ಬೆಂಗಳೂರು: ಆಸ್ತಿ ನೋಂದಣಿಯಲ್ಲಿ ಆಗುತ್ತಿದ್ದ ಸರ್ವರ್ ಮತ್ತು ಒಟಿಪಿ ತೊಂದರೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಕಂದಾಯ ಸಚಿವ ಆರ್.ಅಶೋಕ್, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸಭೆ ನಡೆಸಿದ ಸಚಿವರು, ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ಶೀಘ್ರವಾಗಿ ಸರಿಪಡಿಸಬೇಕು, ಸರ್ವರ್ ಮತ್ತು ಒಟಿಪಿ ಸಮಸ್ಯೆಯನ್ನು ತಕ್ಷಣವೇ ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಕುರಿತಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸಾರ್ವಜನಿಕರಿಗೆ ಆಸ್ತಿ ನೋಂದಣಿಯ ಸಮಯದಲ್ಲಿ ಸರ್ವರ್ ಮತ್ತು ಒಟಿಪಿಯಿಂದ ಆಗುವ ಸಮಸ್ಯೆಗಳ ಬಗ್ಗೆ ಹಾಗೂ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿನ ಸಮಸ್ಯೆಗಳ ಬಗೆಗೆ ವಿಸ್ತಾರವಾಗಿ ಚರ್ಚೆ ನಡೆಸಲಾಯಿತು.
ಸರ್ಕಾರಿ ಜಮೀನನ್ನು ಬಿಡಿಎಗೆ ಹಸ್ತಾಂತರಿಸುವ ಕುರಿತಂತೆ ಚರ್ಚೆ : ಶಿವರಾಮ ಕಾರಂತ ಬಡಾವಣೆಯ ಮಧ್ಯೆ ಇರುವ ಸುಮಾರು 400 ಎಕರೆಗೂ ಹೆಚ್ಚು ಸರ್ಕಾರಿ ಜಮೀನುಗಳನ್ನು ಬಿಡಿಎಗೆ ಹಸ್ತಾಂತರಿಸುವ ಕುರಿತಂತೆ ಇದೇ ಸಂದರ್ಭದಲ್ಲಿ ಚರ್ಚೆ ನಡೆಸಿ, ಅದಕ್ಕೆ ಸರಿಯಾದ ರಸ್ತೆ ಸಂಪರ್ಕ ಕಲ್ಪಿಸುವಂತೆ ಕಂದಾಯ ಸಚಿವ ಅಶೋಕ್ ಆದೇಶ ನೀಡಿದರು.
ಸರಿಯಾದ ಮೂಲಭೂತ ಸೌಕರ್ಯ ಅಭಿವೃದ್ಧಿ ಮಾಡಿದರೆ ಮಾತ್ರ ಬಡಾವಣೆಯ ಅಭಿವೃದ್ಧಿ ಸಾಧ್ಯ, ಆ ಕಾರಣಕ್ಕೆ ಶೀಘ್ರವಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಬೇಕು ಎಂಬುದಾಗಿ ಸೂಚನೆ ನೀಡಿದರು. ಈ ಸಭೆಯಲ್ಲಿ ಬಿಡಿಎ ಅಧ್ಯಕ್ಷ ಎಸ್. ಆರ್. ವಿಶ್ವನಾಥ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಹಾಗೂ ಬಿಡಿಎ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಯಾರು ಕಾರಣ? ಈ ಬಗ್ಗೆ ಯಾರು, ಏನಂದ್ರು? ಈ ವಿಡಿಯೋ ನೋಡಿ..