ಬೆಂಗಳೂರು: ಸತತ ಮಳೆಯಿಂದ ನಲುಗಿರುವ ರಾಮನಗರ ಜಿಲ್ಲೆಯ ಮಳೆಹಾನಿ ಹಾಗು ಅನಾಹುತದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಶ್ವತ್ಥನಾರಾಯಣ ಚರ್ಚೆ ನಡೆಸಿದ್ದು, ತ್ವರಿತ ಪರಿಹಾರ ಕಾರ್ಯಾಚರಣೆ ಕುರಿತು ಮಾತುಕತೆ ನಡೆಸಿದ್ದಾರೆ. ಆರ್.ಟಿ ನಗರದಲ್ಲಿರುವ ಸಿಎಂ ಖಾಸಗಿ ನಿವಾಸಕ್ಕೆ ಭೇಟಿದ ಸಚಿವ ಅಶ್ವತ್ಥನಾರಾಯಣ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತುಕತೆ ನಡೆಸಿದರು.
ರಾಮನಗರ ಜಿಲ್ಲೆಯ ಸ್ಥಿತಿಗತಿ ಕುರಿತು ವಿವರ ನೀಡಿದ ಸಚಿವರು, ಮಳೆಹಾನಿ ಪರಿಹಾರ ಕಾರ್ಯಾಚರಣೆ ಕುರಿತು ಚರ್ಚಿಸಿದರು. ನಂತರ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುವಂತೆ ಮನವಿ ಮಾಡಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಿಎಂ ಮಧ್ಯಾಹ್ನ ರಾಮನಗರಕ್ಕೆ ಭೇಟಿ ನೀಡಿ ಮಳೆಹಾನಿ ವೀಕ್ಷಣೆ ಮಾಡಿ ಪರಿಹಾರ ಕಾರ್ಯಾಚರಣೆ ಕುರಿತು ಅಧಿಕಾರಿಗಳಿಗೆ ಮತ್ತಷ್ಟು ಸಲಹೆ ಸೂಚನೆ ನೀಡುವ ಭರವಸೆ ನೀಡಿದರು.
ಸಿಎಂ ಭೇಟಿ ಬಳಿಕ ಮಾತನಾಡಿದ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ, ಜಿಲ್ಲೆಯಲ್ಲಿ ಸೃಷ್ಟಿಯಾಗಿರುವ ಪ್ರವಾಹ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಬೊಮ್ಮಾಯಿಯವರ ಜತೆ ಬೆಳಗ್ಗೆ ಚರ್ಚಿಸಿದೆ. ಜತೆಗೆ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದು ತತ್‍ಕ್ಷಣಕ್ಕೆ ಅಗತ್ಯವಿರುವ ಕ್ರಮಗಳನ್ನು ಕ್ಷಿಪ್ರವಾಗಿ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಆದೇಶಿಸಿದ್ದೇನೆ ಎಂದಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಅಪಾರ ಹಾನಿಯಾಗಿದೆ. ಸಂತ್ರಸ್ತರಿಗೆ ತಕ್ಷಣವೇ ಗಂಜಿಕೇಂದ್ರ, ಸುರಕ್ಷಿತ ಸ್ಥಳಾಂತರ, ದವಸ-ಧಾನ್ಯ ವಿತರಣೆ ಮತ್ತು ಮನೆಗಳಿಂದ ನೀರು ತೆರವಿಗೆ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ. ಜಿಲ್ಲೆಯ ಹಲವು ಕೆರೆಗಳು ಕೋಡಿ ಬಿದ್ದು ಬೆಂಗಳೂರು-ಮೈಸೂರು ಹೆದ್ದಾರಿಯ ಮೇಲೆ ನೀರು ನುಗ್ಗಿ, ಅಸ್ತವ್ಯಸ್ತವಾಗಿದೆ. ಆದ್ದರಿಂದ ಎರಡೂ ನಗರಗಳ ನಡುವೆ ಪ್ರಯಾಣ ಮಾಡುವವರು ಪರ್ಯಾಯ ಮಾರ್ಗಗಳನ್ನು ಬಳಸಬೇಕು ಎಂದು ಅವರು ಮನವಿ ಮಾಡಿದರು.
ರಾಮನಗರದಲ್ಲಿ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಇಂಥವರಿಗೂ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಮೊದಲಿಗೆ ನೀರು ತೆರವುಗೊಳಿಸಲು ಆದ್ಯತೆ ನೀಡಲಾಗಿದೆ. ಇದರ ಜತೆಗೆ ಮಳೆ ನೀರಿನ ಹರಿವನ್ನು ಬೇರೆಡೆಗೆ ಹೊರಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಕೆರೆಗಳು ಕೋಡಿ ಬಿದ್ದು ಸಾವಿರಾರು ಎಕರೆ ಜಮೀನಿಗೆ ನುಗ್ಗಿ, ಅಪಾರ ಪ್ರಮಾಣದ ಬೆಳೆಯೂ ಹಾನಿಯಾಗಿದೆ. ಬೆಳೆ ನಷ್ಟದ ಅಂದಾಜು ಮಾಡಲು ಕೃಷಿ ಮತ್ತು ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಲು ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಇದನ್ನೂ ಓದಿ : ರಾರಾವಿ ಬಳಿ ಸೇತುವೆ ಮುಳುಗಡೆ.. ರಸ್ತೆ ಸಂಚಾರ ಬಂದ್