ಬೆಂಗಳೂರು : ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ) ಅಡಿ ಯಾವುದೇ ಡೈರಿ ಉತ್ಪನ್ನಗಳ ಆಮದಿಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್ ಗೋಯಲ್ ಅವರಿಗೆ ಪತ್ರ ಬರೆದಿದ್ದಾರೆ.
ಎಫ್ಟಿಎ ಅಡಿಯಲ್ಲಿ ಯಾವುದೇ ಡೈರಿ ಉತ್ಪನ್ನಗಳ ಆಮದನ್ನು ಅನುಮತಿಸುವುದು ಭಾರತೀಯ ಡೈರಿ ಉದ್ಯಮ ಮತ್ತು ದೇಶದ ಇಡೀ ಕೃಷಿ ಸಮುದಾಯವನ್ನು ಸಂಕಷ್ಟಕ್ಕೀಡು ಮಾಡುವ ಸಾಧ್ಯತೆ ಇದೆ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘದ (ಆಸಿಯಾನ್) 10 ಸದಸ್ಯರು ಮತ್ತು ಅದರ 6 ಪಾಲುದಾರರಾದ ಚೀನಾ, ಜಪಾನ್, ಭಾರತ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಏಷಿಯಾನ್ ಗುಂಪುಗಳಾದ ಬ್ರೂನಿ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್ ಗಳ ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದವನ್ನು ಪ್ರಸ್ತಾಪಿಸಿದೆ.
ಒಂದು ವೇಳೆ ನಾವು ನ್ಯೂಜಿಲೆಂಡ್‌ನೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಒಪ್ಪಿದರೆ, ಯುರೋಪ್ ಖಂಡ ಮತ್ತು ಯುಎಸ್‌ಎಯ ಹಾಗೂ ಇತರ ದೇಶಗಳಿಗೂ ನಾವು ಒಪ್ಪಿಗೆ ನೀಡುವ ಪರಿಸ್ಥಿತಿ ಎದುರಾಗಬಹುದು. ಆಗ ದೇಶಿ ಮಾರುಕಟ್ಟೆಯ ಪರಿಸ್ಥಿತಿ ನಮ್ಮ ಕೈ ಮೀರಿ ಹೋಗುವ ಸಾಧ್ಯತೆಯಿದೆ. ಆರಂಭದಲ್ಲಿ, ನಾವು ಡೈರಿ ಉತ್ಪನ್ನಗಳನ್ನು ಈ ಮೇಲಿನ ದೇಶಗಳಿಂದ ಅಗ್ಗದ ಬೆಲೆಗೆ ಪಡೆಯಬಹುದು. ಒಂದು ವೇಳೆ ಭಾರತದಲ್ಲಿ ಡೈರಿ ಉದ್ಯಮ ಕುಸಿತಗೊಂಡರೆ ಮುಂದಿನ ದಿನಗಳಲ್ಲಿ ಅಗ್ಗವಾಗಿ ದೊರೆಯುವ ಉತ್ಪನ್ನಗಳಿಗೆ ಭಾರಿ ಬೆಲೆಯನ್ನು ಜನಸಾಮಾನ್ಯ ನೀಡಬೇಕಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿನ ಡೈರಿ ಉದ್ಯಮ ಸಹಕಾರ ಮಾದರಿಯಲ್ಲಿ ನಡೆಯುತ್ತಿರುವುದರಿಂದ ಭಾರತೀಯ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಅತ್ಯಂತ ಉತ್ತಮ ಬೆಲೆಗೆ ಪಡೆಯಲು ಸಹಾಕಾರಿಯಾಗಿದೆ. ಆದ್ದರಿಂದ, ಮುಕ್ತ ವ್ಯಾಪರ ಒಪ್ಪಂದಕ್ಕೆ ಒಪ್ಪದಿದ್ದರೆ ನಾವು ಭಾರತೀಯ ಡೈರಿ ಉದ್ಯಮವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದು ಹಾಲು ಉತ್ಪಾದಕರು ಮತ್ತು ಗ್ರಾಹಕರ ಹಿತಾಸಕ್ತಿ ಕಾಪಾಡಲು ಸಹಕಾರಿಯಾಗಿದೆ ಎಂದು ಮನವಿ ಮಾಡಿದ್ದಾರೆ.