ಬೆಂಗಳೂರು: ಲೋಕಾಯುಕ್ತ ತನಿಖೆಗೂ ಮೊದಲೇ ಪತ್ರಕರ್ತರು ಉಡುಗೊರೆ ಪಡೆದುಕೊಂಡಿದ್ದಾರೆ ಎಂದು ತೀರ್ಪು ನೀಡಿರುವ ರಾಜ್ಯ ಕಾಂಗ್ರೆಸ್ ನಾಯಕರು ಕೂಡಲೇ ರಾಜ್ಯದ ಜನತೆಯ ಮತ್ತು ಪತ್ರಕರ್ತರ ಕ್ಷಮೆ ಯಾಚಿಸಬೇಕು ಎಂದು ಕಂದಾಯ ಸಚಿವ ಆರ್ ಅಶೋಕ್ ಆಗ್ರಹಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಪತ್ರಕರ್ತರನ್ನು ಗುರಿಯಾಗಿಟ್ಟುಕೊಂಡು ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಬೆದರಿಕೆ ಹಾಕುತ್ತಿದೆ. ಇಂದಿರಾ ಗಾಂಧಿಯವರಿಗೆ ಬಹಳ ಗುರಿಯಾಗಿದದ್ದು ಮಾಧ್ಯಮ. ದೇಶದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಡೀ ಪತ್ರಕರ್ತರನ್ನು ಜೈಲಿಗಟ್ಟಿದ ಕಳಂಕ ಕಾಂಗ್ರೆಸ್ಗಿದೆ. ಇವತ್ತು ಆ ಹಾದಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾಡುತ್ತಿರುವ ಹೇಡಿತನವಿದು. ಪತ್ರಕರ್ತರ ಆತ್ಮವಿಶ್ವಾಸ ಕುಗ್ಗಿಸುವ ಕೆಲಸ ನಡೆಯುತ್ತಿದೆ. ಗಿಫ್ಟ್ ಹೆಸರಲ್ಲಿ ಕಾಂಗ್ರೆಸ್ ಬ್ಲಾಕ್ ಮೇಲ್ ಮಾಡುತ್ತಿದೆ ಎಂದು ಆರೋಪಿಸಿದರು.
ಅಮೆರಿಕ, ರಷ್ಯಾ ಅಧ್ಯಕ್ಷರು ಮೋದಿ ಮಾಡಿರುವ ಕೆಲಸಗಳನ್ನು ಹೊಗಳುತ್ತಿದ್ದಾರೆ. ಇದು ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದೆ. ಇದನ್ನು ಸಹಿಸಲು ಆಗದೆ ಹೀಗೆ ಮಾಡುತ್ತಿರಬಹುದು. 2ಜಿ ಹಗರಣ, ಬೆಂಗಳೂರಿನ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ಭ್ರಷ್ಟಾಚಾರದಿಂದ ಅರ್ಧಕ್ಕೆ ನಿಲ್ಲಿಸಿದರು. ಒಂದು ವರ್ಗದ ಪತ್ರಕರ್ತರಿಗೆ ಮಾತ್ರ ಗಿಫ್ಟ್ ಕೊಡಬೇಕು. ಲ್ಯಾಪ್ ಟ್ಯಾಪ್ ಕೊಡಬೇಕು ಅಂತಾ ಸಿದ್ದರಾಮಯ್ಯ ಸರ್ಕಾರದಲ್ಲಿ ಆದೇಶ ಹೊರಡಿಸಿದ್ದರು.
ಪತ್ರಕರ್ತರಲ್ಲೂ ಕೂಡ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಬೇಧ ಭಾವದ ಒಡಕು ಮಾಡಿದ್ದಾರೆ. ಲಿಂಗಾಯುತ -ವೀರಶೈವ ಬೇರ್ಪಡಿಸೋಕೆ ಹೋದಂತೆ ಪತ್ರಕರ್ತರನ್ನು ಜಾತಿ, ಧರ್ಮಾಧಾರಿತವಾಗಿ ಬೇರೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಈ ಅಂಟು ಬಂದುಬಿಟ್ಟಿದೆ. ಒಡೆದು ಆಳುವ ನೀತಿಯನ್ನು ಇವತ್ತು ಸಮಾಜದ ನಾಲ್ಕನೇ ಅಂಗ ಪತ್ರಿಕಾರಂಗದ ಮೇಲೆ ಮಾಡುತ್ತಿದ್ದಾರೆ.
ಜನರ ವಿಶ್ವಾಸವನ್ನ ಮಾಧ್ಯಮ ಗಳಿಸಿತ್ತು. ಸತ್ಯವನ್ನ ಹೇಳುವುದು ಮಾಧ್ಯಮ. ಆದರೆ ಅದನ್ನು ಕೂಡ ಇವತ್ತು ದಾಳವಾಗಿ ಮಾಡಿಕೊಳ್ಳುತ್ತಿದ್ದಾರೆ. 61 ಲಕ್ಷದ ಜಾಹೀರಾತನ್ನ ಉರ್ದು ಪತ್ರಿಕೆಗಳಿಗೆ ಮಾತ್ರ ಕೊಡಿ ಅಂತಾ ಸಿದ್ದರಾಮಯ್ಯ ಬರೆದಿದ್ದರು. ಮಾಧ್ಯಮವನ್ನು ಕೂಡ ಹೊಡೆಯುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ಇವತ್ತು ಕಾಂಗ್ರೆಸ್ ಪಕ್ಷದವರು ಪತ್ರಿಕಾರಂಗದ ಮೇಲೆ ಮಾಡಿರುವುದನ್ನ ಬಿಜೆಪಿ ಖಂಡಿಸುತ್ತಿದೆ ಎಂದರು.
ಡಿಕೆಶಿ ಐಪೋನ್ ಕೊಟ್ಟಿದ್ದಾರೆ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಮಗೆ ಬೇಕಾದವರಿಗೆ ಈ ಹಿಂದೆ ಐಪೋನ್ ಕೊಟ್ಟಿದ್ದಾರೆ. ಚುನಾಯಿತ ಪ್ರತಿನಿಧಿಗಳಿಗೆ ಕೊಟ್ಟಿದ್ದಾರೆ. ಜಲಭಾಗ್ಯ ನಿಗಮದಿಂದ ಐಪೋನ್ ಖರೀದಿಸಿ ಪತ್ರಕರ್ತರಿಗೆ ಕೊಡಲಾಗಿತ್ತು. ಅಂದೇ ಅಂದಿನ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿಯವರು ಈ ರೀತಿಯ ಲಂಚಕೊಡುವ ಪ್ರವೃತ್ತಿ ಬಿಡು ಅಂತಾ ಡಿ ಕೆ ಶಿವಕುಮಾರ್ಗೆ ಹೇಳಿದ್ದರು ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾಯುತ್ತಿದೆ. ದೆಹಲಿಯ ನಾಯಕರಿಗೆ ಕರ್ನಾಟಕವನ್ನ ಎಟಿಎಂ ಮಾಡಲು ದಿವಾಳಿ ಎದ್ದವರ ಜೇಬು ತುಂಬಿಸಲು ಗೂಬೆ ಕಣ್ಣಿಟ್ಟಿದ್ದಾರೆ ಎಂದ ಅಶೋಕ್ ನಂತರ ಗೂಬೆ ಕಣ್ಣು ಪದ ಬೇಡ ವಕ್ರದೃಷ್ಟಿ ಇಟ್ಟಿದ್ದಾರೆ ಎನ್ನುತ್ತಾ ಈಗ ಮುಖ್ಯಮಂತ್ರಿಗಳ ಕಚೇರಿಯಿಂದ ಗಿಫ್ಟ್ ಕೊಟ್ಟಿದ್ದಾರೆ ಅನ್ನೋದರ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಈ ಬಗ್ಗೆ ತನಿಖೆಯಾಗುತ್ತಿದೆ. ಆದರೆ ಇವರು ಮೊದಲೇ ಪತ್ರಕರ್ತರು ತೆಗೆದುಕೊಂಡಿದ್ದಾರೆ ಅಂತಾ ಜಡ್ಜಮೆಂಟ್ ಕೊಟ್ಟಿದ್ದಾರೆ. ಪತ್ರಕರ್ತರು ತಪ್ಪಿತಸ್ಥರು ಅಂತಾ ಹೇಳೋಕೆ ಇವರಿಗೆ ಅಧಿಕಾರ ಕೊಟ್ಟವರು ಯಾರು? ಇವರು ಕೂಡಲೇ ರಾಜ್ಯದ ಜನರಿಗೆ ಹಾಗೂ ಪತ್ರಕರ್ತರಿಗೆ ಕ್ಷಮೆ ಕೇಳಬೇಕು. ಇದೇ ಮೊದಲ ಬಾರಿಗೆ ಇತಿಹಾಸದಲ್ಲಿ ಕರ್ನಾಟಕದ ಪತ್ರಕರ್ತರ ಮೇಲೆ ಆರೋಪ ಮಾಡಲಾಗಿದೆ ಎಂದರು.
ಉಡುಗೊರೆಗೆ ಸಮರ್ಥನೆ: ಅಶೋಕ್ ನಂತರ ಮಾತನಾಡಿದ ಸಚಿವ ಸುಧಾಕರ್, ದೀಪಾವಳಿ ಹಬ್ಬದ ಉಡುಗೊರೆ ಹಾಗೂ ಮಾಧ್ಯಮದ ವೃತ್ತಿ ಬದುಕಿಗೆ ಕಾಂಗ್ರೆಸ್ ಇರುಸು ಮುರಿಸು ಉಂಟುಮಾಡಿದೆ. ಉಡುಗೊರೆ ಹಬ್ಬದ ಸಮಯದಲ್ಲಿ ಕೊಡುವುದು ಹಿಂದೂ ಸಂಪ್ರದಾಯ ಎಂದು ಗಿಫ್ಟ್ ಕೊಡುವ ಸಂಪ್ರದಾಯವನ್ನು ಸಮರ್ಥಿಸಿಕೊಂಡರು.
ಸಂಸ್ಕೃತಿ ಉಡುಗೊರೆ ಹಾಗೂ ಸಿಹಿ ಹಂಚಿಕೊಳ್ಳುತ್ತೇವೆ. ಬಣ್ಣವನ್ನೂ ಹಚ್ಚಿಕೊಳ್ಳುತ್ತೇವೆ. ನಮ್ಮ ಹಿಂದೂ ಧರ್ಮದ ಹಬ್ಬದ ಮೇಲೆ ದ್ವೇಷ ಯಾಕೆ..? ಯಾರಾದರೂ ನಮಗೆ ಹಣ ಕೊಟ್ಟಿದ್ದಾರೆ ಅಂತ ನಿಮಗೆ ಹೇಳಿದ್ದಾರಾ..? ಉಡುಗೊರೆ ಕೊಡುವುದು ತಪ್ಪು ಆಗಿದ್ರೆ, ಉಡುಗೊರೆ ತೆಗೆದುಕೊಳ್ಳುವುದು ಕೂಡ ತಪ್ಪಲ್ವಾ..? ಹಾಗಾದರೆ ನಿಮ್ಮ ಸರ್ಕಾರದಲ್ಲಿ ಉಡುಗೊರೆ ಕೊಟ್ಟು ಉಡುಗೊರೆ ತೆಗೆದುಕೊಂಡಿಲ್ವಾ..? ನಮ್ಮ ಸರ್ಕಾರದ ಯಶಸ್ವಿ ಕಾರ್ಯಕ್ರಮ ನೋಡಿ ತಡೆದುಕೊಳ್ಳಲು ಆಗಲ್ಲ.
ವಿಶೇಷವಾಗಿ ಮೋದಿ ಕಾರ್ಯಕ್ರಮ ನೋಡಿ ಹೊಟ್ಟೆ ಉರಿ ನಿಮಗೆ. ಸ್ವತಃ ಪ್ರಿಯಾಂಕ್ ಖರ್ಗೆ ಕಿಯೋನೆಕ್ಷ್ ಮೂಲಕ 40 ಜನರಿಗೆ ಉಡುಗೊರೆ ಕೊಟ್ಟಿಲ್ವಾ..? ನನ್ನ ಬಳಿ ದಾಖಲೆ ಸಮೇತ ಹೆಸರು ಇದೆ. ಇವರಿಗೆ ಯಾವ ನೈತಿಕತೆ ಇದೆ..? ನಾನು ಕೂಡ ಸಿಎಂ ಹೇಳಿಕೆಯಂತೆ ಪತ್ರಕರ್ತರ ಪರವಾಗಿ ಇದ್ದೇವೆ ಎಂದು ಸಿಎಂ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡರು.
ನಂದೀಶ್ ಸಾವು ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಸುಧಾಕರ್, ನಂದೀಶ್ ಸಾವು ಸಾಮಾನ್ಯ ಸಾವು. ನಿಮ್ಮ ಕಾಲದಲ್ಲಿ ಆತ್ಮಹತ್ಯೆ ಆಗಿಲ್ವಾ..? ಗಣಪತಿ ಆತ್ಮಹತ್ಯೆ ಆಯ್ತು..! ಮಹಿಳಾ ಅಧಿಕಾರಿ ಸ್ವಯಂ ನಿವೃತ್ತಿ ತೆಗೆದುಕೊಂಡ್ರು.. ನಿಮ್ಮ ಸಚಿವರ ಮೇಲೆ ಆರೋಪ ಮಾಡಿ ಸಾವಾಯ್ತು. ಆದರೆ ನೀವೇ ಎಲ್ಲದಕ್ಕೂ ರಾಜಕೀಯ ಬಣ್ಣ ಬಳಿಯುತ್ತಿರಾ. ಕಂದಾಯ ಇಲಾಖೆ ಅನೇಕ ಕಾರ್ಯಕ್ರಮ ಆಗಿದೆ. ಸಿಎಂ ಕೂಡ ಸಮುದಾಯದ ಅಭಿವೃದ್ಧಿಗೆ ಮುಂದಾಗಿದ್ದಾರೆ. ಇದನ್ನು ಗಮನಿಸಿದ ನಿಮಗೆ ಹೊಟ್ಟೆ ಉರಿ ಎಂದರು.
ಓದಿ: ಪತ್ರಕರ್ತರಿಗೆ ಗಿಫ್ಟ್ ವಿಚಾರ: ಅದರ ಬಗ್ಗೆ ಮಾಹಿತಿ ಇಲ್ಲವೆಂದ ಗೃಹ ಸಚಿವ ಆರಗ ಜ್ಞಾನೇಂದ್ರ