ಬೆಂಗಳೂರು : ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಯಶಸ್ವಿಯಾದಂತೆ ಮಕ್ಕಳ ಕ್ರೀಡಾ ಭವಿಷ್ಯಕ್ಕೆ ವೇದಿಕೆಯಾಗಿದ್ದ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟ ಯಶಸ್ವಿಯಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಹೇಳಿದರು.
ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ತೋಟಗಾರಿಕಾ ಸಚಿವ ಮುನಿರತ್ನ, ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜು, ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಖೇಲೋ ಇಂಡಿಯಾ ಯಶಸ್ವಿ ಬಳಿಕ ಮಿನಿ ಒಲಂಪಿಕ್ಸ್ ಕೂಡ ಯಶಸ್ವಿಯಾಗಿದೆ. ಈ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 3 ಸಾವಿರಕ್ಕೂ ಹೆಚ್ಚು ಬಾಲಕ ಬಾಲಕಿಯರು ಪಾಲ್ಗೊಂಡು, ಹಾಕಿ, ಬ್ಯಾಸ್ಕೆಟ್ ಬಾಲ್, ಫೆನ್ಸಿಂಗ್, ಬ್ಯಾಡ್ಮಿಂಟನ್, ಈಜು, ಶೂಟಿಂಗ್ ಸೇರಿದಂತೆ ಸುಮಾರು 21 ಕ್ರೀಡೆಗಳಲ್ಲಿ 171 ಪಂದ್ಯಗಳು ನಡೆದಿದ್ದು, 550 ಪದಕಗಳನ್ನು ಕ್ರೀಡಾಪಟುಗಳು ತಮ್ಮದಾಗಿಸಿಕೊಂಡಿದ್ದಾರೆ. ಈ ಎಲ್ಲ ಕ್ರೀಡಾ ಪ್ರತಿಭೆಗಳಿಗೆ ಸಚಿವ ಡಾ. ನಾರಾಯಣಗೌಡ ಅಭಿನಂದನೆ ಸಲ್ಲಿಸಿದರು.
ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲು ಉತ್ತಮ ವೇದಿಕೆ : ಮುಂದೆ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲು ಇದು ಉತ್ತಮ ವೇದಿಕೆಯನ್ನು ಕಲ್ಪಿಸಿದೆ. ರಾಜ್ಯ ಹಾಗೂ ರಾಷ್ಟ್ರಕ್ಕೆ ಹೆಮ್ಮೆ ತರುವಂತಹ ಸಾಧನೆಗಳನ್ನು ಮಾಡುತ್ತಾರೆ ಅನ್ನೋ ವಿಶ್ವಾಸ ಇದೆ. ಕ್ರೀಡೆಗೆ ನಮ್ಮ ಸರ್ಕಾರ ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತಿದೆ. ಒಲಿಂಪಿಕ್ಸ್‌ನಲ್ಲೂ ನಮ್ಮ ಮಕ್ಕಳು ಸಾಧನೆ ಮಾಡಬೇಕು. ಎಲ್ಲಾ ಮಕ್ಕಳು ಹೆಚ್ಚೆಚ್ಚು ಸಾಧನೆ ಮಾಡಿ, ರಾಜ್ಯ ಮತ್ತು ರಾಷ್ಟ್ರಕ್ಕೆ ಹೆಸರು ತರಲಿ ಎಂದು ಹಾರೈಸುತ್ತೇನೆ ಎಂದರು.
ಸೌಲಭ್ಯಗಳ ಸದ್ಭಳಕೆ ಮಾಡಿಕೊಳ್ಳಿ : ಇದೇ ವೇಳೆ ಕ್ರೀಡಾ ಅಂಕಣ ಸೇರಿದಂತೆ ಕ್ರೀಡಾ ಇಲಾಖೆಯಿಂದ ಹಲವು ಸೌಲಭ್ಯಗಳನ್ನು ನೀಡಿದ್ದು, ಅವುಗಳ ಸದ್ಭಳಕೆ ಮಾಡಿಕೊಳ್ಳುವಂತೆ ನಾರಾಯಣಗೌಡ ಅವರು ಕರೆ ನೀಡಿದರು.
ಓದಿ : ಪೊಲೀಸ್ ಠಾಣೆಯನ್ನು ಸುಟ್ಟುಹಾಕಿದ್ದ ಪ್ರಕರಣ : ಜಿಹಾದಿ ಕೈವಾಡದ ಬಗ್ಗೆ ಶಂಕಿಸಿದ ಪೊಲೀಸರು