ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಕ್ರೀಡೆಗೆ ಹೆಚ್ಚಿನ ಅವಕಾಶ ನೀಡಬೇಕು. ಖಾಲಿ ಇರುವ ದೈಹಿಕ ಶಿಕ್ಷಕರ ಹುದ್ದೆ ಭರ್ತಿಯಾಗಬೇಕು. ಶಾಲೆಯಲ್ಲಿ ನಿತ್ಯ ವ್ಯಾಯಾಮ, ಕ್ರೀಡೆಗೆ ಒಂದು ಗಂಟೆ ಸಮಯ ಮೀಸಲಿಡಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಹೇಳಿದ್ದಾರೆ. ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಸಚಿವ ನಾರಾಯಣಗೌಡ ಪತ್ರ ಬರೆದಿದ್ದಾರೆ.
ಕಳೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನಮ್ಮ ದೇಶವು ಉತ್ತಮ ಸಾಧನೆ ಮಾಡಿದೆ. ಇನ್ನೂ ಹೆಚ್ಚಿನ ಸಾಧನೆ ಆಗಬೇಕು ಎಂದರೆ ಈಗಲೇ ಸಿದ್ಧತೆ ಅಗತ್ಯ. ಬಾಲ್ಯದಲ್ಲಿಯೇ ಕ್ರೀಡೆಯಲ್ಲಿ ಆಸಕ್ತಿ ಮೂಡುವಂತಾಗಬೇಕು. ಸೂಕ್ತ ತರಬೇತಿಯೂ ಸಿಗಬೇಕು. ಆಗ ಮಾತ್ರ ಕ್ರೀಡೆಯಲ್ಲಿ ಸಾಧನೆ ಸಾಧ್ಯ ಎಂದಿದ್ದಾರೆ.
ವಿದ್ಯಾರ್ಥಿ ದೆಸೆಯಲ್ಲೇ ಕ್ರೀಡೆಯ ತರಬೇತಿ ಆಗಬೇಕು. ಆಸಕ್ತಿ ಇರುವ ಸಮರ್ಥ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಮುಂದುವರೆಯುತ್ತಾರೆ. ಕ್ರೀಡಾಂಗಣ, ಕ್ರೀಡಾ ಸೌಲಭ್ಯ ಇದ್ದ ಮಾತ್ರಕ್ಕೆ ಸಾಧನೆ ಆಗಲಾರದು. ಬುನಾದಿ ಸರಿಯಾಗಿರಬೇಕು. ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತದಲ್ಲೇ ವ್ಯಾಯಾಮ, ಕ್ರೀಡೆ ಬಗ್ಗೆ ಸೂಕ್ತ ತರಬೇತಿ ನೀಡುವ ಪ್ರಕ್ರಿಯೆ ಆರಂಭವಾಗಬೇಕು.
ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 39,308 ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇದು ಬೆಳೆವ ಸಿರಿ ಮೊಳಕೆಯಲ್ಲೇ ಚಿವುಟಿದಂತೆ ಆಗುತ್ತಿದೆ. ಮುಂದಿನ ಒಲಿಂಪಿಕ್ಸ್ಗೆ ನಮ್ಮ ರಾಜ್ಯದಿಂದ 100 ಕ್ರೀಡಾಪಟುಗಳನ್ನು ಕಳುಹಿಸುವ ಗುರಿ ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕ್ರೀಡಾಪಟುಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕಳುಹಿಸಬೇಕೆಂದರೆ ಈಗಿನಿಂದಲೇ ಸಿದ್ಧತೆ ಆಗಬೇಕು.
ದೈಹಿಕ ಶಿಕ್ಷಕರ ನೇಮಕವಾಗಬೇಕು. ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಇದು ಸಹಕಾರಿಯಾಗುತ್ತದೆ. ಶಿಕ್ಷಣ ಸಚಿವರು ಕಡ್ಡಾಯವಾಗಿ ದೈಹಿಕ ಶಿಕ್ಷಕರ ನೇಮಕಕ್ಕೆ ಕ್ರಮ ತೆಗೆದುಕೊಳ್ಳಿ ಎಂದು ಸಚಿವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ಹಿಂದೆ ಎಲ್ಲ ಶಾಲಾ ಕಾಲೇಜುಗಳಲ್ಲಿ ನಿತ್ಯ ಒಂದು ಗಂಟೆ ಅವಧಿ ವಿದ್ಯಾರ್ಥಿಗಳ ದೈಹಿಕ ಶಿಕ್ಷಣಕ್ಕಾಗಿ ಮೀಸಲಿಡಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಪದ್ಧತಿ ಕೈಬಿಟ್ಟಿರುವುದು, ಕ್ರಮೇಣವಾಗಿ ಕಡಿಮೆ ಮಾಡುತ್ತಿರುವುದು ವಿಷಾದದ ಸಂಗತಿ. ವಿದ್ಯಾರ್ಥಿಗಳ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಸಹ ಮುಖ್ಯವಾಗಿರುವುದರಿಂದ ಎಲ್ಲ ಶಾಲಾ ಕಾಲೇಜುಗಳಲ್ಲಿ ನಿತ್ಯ ಒಂದು ಗಂಟೆ ಅವಧಿಯನ್ನು ದೈಹಿಕ ಶಿಕ್ಷಣಕ್ಕಾಗಿ ಮೀಸಲಿಡುವುದು ಅತ್ಯವಶ್ಯಕವಾಗಿದೆ.
ಇದನ್ನು ಹೊಸ ಶಿಕ್ಷಣ ನೀತಿಯಲ್ಲೂ ಸಹ ಉಲ್ಲೇಖಿಸಲಾಗಿದೆ. ಆದುದರಿಂದ, ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ನಿತ್ಯ ಕನಿಷ್ಠ ಒಂದು ಗಂಟೆ ಅವಧಿಯನ್ನು ವಿದ್ಯಾರ್ಥಿಗಳ ದೈಹಿಕ ಶಿಕ್ಷಣಕ್ಕಾಗಿ ಮೀಸಲಿಡಲು ಸೂಚಿಸುವಂತೆ ಶಿಕ್ಷಣ ಸಚಿವರಿಗೆ ಕ್ರೀಡಾ ಸಚಿವ ಡಾ. ನಾರಾಯಣಗೌಡ ಪತ್ರ ಬರೆದು ಮನವಿ ಮಾಡಿದ್ದಾರೆ. ಸಂಬಂಧಪಟ್ಟವರಿಗೆಲ್ಲ ಕಟ್ಟುನಿಟ್ಟಾಗಿ ನಿರ್ದೇಶನ ನೀಡುವಂತೆ ಕೋರಿದ್ದಾರೆ.
ಖಾಲಿ ಇರುವ ದೈಹಿಕ ಶಿಕ್ಷಕ ಹುದ್ದೆಗಳನ್ನು ಆದ್ಯತೆಯ ಮೇಲೆ ಶೀಘ್ರವಾಗಿ ಭರ್ತಿ ಮಾಡಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಲು ಅನುಕೂಲ ಕಲ್ಪಿಸುವಂತೆಯೂ ಸಚಿವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Video: ಗುಬ್ಬಿ ಶಾಸಕ ಶ್ರೀನಿವಾಸ್-ತುಮಕೂರು ಸಂಸದ ಬಸವರಾಜು ಜಟಾಪಟಿ..ಸಾರ್ವಜನಿಕ ಕಾರ್ಯಕ್ರಮದಲ್ಲೇ ಜೋರು ಜಗಳ!