ಬೆಂಗಳೂರು: ಸಚಿವ ಸ್ಥಾನದಿಂದ ಕೈ ಬಿಡಲಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಅಬಕಾರಿ ಸಚಿವ ಹೆಚ್.ನಾಗೇಶ್ ಸಿಎಂ ನಿವಾಸಕ್ಕೆ ದೌಡಾಯಿಸಿ ಅನೌಪಚಾರಿಕವಾಗಿ ಮಾತುಕತೆ ನಡೆಸಿದರು.
ಬೆಳಗ್ಗೆಯೇ ಸಿಎಂ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಸಚಿವ ನಾಗೇಶ್ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಇಲಾಖೆಯಲ್ಲಿನ ಕೆಲಸ ಕಾರ್ಯದ ಕುರಿತು ಸಿಎಂಗೆ ವಿವರ ನೀಡಿದರು. ನೇರವಾಗಿ ಸಂಪುಟದಿಂದ ಕೈ ಬಿಡುವ ಸುದ್ದಿ ಬಗ್ಗೆ ಪ್ರಸ್ತಾಪ ಮಾಡದ ಸಚಿವ ನಾಗೇಶ್, ಮತ್ತಷ್ಟು ಉತ್ತಮವಾಗಿ ಇಲಾಖೆಯ ಜವಾಬ್ದಾರಿ ನಿರ್ವಹಿಸುವ ಭರವಸೆ ನೀಡಿ ಆಶೀರ್ವಾದ ಪಡೆದುಕೊಂಡರು.
ಕೆಲಕಾಲ ಅನೌಪಚಾರಿಕವಾಗಿ ಮಾತುಕತೆ ನಡೆಸಿ ಸಂಪುಟದಿಂದ ಕೈಬಿಡುವ ಕುರಿತು ಸ್ವತಃ ಸಿಎಂ ಯಡಿಯೂರಪ್ಪ ಅವರೇ ಏನಾದರೂ ಹೇಳಬಹುದಾ ಎಂದು ನಿರೀಕ್ಷಿಸಿದರು. ಆದರೆ ಅಂತಹ ಯಾವುದೇ ಮಾತುಗಳು ಯಡಿಯೂರಪ್ಪ ಅವರಿಂದ ಬಾರದ ಕಾರಣ ಸಂಪುಟದಿಂದ ಕೈ ಬಿಡುವ ವಿಷಯದ ಕುರಿತು ಹೆಚ್ಚಿನ ಚರ್ಚೆಗೆ ಹೋಗದ ನಾಗೇಶ್ ಸಿಎಂ ನಿವಾಸದಿಂದ ನಿರ್ಗಮಿಸಿದರು.
ಓದಿ: ನನ್ನನ್ನು ಸಂಪುಟದಿಂದ ಕೈ ಬಿಡಲ್ಲ ಎಂಬ ವಿಶ್ವಾಸವಿದೆ; ಅಬಕಾರಿ ಸಚಿವ ನಾಗೇಶ್
ಆದರೆ, ಸಿಎಂ ಜೊತೆ ಏನು ಚರ್ಚೆ ನಡೆಸಲಾಯಿತು ಎನ್ನುವ ಕುರಿತು ಪ್ರತಿಕ್ರಿಯೆ ನೀಡಲು ಸಚಿವ ನಾಗೇಶ್ ನಿರಾಕರಿಸಿದರು. ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿ ಸಂಪುಟದಿಂದ ನನ್ನನ್ನು ಕೈ ಬಿಡುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದ ಸಚಿವ ನಾಗೇಶ್ಗೆ ಇದೀಗ ಬಲವಾದ ಅನುಮಾನ ಕಾಡತೊಡಗಿದೆ. ಇಂದು ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದೇ ಅದಕ್ಕೆ ನಿದರ್ಶನ ಎನ್ನಲಾಗುತ್ತಿದೆ.
ಮಿತ್ರ ಮಂಡಳಿ ಮೊರೆ:
ಸಂಪುಟದಿಂದ ಕೈಬಿಡುವ ಸುದ್ದಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಮಿತ್ರಮಂಡಳಿ ಮೊರೆ ಹೋಗಲು ಸಚಿವ ನಾಗೇಶ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸುಧಾಕರ್, ಸೋಮಶೇಖರ್, ಭೈರತಿ ಬಸವರಾಜ್ ಸೇರಿದಂತೆ ಹಲವರ ಭೇಟಿಯಾಗಿ ಸಂಪುಟದಿಂದ ತಮ್ಮನ್ನು ಕೈ ಬಿಡದಂತೆ ಸಿಎಂ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.