ಬೆಂಗಳೂರು: ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನವಿದ್ದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ವಿವಾದಕ್ಕೆ ಸ್ಪಷ್ಟನೆ ನೀಡಿರುವ ಪೌರಾಡಳಿತ ಸಚಿವ ನಾರಾಯಣ ಗೌಡ ತಮಗೆ ಕೊಟ್ಟಿರುವ ಖಾತೆಗಳ ಬಗ್ಗೆ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಂದು ಬೆಳಗ್ಗೆ ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳು ಈ ವಿಚಾರ ಪ್ರಸ್ತಾಪಿಸಿದಾಗ ಗಲಿಬಿಲಿಗೊಂಡ ಸಚಿವ ನಾರಾಯಣ ಗೌಡ ನನಗೆ ಕೊಟ್ಟಿರುವ ಖಾತೆಯಲ್ಲಿ ಅಸಮಾಧಾನವಿದೆ ಅಂತ ಯಾರು ಹೇಳಿದ್ದು ಎಂದು ಪ್ರಶ್ನಿಸಿದರು.
ನಾನು ಮುಖ್ಯಮಂತ್ರಿಗಳು ಕೊಟ್ಟ ಖಾತೆಯನ್ನ ಸಂತೋಷದಿಂದ ತಗೆದುಕೊಂಡಿದ್ದೇನೆ. ಸಿಎಂ ತಮಗೆ ಒಟ್ಟು ಮೂರು ಖಾತೆ ಕೊಟ್ಟಿದ್ದಾರೆ. ಪೌರಾಡಳಿತ, ತೋಟಗಾರಿಕೆ, ರೇಷ್ಮೆಯಂತಹ ಒಳ್ಳೆಯ ಖಾತೆಗಳನ್ನೇ ಕೊಟ್ಟಿದ್ದಾರೆ. ಈ ವಿಚಾರದಲ್ಲಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನನ್ನ ವಿರುದ್ಧ ಈ ರೀತಿಯ ಗೊಂದಲಗಳನ್ನು ಯಾರು ಹುಟ್ಟು ಹಾಕುತ್ತಿದ್ದಾರೋ ಗೊತ್ತಿಲ್ಲ. ಈ ರೀತಿಯ ಗೊಂದಲ ಜೆಡಿಎಸ್ ನವರೇ ಹುಟ್ಟು ಹಾಕ್ತಾರೆ. ಇದು ಅವರದ್ದೇ ಕೆಲಸ ಎಂದು ಜೆಡಿಎಸ್ ಮೇಲೆ ಆರೋಪ ಮಾಡಿದರು.
ಅಲ್ಲದೇ, ಯಾರು ಈ ರೀತಿ ಗೊಂದಲ ಹುಟ್ಟು ಹಾಕ್ತಾರೆ ಅಂಥವರು ನನ್ನ ಬಳಿ ಬರಲಿ ಅವರಿಗೆ ಬಿಡಿಸಿ ಬಿಡಿಸಿ ಹೇಳುತ್ತೀನಿ ಎಂದು ಜೆಡಿಎಸ್ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.