ಲಸಿಕೆ ಅಭಿಯಾನಕ್ಕೆ ವೇಗ ಕೊಡಲು ನಿರ್ಧರಿಸಲಾಯಿತು. ಬಿಜೆಪಿಯ ಕೋಟ್ಯಂತರ ಕಾರ್ಯಕರ್ತರು ಕೋವಿಡ್ ವೇಳೆ ಸೇವಾ ಕಾರ್ಯ ಮಾಡಿದ್ದಾರೆ. ಆ ಕಾರ್ಯಕರ್ತರಿಗೆ ಮೋದಿಯವರು ಅಭಿನಂದಿಸಿದರು. ರಾಜ್ಯಕ್ಕೆ ಸಂಬಂಧಪಟ್ಟಂತೆ ಉಪಸಮರ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದರು.
'ಹಾನಗಲ್ ಗೆಲುವಿನ ಬಗ್ಗೆ ಬೀಗುವುದು ಬೇಡ'
ಹಾನಗಲ್ ಗೆಲುವನ್ನೇ ದೊಡ್ಡ ಗೆಲುವು ಎಂದು ಕಾಂಗ್ರೆಸ್ನವರು ಬೀಗುವುದು ಬೇಡ. ಇಡೀ ದೇಶದಲ್ಲಿ ಕಾಂಗ್ರೆಸ್ ಅವನತಿಯ ಸ್ಥಿತಿಯಲ್ಲಿದೆ.ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಸೋತಿರಿ, ದೊಡ್ಡಬಳ್ಳಾಪುರದಲ್ಲಿ ಯಾಕೆ ಠೇವಣಿ ಕಳೆದುಕೊಂಡ್ರಿ, ಬೆಳಗಾವಿಯಲ್ಲಿ ಯಾಕೆ ಸೋತಿರಿ, ಇದರ ಬಗ್ಗೆ ಕಾಂಗ್ರೆಸ್ನವರು ಮೊದಲು ಸಮಾಲೋಚನೆ ಮಾಡಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು.
ಇದಕ್ಕೆ ಮೊದಲು ಕಾಂಗ್ರೆಸ್ ಉತ್ತರಿಸಲಿ, ಬಳಿಕ ನಾವು ಉತ್ತರ ಕೊಡ್ತೇವೆ. ಹಾನಗಲ್ನಲ್ಲಿ ಮೊದಲಿನಿಂದಲೂ ಬಿಜೆಪಿ ಸುಲಭವಾಗಿ ಗೆಲ್ಲುತ್ತಿರಲಿಲ್ಲ. ಬಹಳ ಕಡಿಮೆ ಅಂತರದಲ್ಲಿಯೇ ನಾವು ಗೆಲ್ಲುತ್ತಿದ್ದೆವು. ಮುಂದೆ ಹಾನಗಲ್ಲಿನಲ್ಲಿ ಪೂರ್ಣ ಪ್ರಮಾಣದಲ್ಲಿ ಗೆಲ್ಲುತ್ತೇವೆ ಎಂದು ಟಾಂಗ್ ನೀಡಿದರು.
'ಕ್ರಿಕೆಟ್ ಆಡೋದು ತಪ್ಪಾ?'
ಬೆಂಗಳೂರು ಮಳೆ ಹಾನಿ ಬಗ್ಗೆ ಸಿಎಂ ಸಭೆಗೆ ಗೈರು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಎಂ ಬೊಮ್ಮಾಯಿಯವರು ಅಂದು ತುರ್ತಾಗಿ ಸಭೆ ನಡೆಸಿದರು. ಹಾಗಾಗಿ ನಮ್ಮನ್ಯಾರನ್ನೂ ಸಭೆಗೆ ಕರೆದಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನೂ ನನ್ನ ಕ್ಷೇತ್ರದಲ್ಲಿ ಮಳೆ ಹಾನಿಯಾಗಿದ್ದ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದೆ. ಅಲ್ಲೇ ಕೆಲವು ಯುವಕರು ಕ್ರಿಕೆಟ್ ಆಡುತ್ತಿದ್ದರು. ಅವರ ಜೊತೆ ಸ್ವಲ್ಪ ಹೊತ್ತು ಕ್ರಿಕೆಟ್ ಆಡಿದೆ. ಇದು ತಪ್ಪಾ ?, ನಾನು ಸ್ಪೋರ್ಟ್ಸ್ ಮ್ಯಾನ್ ಆಗಿದ್ದವನು ಎಂದರು.
ಇದನ್ನೂ ಓದಿ: ಬೆಂಗಳೂರು ಅಭಿವೃದ್ಧಿ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ತುರ್ತು ಸಭೆ