ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಸಂಬಂಧ ರಾಜಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವರ ಕಾರುಗಳಿಗೆ ಪ್ರವೇಶ ಇಲ್ಲದ ಹಿನ್ನೆಲೆ ಸಮಾರಂಭ ನಂತರ ತಮ್ಮ ವಾಹನಕ್ಕಾಗಿ ಕೆಲ ಸಚಿವರು ಪರದಾಡಿದ ಸನ್ನಿವೇಶ ಗೋಚರಿಸಿತು.
ಏಳು ಸಚಿವರ ಪ್ರಮಾಣವಚನ ಕಾರ್ಯಕ್ರಮ ಮುಕ್ತಾಯವಾಗುತ್ತಿದ್ದಂತೆ ರಾಜಭವನ ರಸ್ತೆಯ ಸಾರ್ವಜನಿಕ ಸಂಚಾರವನ್ನು ಮುಕ್ತಗೊಳಿಸಲಾಯಿತು. ಸಮಾರಂಭ ಪೂರ್ಣಗೊಳಿಸಿ ರಾಜಭವನದ ಹೊರಗೆ ಆಗಮಿಸಿದ ಸಚಿವರಿಗೆ ಸಂಚಾರ ದಟ್ಟಣೆ ಹಿನ್ನೆಲೆ ತಮ್ಮ ವಾಹನವನ್ನು ಸಕಾಲಕ್ಕೆ ತರಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಇನ್ನೊಂದೆಡೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಎಂಟಿಬಿ ನಾಗರಾಜ್ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಜಮಾವಣೆಗೊಂಡ ಹಿನ್ನೆಲೆ ಸಂಚಾರ ದಟ್ಟಣೆ ಇನ್ನಷ್ಟು ಹೆಚ್ಚಾಯಿತು.
ಇದೇ ಸಂದರ್ಭ ಸಿಎಂ ಕೂಡ ರಾಜಭವನದಿಂದ ಹೊರಟ ಹಿನ್ನೆಲೆ ತಾತ್ಕಾಲಿಕವಾಗಿ ವಾಹನ ಸಂಚಾರ ತಡೆಯಲಾಯಿತು. ಹಲವು ಸಚಿವರ ಕಾರುಗಳು ದಟ್ಟಣೆಯಲ್ಲಿ ಸಿಲುಕಿಕೊಂಡ ಹಿನ್ನೆಲೆ ರಾಜಭವನದ ಅಕ್ಕಪಕ್ಕ ಒಂದಿಷ್ಟು ದೂರ ಕಾಲ್ನಡಿಗೆಯಲ್ಲಿ ತೆರಳಿ ವಾಹನ ಏರುವ ಪರಿಸ್ಥಿತಿ ಸಚಿವರಿಗೆ ಎದುರಾಯಿತು.
ಕೋವಿಡ್-19 ನಿಯಮಾವಳಿ ಹಿನ್ನೆಲೆ ರಾಜಭವನದ ಒಳಗೆ ಸೀಮಿತ ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಹಿನ್ನೆಲೆ ನೂತನವಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರು ಕೂಡ ರಾಜಭವನದ ಹೊರ ಬಂದು ತಮ್ಮ ಕಾರನ್ನೇರಿ ತೆರಳಿದರು.
ಪ್ರತಿಸಾರಿ ರಾಜಭವನದ ಒಳಗಿಂದಲೇ ಸರ್ಕಾರಿ ಕಾರುಗಳಲ್ಲಿ ಆಚೆ ಬರುತ್ತಿದ್ದ ನೂತನ ಸಚಿವರು ಈ ಸಾರಿ ಆಚೆ ಬಂದು ಆಮೇಲೆ ಕಾರನ್ನೇರಿ ತೆರಳುವ ಸ್ಥಿತಿ ಎದುರಾಯಿತು.
ಎಂಟಿಬಿ ನಾಗರಾಜ್ ಅಭಿಮಾನಿಗಳನ್ನು ಹೊರತುಪಡಿಸಿದ್ರೆ ಮತ್ಯಾವ ಸಚಿವರ ಅಭಿಮಾನಿಗಳು ರಾಜಭವನದತ್ತ ಬಂದಿರಲಿಲ್ಲ. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಹೊರ ಬರುತ್ತಿದ್ದಂತೆ ದೊಡ್ಡಮಟ್ಟದಲ್ಲಿ ತಮ್ಮನ್ನು ಸ್ವಾಗತಿಸುವ ಕಾರ್ಯಕರ್ತರ ಕೊರತೆ ನೂತನ ಸಚಿವರುಗಳಿಗೆ ಕಾಡಿತು.
ಎತ್ತಾಡಿಸಿದ ಎಂಟಿಬಿ ಅಭಿಮಾನಿಗಳು : ಎಂಟಿಬಿ ನಾಗರಾಜ್ ಅಭಿಮಾನಿಗಳು ಮಾತ್ರ ಅವರನ್ನು ಹಾಗೂ ಅವರ ಪುತ್ರನನ್ನು ಮೇಲಕ್ಕೆತ್ತಿ ಕೆಲ ದೂರ ಕರೆದೊಯ್ದು ಸಂಭ್ರಮಿಸಿದರು. ಕಾರ್ಯಕ್ರಮದುದ್ದಕ್ಕೂ ಪೊಲೀಸ್ ಭದ್ರತೆ ಭಾರಿ ಪ್ರಮಾಣದಲ್ಲಿ ಇತ್ತು.
ಆದರೆ, ಕಾರ್ಯಕ್ರಮ ಮುಕ್ತಾಯವಾದ ಮೇಲೆ ಇದು ಸಡಿಲಗೊಂಡ ಹಿನ್ನೆಲೆ ಸಾಕಷ್ಟು ಜನ ಹಾಗೂ ಅಭಿಮಾನಿಗಳು ರಾಜಭವನದ ಬಳಿ ಜಮಾವಣೆಗೊಂಡರು. ಕಡೆಯ ಕ್ಷಣದಲ್ಲಿ ಸಾಕಷ್ಟು ದೊಡ್ಡಮಟ್ಟದ ಸಂಭ್ರಮ ರಾಜಭವನದ ಮುಂಭಾಗ ಕಂಡು ಬಂತು.