ಬೆಂಗಳೂರು: ಟಿಪ್ಪುವನ್ನು ಕೊಂದಿದ್ದಾರೆ ಎಂದು ಹೇಳಲಾಗುತ್ತಿರುವ ಮಂಡ್ಯದ ಹೆಮ್ಮೆಯ ಒಕ್ಕಲಿಗ ಜನಾಂಗದ ನಾಯಕರಾದ ಉರಿಗೌಡ ಮತ್ತು ದೊಡ್ಡ ನಂಜೇಗೌಡ ಅವರ ಹೋರಾಟದ ಕುರಿತು ಚಿತ್ರ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದ ತೋಟಗಾರಿಕಾ ಸಚಿವ ಮುನಿರತ್ನ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಉರಿಗೌಡ ಮತ್ತು ನಂಜೇಗೌಡ ಅವರು ಟಿಪ್ಪು ಕೊಂದಿರುವ ಇತಿಹಾಸದ ಕುರಿತು ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಆದಿಚುಂಚನಗಿರಿಯ ಮಠಾಧೀಶರಾದ ಡಾ.ನಿರ್ಮಲಾನಂದ ಸ್ವಾಮೀಜಿಯವರನ್ನು ಭೇಟಿ ಮಾಡಿ ನಂತರ ಸಚಿವ ಮುನಿರತ್ನ ಚಿತ್ರ ನಿರ್ಮಾಣದಿಂದ ಹಿಂದೆ ಸರಿದಿರುವುದಾಗಿ ಹೇಳಿದ್ದಾರೆ.
ರಾಜಕೀಯವಾಗಿ ಸಾಕಷ್ಟು ಚರ್ಚೆಗೆ ಅವಕಾಶ ನೀಡಿದ್ದ ಉರಿಗೌಡ ಮತ್ತು ನಂಜೇಗೌಡರ ಇತಿಹಾಸದ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉರಿಗೌಡ ಮತ್ತು ನಂಜೇಗೌಡ ಬಗ್ಗೆ ಚಿತ್ರ ನಿರ್ಮಾಣ ಮಾಡುವಂತೆ ವ್ಯಂಗ್ಯವಾಗಿ ಬಿಜೆಪಿಯನ್ನು ಟೀಕಿಸಿದ್ದರು. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಮುನಿರತ್ನ ತಾವೇ ಉರಿಗೌಡ ಮತ್ತು ನಂಜೇಗೌಡ ಚಿತ್ರ ನಿರ್ಮಾಣ ಮಾಡುವುದಾಗಿ ಪ್ರಕಟಿಸಿದ್ದರು. ಈ ಚಿತ್ರದ ಕುರಿತು ಪೋಸ್ಟರ್ ಸಹ ಬಿಡುಗಡೆ ಮಾಡಿ ಮಾಡಿದ್ದರು. ಅಷ್ಟೇ ಅಲ್ಲ, ಚಿತ್ರ ನಿರ್ಮಾಣಕ್ಕೆ ಮೇ ತಿಂಗಳ 18ರಂದು ಕಂಠೀರವ ಸ್ಟುಡಿಯೋದಲ್ಲಿ ಮೂಹೂರ್ತದ ದಿನಾಂಕ ಸಹ ನಿಗದಿಪಡಿಸಿದ್ದರು.
ಇದನ್ನೂ ಓದಿ: ಉರಿಗೌಡ-ನಂಜೇಗೌಡರ ಚಿಂತನೆ ಬಿಟ್ಟು ಅಭಿವೃದ್ಧಿ ಕಡೆ ಗಮನಹರಿಸಿ: ಸಚಿವ ನಿರಾಣಿ
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಉರಿಗೌಡ ನಂಜೇಗೌಡ ಚಿತ್ರ ನಿರ್ಮಾಣ ಒಕ್ಕಲಿಗರ ಸಮುದಾಯದ ವಲಯದಲ್ಲಿ ಸಾಕಷ್ಟು ವಿವಾದ ಹುಟ್ಟುಹಾಕಿತ್ತು. ಒಕ್ಕಲಿಗರ ಜನಾಂಗಕ್ಕೆ ಅವಮಾನವಾಗುತ್ತಿರುವುದನ್ನು ಮನಗಂಡ ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು ಈಗ ಮಧ್ಯಪ್ರವೇಶಿಸಿದ್ದಾರೆ. ಸಚಿವ ಮುನಿರತ್ನ ಅವರಿಗೆ ತಮ್ಮನ್ನು ಭೇಟಿ ಮಾಡಿ ಚಿತ್ರ ನಿರ್ಮಾಣದ ಬಗ್ಗೆ ಚರ್ಚಿಸಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ಇಂದು ಬೆಳಗ್ಗೆ ಶ್ರೀಗಳನ್ನು ಭೇಟಿ ಮಾಡಿ ಅವರ ಸಲಹೆಯಂತೆ ಚಿತ್ರ ನಿರ್ಮಾಣದಿಂದ ಹಿಂದೆ ಸರಿಯುವ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.
ಸಚಿವರು ಹೇಳಿದಿಷ್ಟು..: "ಸಿನಿಮಾ ಮಾಡಲು ಬಹಳ ಕತೆಗಳು ಸಿಗುತ್ತವೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕೆಂಬುದು ನನ್ನ ಕನಸಾಗಿತ್ತು. ಆ ಹಿನ್ನೆಲೆಯಲ್ಲಿ ನಾನು ಈ ಹೆಸರು ನೋಂದಾಯಿಸಿದ್ದೆ. ಈ ವಿಚಾರದಲ್ಲಿ ನೈಜತೆ ಇದ್ದರೆ ಮುಂದುವರಿಯಿರಿ ಎಂದು ಸ್ವಾಮೀಜಿ ಹೇಳಿದ್ದಾರೆ. ಯಾವುದೇ ವ್ಯಕ್ತಿಯನ್ನು ನೋಯಿಸಿ ಸಿನಿಮಾ ಮಾಡುವವನು ನಾನಲ್ಲ. ಹೀಗಾಗಿ 'ಉರಿಗೌಡ- ನಂಜೇಗೌಡ' ಸಿನಿಮಾ ಮಾಡುವುದಿಲ್ಲ. ಇದರೆ ಬಗೆಗೆ ಮಾತನಾಡುವುದಿಲ್ಲ. ಈ ಕುರಿತು ಸ್ವಾಮೀಜಿಯವರಿಗೆ ತಿಳಿಸಿದ್ದೇನೆ. ಚಿತ್ರೀಕರಣದಿಂದ ಹಿಂದೆ ಸರಿದಿದ್ದೇನೆ"- ಸಚಿವ ಮುನಿರತ್ನ.
'ಇತಿಹಾಸ ತಿರುಚಲು ಸಾಧ್ಯವಿಲ್ಲ': ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ಸತ್ಯ ಹೇಳಿದ್ದಕ್ಕೆ ಹೀಗೆಲ್ಲ ಆಗುತ್ತಿದೆ. ಟಿಪ್ಪುವನ್ನು ಬೆನ್ನಟ್ಟಿ ದಾಳಿ ಮಾಡಿದವರು ಮಂಡ್ಯದ ಉರಿಗೌಡ ಆದರೂ ಈ ಕುಮಾರಸ್ವಾಮಿಯವರಿಗೆ ಯಾಕೆ ಅನುಮಾನ ಎಂಬುದು ಗೊತ್ತಿಲ್ಲ. ಇತಿಹಾಸವನ್ನು ತಿರುಚುವುದಕ್ಕೆ ಆಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮುನಿರತ್ನ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಕೋಲಾರ ಜಿಲ್ಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉರಿಗೌಡ ಹಾಗೂ ನಂಜೇಗೌಡ ವಿಚಾರಕ್ಕೆ ಪ್ರತಿಕ್ರಿಯಿಸಿದ್ದರು. ನಮ್ಮ ಕಂದಾಯ ಸಚಿವ ಅಶೋಕ್ ಮತ್ತು ಅಶ್ವತ್ಥ ನಾರಾಯಣ್ ಅವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಈ ವಿಚಾರದಲ್ಲಿ ಅವರು ಬಹಳ ಸಂಶೋಧನೆ ಮಾಡಿ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದರು.
ಇದನ್ನೂ ಓದಿ: ಉರಿಗೌಡ, ನಂಜೇಗೌಡ ವಿಚಾರ: ಸತ್ಯ ಮರೆಮಾಚಲು ಸಾಧ್ಯವಿಲ್ಲ ಎಂದ ಮುನಿರತ್ನ