ಬೆಂಗಳೂರು: ಖಾಸಗಿ ಅನುದಾನಿತ ಸಂಸ್ಥೆಗಳ ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರಿಗೆ ಸೇವೆಗೆ ಸೇರಿದ ದಿನಾಂಕದಿಂದಲೇ ಸೇವಾ ಸೌಲಭ್ಯಗಳನ್ನು ಒದಗಿಸುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 330ರ ಅಡಿ ಸರ್ಕಾರಿ ಮುಖ್ಯ ಸಚೇತಕ ವೈ.ಎ.ನಾರಾಯಣ ಸ್ವಾಮಿ, ಅರುಣ್ ಶಹಾಪುರ್, ಶ್ರೀಕಂಠೇಗೌಡ, ಶಶಿಲ್ ನಮೋಶಿ, ಎಸ್.ವಿ.ಸಂಕನೂರು ಖಾಸಗಿ ಅನುದಾನಿತ ಸಂಸ್ಥೆಗಳ ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರಿಗೆ ಸೇವೆಗೆ ಸೇರಿದ ದಿನಾಂಕದಿಂದಲೇ ಸೇವಾ ಸೌಲಭ್ಯಗಳನ್ನು ಒದಗಿಸುವ ಕುರಿತು ಪ್ರಸ್ತಾಪಿಸಿದರು. ಅನುದಾನಿತ ಸಂಸ್ಥೆಗಳ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರಿಗೆ ಸೇವೆಗೆ ಸೇರಿದ ದಿನಾಂಕದಿಂದಲೇ ಸೇವಾ ಸೌಲಭ್ಯಗಳನ್ನು ಒದಗಿಸುವ ಕುರಿತು ಈಗಾಗಲೇ ಸದನ ಸಮಿತಿಗಳನ್ನು ಮಾಡಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆದರೂ, ಇಲ್ಲಿಯವರೆಗೆ ಈ ಕಾಲ್ಪನಿಕ ವೇತನ ಬಡ್ತಿ ನೀಡುವ ವಿಚಾರದಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಸಿಬ್ಬಂದಿ ಹೋರಾಟ ಮಾಡುತ್ತಾ ಬಂದಿದ್ದಾರೆ.
ಹಾಗಾಗಿ, ಕೂಡಲೇ ಸೇವೆಗೆ ಸೇರಿದ ದಿನಾಂಕವನ್ನು ಪರಿಗಣಿಸಿ ಪಿಂಚಣಿ, ನಿವೃತ್ತಿಯ ಎಲ್ಲಾ ಉಪಲಬ್ಧಿಗಳನ್ನು ಒದಗಿಸಿಕೊಡಲು ಸಮಿತಿಗಳ ವರದಿಯನ್ವಯ ಸರ್ಕಾರ ತಕ್ಷಣ ಕ್ರಮಕೈಗೊಂಡು ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಈ ಕುರಿತು ಪರಿಶೀಲನೆ ಮಾಡಲಾಗುತ್ತದೆ. ಈ ವಿಚಾರದಲ್ಲಿ ಮಾನವೀಯತೆ ಆಧಾರದಲ್ಲಿ ಒಳ್ಳೆಯ ಕೆಲಸ ಮಾಡೋಣ. ಒಳ್ಳೆ ನಿರ್ಧಾರ ಮಾಡೋಣ ಎಂದು ಅಸ್ಪಷ್ಟ ಉತ್ತರ ನೀಡಿದರು.
ನಂತರ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಮಾತನಾಡಿ, ತೀರ್ಪಿನ ವಿಚಾರದಲ್ಲಿ ಅಪೀಲು ಹೋಗಿದ್ದೇವೆ. ಅದರ ತೀರ್ಪಿನ ನಿರೀಕ್ಷೆಯಲ್ಲಿದ್ದೇವೆ. ಅದು ಬಂದ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸರ್ಕಾರದ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯ ಎಸ್.ವಿ.ಸಂಕನೂರು, ಈ ಬೇಡಿಕೆ ಈಡೇರಿಸಲು 5000 ಕೋಟಿ ಅಗತ್ಯವಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಕಾರಣ ನೀಡಿದ್ದರಿಂದ ಈ ಬೇಡಿಕೆ ಈಡೇರಿಲ್ಲ. ಆದರೆ, ಇದಕ್ಕಾಗಿ ರಚಿಸಿದ್ದ ಸಮಿತಿ ಅರಿಯರ್ಸ್ ಬಿಟ್ಟಲ್ಲಿ 359 ಕೋಟಿ ಬೇಕಾಗಲಿದೆ ಎಂದಿದೆ.
ಇದಕ್ಕೆ ನಾವು ಒಪ್ಪಿಕೊಳ್ಳಲಿದ್ದೇವೆ. ಎಲ್ಲಿ ಬೇಕಾದರೂ ಬಂದು ಇದಕ್ಕೆ ನಾವು ಒಪ್ಪಿಕೊಳ್ಳಲು ಸಿದ್ದವಿದ್ದೇವೆ. ಕೋರ್ಟ್ ಮೊರೆ ಹೋಗಿರುವ ಶಿಕ್ಷಕರ ಎಲ್ಲ ಸಂಘಟನೆಗಳನ್ನು ಬೇಕಾದರೂ ಕೋರ್ಟ್ಗೆ ಕರೆಸಿ ಹೇಳಿಕೆ ಕೊಡಿಸಲು ಸಿದ್ದ. ಇದು ಕೋರ್ಟ್ನಲ್ಲಿ ಇತ್ಯರ್ಥ ಆಗುವುದಿಲ್ಲ. ಕಾಂಪ್ರಮೈಸ್ ಆಗಬೇಕು. ಅರಿಯರ್ಸ್ನ ಕೇಳಲ್ಲ ಎಂದು ನಾವು ಬರೆದುಕೊಡಲು ಸಿದ್ದರಿದ್ದೇವೆ. ಸಮಸ್ಯೆ ಪರಿಹರಿಸಿ ಎಂದು ಮನವಿ ಮಾಡಿದರು.
ಸರ್ಕಾರದ ಪರವಾಗಿ ಉತ್ತರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ, ಕೋರ್ಟ್ನಲ್ಲಿ ಕೇಸ್ ಏನಿದೆ? ಯಾವ ಹಂತದಲ್ಲಿದೆ ಅಂತಾ ನಮಗೆ ಸರಿಯಾದ ಮಾಹಿತಿ ಇಲ್ಲ. ಅದನ್ನು ನೋಡಿ ತರಿಸಿಕೊಂಡು ಉತ್ತರ ನೀಡಲಿದ್ದೇವೆ ಎಂದರು. ಸರ್ಕಾರದ ಅಸ್ಪಷ್ಟ ಉತ್ತರಕ್ಕೆ ಜೆಡಿ ಎಸ್ ಸದಸ್ಯ ಮರಿತಿಬ್ಬೇಗೌಡ ಆಕ್ಷೇಪ ವ್ಯಕ್ತಪಡಿಸಿದರು.
ಇಷ್ಟೊಂದು ದೊಡ್ಡ ಚರ್ಚೆಯಾಗಿದೆ. ಆದರೆ, ಬೆಟ್ಟ ಅಗೆದು ಇಲಿ ಹಿಡಿದ ರೀತಿ ಸರ್ಕಾರ ಉತ್ತರ ನೀಡಿದೆ. ಇದು ಸರಿಯಲ್ಲ. ಸಿಎಂ ಜೊತೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು. ನಂತರ ಸದಸ್ಯರ ಬೇಡಿಕೆಗೆ ಮಣಿದ ಸಚಿವ ಬಿ. ಸಿ ನಾಗೇಶ್, ಸಿಎಂ ಜೊತೆ ಮಾತನಾಡಿ ಸಭೆಗೆ ದಿನಾಂಕ ನಿಗದಿಪಡಿಸುವ ಭರವಸೆ ನೀಡಿದರು. ಸಭಾಪತಿಗಳನ್ನು ಸಭೆಗೆ ಆಹ್ವಾನಿಸಿ ಎಲ್ಲ ಆಯಾಮದಲ್ಲಿ ಚರ್ಚಿಸಲಾಗುತ್ತದೆ ಎಂದರು.
ಇದನ್ನೂ ಓದಿ: ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆಗೆ ಗ್ರಾಸವಾದ ಅಗ್ನಿಶಾಮಕ ವಾಹನಗಳ ದುಸ್ಥಿತಿ