ಬೆಂಗಳೂರು : ನಾಯಕತ್ವ ಬದಲಾವಣೆ ಮಾಡೋದಾದ್ರೆ, ನಿಮ್ಗೆ ಹೇಳೇ ಮಾಡುತ್ತೇವೆ. ಆದರೆ, ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದರು.
ಓದಿ: ಇದೇನು ‘ಸಾತ್ ಬಾರಾ ಉತಾರ’ ಅಲ್ಲ, ಮಹಾರಾಷ್ಟ್ರದ ಭೂಪಟವನ್ನೇ ಬದಲಿಸಬೇಕಾದೀತು : ರಮೇಶ ಕತ್ತಿ ಖಡಕ್ ಎಚ್ಚರಿಕೆ
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ನೇತೃತ್ವದ ಸರ್ಕಾರ ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆ. ಯಾವುದೇ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಯಾರೋ ಒಬ್ಬರು ಹೇಳಿಕೆ ಕೊಡುತ್ತಿದ್ದಾರೆ.
ಆ ಬಗ್ಗೆ ರಾಜ್ಯಾಧ್ಯಕ್ಷರು ಹಾಗೂ ಸಂಬಂಧಿಸಿದ ನಾಯಕರು ಗಮನಿಸುತ್ತಿದ್ದಾರೆ. ರಾಜ್ಯಾಧ್ಯಕ್ಷರು ಇವತ್ತು ಕೂಡ ಈ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಕೇಂದ್ರದವರು ಕೂಡ ಶಾಸಕರುಗಳ ಹೇಳಿಕೆಗಳನ್ನು ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.
ಯಾವುದೇ ಶಾಸಕರು ತಮ್ಮ ನೋವನ್ನು ಸಿಎಂ ಜತೆ ಹೇಳಿಕೊಳ್ಳಲಿ. ಅಲ್ಲಿ ಆಗಿಲ್ಲ ಅಂದರೆ ಕೇಂದ್ರದ ನಾಯಕರ ಜತೆ ಬಂದು ಹೇಳಿ. ಆದರೆ, ಬಹಿರಂಗವಾಗಿ ಎಲ್ಲಿಯೂ ಹೇಳಿಕೆ ಕೊಡ್ಬೇಡಿ. ಇನ್ನುಳಿದಂತೆ ಒಬ್ಬರು ಮಾತಾಡಿರೋದರ ಬಗ್ಗೆ ಕೇಂದ್ರ ಶಿಸ್ತು ಸಮಿತಿ ಗಮನಿಸುತ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಒಂದು ನಿರ್ಣಯ ಕೂಡ ಮಾಡಲಿದೆ ಎಂದರು.
ಸಿದ್ದರಾಮಯ್ಯಗೆ ಟಾಂಗ್: ಆತ್ಮಬರ್ಬರ, ದಿವಾಳಿ ಬಜೆಟ್ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಜೋಶಿ, ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯಗೆ ಕಾಂಪಿಟೇಷನ್ ಇದೆ. ಡಿಕೆಶಿ ಜೊತೆ ಅವರು ಅಸ್ತಿತ್ವಕ್ಕಾಗಿ ಹೋರಾಡ್ತಿದ್ದಾರೆ ಎಂದು ಟಾಂಗ್ ನೀಡಿದರು. ಸಿದ್ದರಾಮಯ್ಯ ಬಜೆಟ್ ಹೊಗಳಿದ್ರೆ ಕಾಂಗ್ರೆಸ್‌ನಲ್ಲಿ ಉಳಿಯಕ್ಕಾಗಲ್ಲ. ಹಾಗಾಗಿ, ಬಜೆಟ್ ಬಗ್ಗೆ ಸಿದ್ದರಾಮಯ್ಯ ತೆಗಳಿದ್ದಾರೆ. ದೇಶದಲ್ಲಂತೂ ಕಾಂಗ್ರಸ್ ಅಸ್ತಿತ್ವ ಕಳಕೊಂಡಿದೆ ಎಂದರು.
ರೈತರ ಜೊತೆ ಮಾತುಕತೆಗೆ ಸಿದ್ಧ: ದೆಹಲಿ ರೈತರ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು, ಸರ್ಕಾರ ಮಾತುಕತೆಗೆ ಸಂಪೂರ್ಣ ಸಿದ್ಧವಿದೆ ಎಂದು ತಿಳಿಸಿದರು. ಕೃಷಿ ಕಾನೂನಿನಲ್ಲಿ ಯಾವುದೇ ಲೋಪ ಇಲ್ಲ. ಸರ್ಕಾರ ಮಾತುಕತೆಗೆ ಸಿದ್ಧ ಇದೆ. ಎರಡು ರಾಜ್ಯ ಬಿಟ್ಟರೆ ಬೇರೆ ರಾಜ್ಯಗಳಲ್ಲಿ ಪ್ರತಿಭಟನೆ ಆಗುತ್ತಿಲ್ಲ, ಇವತ್ತಿನ ಹೆದ್ದಾರಿ ತಡೆಯೂ ಯಶಸ್ವಿಯಾಗಿಲ್ಲ. ಒಂದೆರಡು ರಾಜ್ಯಗಳಲ್ಲಿ ಬಿಟ್ಟರೆ ಬೇರೆಲ್ಲೂ ಅಷ್ಟಾಗಿ ನಡೆದಿಲ್ಲ. ರೈತರು ಕೇವಲ ಸಾಂಕೇತಿಕವಾಗಿ ರಸ್ತೆ ತಡೆ ಮಾಡಿದ್ದಾರೆ. ಆದರೂ ನಾವು ನಂಬರ್ ಮೇಲೆ ಹೊರಟಿಲ್ಲ. ಅವರ ಜೊತೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಜಗತ್ತಿನ 3ನೇ ದೊಡ್ಡ ಆರ್ಥಿಕ ದೇಶವಾಗುವ ನಿರೀಕ್ಷೆ : 2030ರಲ್ಲಿ ಭಾರತ ಕನಿಷ್ಟ ಜಗತ್ತಿನ 3ನೇ ದೊಡ್ಡ ಆರ್ಥಿಕ ದೇಶವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಕೇಂದ್ರ ಬಜೆಟ್ ಸಂಬಂಧ ವಿವರಣೆ ನೀಡಿದ ಅವರು, 22-23ರಲ್ಲಿ ಭಾರತ 11% ದರದಲ್ಲಿ ಅಭಿವೃದ್ಧಿಯಾಗಲಿದೆ ಎಂಬ ಅಂದಾಜಿದೆ. ಕೊರೊನಾ ಬಳಿಕ ಭಾರತ ಅತಿವೇಗದಲ್ಲಿ ಬೆಳೆಯುತ್ತಿರುವ ದೇಶವಾಗಿದೆ.
ಈ ಬಾರಿ ಒಂದು ತೆರಿಗೆ ಹೇರಿ ಹಣ ಸಂಗ್ರಹ ಮಾಡಬೇಕಾಗಿತ್ತು, ಇನ್ನೊಂದು ಸಾಲ ಮಾಡುವ ಆಯ್ಕೆಯಿತ್ತು. ಸಾಲ ಮಾಡುವ 2ನೇ ಆಯ್ಕೆ ಕಷ್ಟಕರವಾಗಿದ್ದರೂ, ಜನರ ಹಿತದೃಷ್ಟಿಯಿಂದ ಎರಡನೇ ಆಯ್ಕೆ ಆರಿಸಿದೆ ಎಂದು ವಿವರಿಸಿದರು. ಈ ಬಾರಿ ಬಜೆಟ್ನಲ್ಲಿ ಮೂಲಸೌಕರ್ಯಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ.
ಮನೆಗಳಿಗೆ ಶುದ್ಧ ಕುಡಿಯುವ ನೀರು ಸೌಕರ್ಯ ನೀಡಲು ನಿರ್ಧರಿಸಲಾಗಿದೆ. ನಗರ ಜನಜೀವನ್ ಮಿಷನ್ ಯೋಜನೆ ಮೂಲಕ ಪ್ರತೀ ಮನೆಗೂ ನಲ್ಲಿ ಸಂಪರ್ಕ ನೀಡಲಾಗುತ್ತದೆ. ಇನ್ನು, 3.70ಲಕ್ಷ ಕೋಟಿ ರೂ.ನಲ್ಲಿ ಗ್ರಾಮೀಣ ಭಾಗದ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸಲಾಗುತ್ತದೆ ಎಂದರು.
ಉಜ್ವಲಾ ಯೋಜನೆಯಡಿ ಇನ್ನೂ ಒಂದು ಕೋಟಿ ಜನರಿಗೆ ಅಡುಗೆ ಗ್ಯಾಸ್ ನೀಡಲಾಗುತ್ತದೆ. ನಮ್ಮ ಮೆಟ್ರೋಗೆ 14,778 ಕೋಟಿ ರೂ. ನೀಡಲಾಗಿದೆ. ರೈಲು ಹಳಿ ಡಬ್ಲಿಂಗ್ ಗೆ 3,900 ಕೋಟಿ ರೂ ಕರ್ನಾಟಕಕ್ಕೆ ಕೊಡಲಾಗಿದೆ. ಭಾರತ 5 ಟ್ರಿಲಿಯನ್ ಆರ್ಥಿಕತೆಯತ್ತ ಹೆಜ್ಜೆ ಇಟ್ಟಿದೆ. 2010-11 ರಲ್ಲಿ ಭಾರತ 11 ನೇ ಸ್ಥಾನದಲ್ಲಿತ್ತು. ಈಗ ಆರನೇ ಸ್ಥಾನದಲ್ಲಿದ್ದೇವೆ ಎಂದು ತಿಳಿಸಿದರು.