ಬೆಂಗಳೂರು: ವಿದ್ಯಾರ್ಥಿಗಳ ಬ್ಯಾಗ್ ಭಾರ ಕಡಿಮೆ ಮಾಡಲು ನಿಟ್ಟಿನಲ್ಲಿ, ನೋ ಬ್ಯಾಗ್ ಡೇ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಈಗ ನೋ ಬ್ಯಾಗ್ ಡೇಗೂ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದಿಂದ ವಿರೋಧ ವ್ಯಕ್ತವಾಗಿದೆ.
ಪ್ರತಿ ಶನಿವಾರ ನೋ ಬ್ಯಾಗ್ ಡೇ ಮಾಡಿದರೆ 44 ಶನಿವಾರಗಳು ಹೋಗಿ ಬಿಡುತ್ತೆ. ಇದರ ಬದಲು, ಒಂದು ವಾರ ನೋ ಬ್ಯಾಗ್ ಡೇ, ಮತ್ತೊಂದು ವಾರ ರಜೆ, ಮತ್ತೊಂದು ಶನಿವಾರ ಅರ್ಧ ದಿನ, ಇನ್ನೊಂದು ಶನಿವಾರ ಪೂರ್ತಿ ದಿನ ಕೆಲಸ ಮಾಡಬೇಕು ಅಂತ ಮನವಿ ಮಾಡಿದ್ದಾರೆ. ಇದರಿಂದ ಉಂಟಾಗುವ ಪರಿಣಾಮವನ್ನು ಅರಿತು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಅಂತ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ವಿದ್ಯಾರ್ಥಿಗಳ ಹೋಮ್ ವರ್ಕ್ ವಿಷಯವಾಗಿ ಮಾತಾನಾಡಿದ ಸುರೇಶ್ ಕುಮಾರ್, ವಿದ್ಯಾರ್ಥಿಗಳಿಗೆ ಮನೆ ಪಾಠ ಒಂದು ರೀತಿಯಲ್ಲಿ ಹೊರೆ, ಒತ್ತಡ ಮತ್ತು ಶಿಕ್ಷೆಯಾಗಿದೆ. ಮನೆ ಪಾಠದಿಂದ ವಿದ್ಯಾರ್ಥಿಗಳಲ್ಲಿರುವ ಉಂಟಾಗುತ್ತಿರುವ ಒತ್ತಡ ನಿವಾರಣೆಗಾಗಿ ಇಲಾಖೆ ಕ್ರಮ ಕೈಗೊಳ್ಳಲಿದೆ. ಶಾಲೆಗಳಲ್ಲಿಯೇ ಹೋಮ್ ವರ್ಕ್ ಮಾಡಿಸುವುದು ಅಥವಾ ಪ್ರಮಾಣವನ್ನು ಕಡಿತಗೊಳಿಸುವುದು ಸೇರಿದಂತೆ ಹಲವಾರು ರೀತಿಯಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದರು. ಹಲವರು ಶಾಲೆಗಳಲ್ಲಿ ನೋ ಹೋಮ್ ವರ್ಕ್ ಡೇ ಅಂತಾಲೇ ಮಾಡಲಾಗುತ್ತಿದೆ. ಇದನ್ನು ನಮ್ಮಲ್ಲಿ ಯಾವ ರೀತಿಯಲ್ಲಿ ತರಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಗುವುದು ಅಂತ ತಿಳಿಸಿದರು.
ಇನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕ್ಯಾಮ್ಸ್ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಯೊಂದಿಗೆ ಸಚಿವ ಸುರೇಶ್ ಕುಮಾರ್ ಸಭೆ ನಡೆಸಿ, ಅವರ ಸಮಸ್ಯೆಯನ್ನ ಆಲಿಸಿದರು. ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ. ಜಗದೀಶ್, ಪ್ರಾಥಮಿಕ ಶಿಕ್ಷಣ ನಿರ್ದೇಶಕ ಮಾದೇಗೌಡ ಹಾಗೂ ಖಾಸಗಿ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಉಪಸ್ಥಿತರಿದ್ದರು.