ಬೆಳಗಾವಿ : ಸಚಿವ ಸಂಪುಟ ಮುಖ್ಯಮಂತ್ರಿ ಪರಮಾಧಿಕಾರವಾಗಿದೆ. ನಮ್ಮ ರಾಜ್ಯದ ನಾಯಕರು, ರಾಷ್ಟ್ರೀಯ ವರಿಷ್ಠರು ಸೇರಿ ಮುಂದಿನ ದಿನಗಳಲ್ಲಿ ನಿರ್ಧಾರ ಮಾಡ್ತಾರೆ. ಸಂಪುಟದಿಂದ ಮುರುಗೇಶ್ ನಿರಾಣಿ ಅವರನ್ನ ಕೈಬಿಡ್ತಾರೆ ಎಂಬ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಮುರುಗೇಶ ನಿರಾಣಿ, ಮಂತ್ರಿ ಆಗ್ಲಿ, ಎಂಎಲ್‌ಎ ಆಗ್ಲಿ ನಮ್ಮ ತಾತನ ಆಸ್ತಿಯಲ್ಲ ಎಂದು ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. 30 ವರ್ಷದಿಂದ ಬಿಜೆಪಿ ಪಕ್ಷದ ಕಾರ್ಯಕರ್ತ ಆಗಿರುವೆ. ನಾಳೆ ಮಂತ್ರಿ ಕೊಟ್ಟರು ಇದರಲ್ಲಿ ಇರ್ತೇವಿ. ಎಂಎಲ್ಎ ಟಿಕೆಟ್ ಕೊಡದಿದ್ದರು ನಾವು ಈ ಪಕ್ಷದಲ್ಲೇ ಇರುತ್ತೇವೆ. ನಾನು ಪಕ್ಷದ ಸಕ್ರಿಯ ಸದಸ್ಯನಾಗಿ ಮುಂದೆ ಬರುವಂತವರಿಗೆ ಮಾರ್ಗದರ್ಶನ ಮಾಡುತ್ತೇನೆ ಎಂದರು.
ಮೋದಿ, ಬೊಮ್ಮಾಯಿ ಇರುವುದರಿಂದ ಬೆಲೆ ಏರಿಕೆ ಕಂಟ್ರೋಲ್ನಲ್ಲಿದೆ : ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿದ ಅವರು, ಪ್ರಧಾನಮಂತ್ರಿ ಮೋದಿಯವರು, ಸಿಎಂ ಬೊಮ್ಮಾಯಿ ಅವರು ಇರುವುದರಿಂದ ಬೆಲೆ ಏರಿಕೆ ಕಂಟ್ರೋಲ್ನಲ್ಲಿದೆ. ಮೋದಿ ಪ್ರಧಾನಿ ಆಗಿರದಿದ್ರೆ ಇವತ್ತು ಪೆಟ್ರೋಲ್, ಡೀಸೆಲ್ ಬೆಲೆ 200 ರೂಪಾಯಿ ಆಗುತ್ತಿತ್ತು. ಮೋದಿಯವರು ದೂರದೃಷ್ಟಿ ಇಟ್ಟುಕೊಂಡಿದ್ದಾರೆ. ಈಗ ದೇಶದಲ್ಲಿ ಎಥನಾಲ್ ಉತ್ಪಾದನೆ ಹೆಚ್ಚಳ ಮಾಡುತ್ತಿದ್ದಾರೆ. ಎಥನಾಲ್ ರೇಟ್ 60 ರೂ. ಇದ್ದು, ಇದರಿಂದ ಎಥನಾಲ್ ಮತ್ತು ಪೆಟ್ರೋಲ್ ಮಿಕ್ಸ್ ಮಾಡಲಾಗುತ್ತಿದೆ. ಸಾಧ್ಯವಾದಷ್ಟು ಬೆಲೆ ಏರಿಕೆ ಕಂಟ್ರೋಲ್ ಮಾಡಲಾಗುತ್ತಿದೆ ಎಂದರು.
ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆ : ಸಚಿವ ಸಂಪುಟ ವಿಚಾರ ಹೊರಗಡೆ ಚರ್ಚೆ ಆಗ್ತಿಲ್ಲ. ಅದು ಮುಖ್ಯಮಂತ್ರಿ ಪರಮಾಧಿಕಾರವಿದೆ. ಈ ಬಗ್ಗೆ ಸಿಎಂ ಪಕ್ಷದ ವರಿಷ್ಠರೊಂದಿಗೆ ಚರ್ಚೆ ಮಾಡಿ ಇತ್ಯರ್ಥ ಮಾಡ್ತಾರೆ. 2023ರಲ್ಲಿ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆ ಮಾಡಬೇಕು. 150 ಸೀಟ್ ಗೆಲ್ಲಿಸುವ ನಿಟ್ಟಿನಲ್ಲಿ ಸ್ಟ್ಯಾಟರ್ಜಿ ಮಾಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ತಂತ್ರ ಮಾಡಿದ್ದಾರೆ. ಹೀಗಾಗಿ, ಸಂಪುಟದಿಂದ ಯಾರನ್ನ ಬಿಡಬೇಕು, ಸಂಪುಟಕ್ಕೆ ಯಾರನ್ನ ತೆಗೆದುಕೊಳ್ಳಬೇಕು. ಯಾರನ್ನ ಸಂಪುಟದಲ್ಲಿ ಉಳಿಸಿ ಕೊಳ್ಳಬೇಕೆನ್ನುವುದನ್ನ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಮುಸ್ಕಾನ್‌ಳನ್ನು ಹಾಡಿ ಹೊಗಳಿದ ಅಲ್‌ಖೈದಾ ಉಗ್ರ: ಸಿಎಂ ಇಬ್ರಾಹಿಂ ಹೇಳಿದ್ದೇನು?
ಮುಸ್ಲಿಂರಿಗೆ ಆರ್ಥಿಕ ಬಹಿಷ್ಕಾರ ಹಾಕಿರುವ ವಿಚಾರವಾಗಿ, ನಮ್ಮ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಇದರಲ್ಲಿ ಭಾಗವಹಿಸಿಲ್ಲ. ಈ ವಿಚಾರದ ಬಗ್ಗೆ ಚರ್ಚೆ ಆಗಿ ನಮ್ಮ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರ್ತೇವೆ. ಹಿಂದೂ ಸಂಘಟನೆಗಳು ಆರ್ಥಿಕ ಬಹಿಷ್ಕಾರ ಮಾಡುತ್ತಿರುವ ಬಗ್ಗೆ ಮಾಧ್ಯಮದಲ್ಲಿ ನೋಡಿರುವೆ. ನೂರರಷ್ಟು ಶಾಂತಿ ಕಾಪಾಡುವ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ನಮ್ಮ ಗೃಹ ಸಚಿವರು ಸಶಕ್ತರು ಇದ್ದಾರೆ.
ಕಾಂಗ್ರೆಸ್ನವರ ಆರೋಪ ಸತ್ಯಕ್ಕೆ ದೂರ : ಹಿಜಾಬ್, ಹಲಾಲ್ ವಿಚಾರ ಮುಂದಿಟ್ಟು ಬೆಲೆ ಏರಿಕೆ ಬಗ್ಗೆ ಮಾತಾಡ್ತಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನವರ ಆರೋಪ ಸತ್ಯಕ್ಕೆ ದೂರವಾದದ್ದು. ಅವರದ್ದು ಬರೀ ಆಪಾದನೆ ಮಾಡುವ ಕೆಲಸವಷ್ಟೇ. ಇದರ ಜೊತೆಗೆ ಕೆಲವೊಂದು ಪಬ್ಲಿಕ್ಗೆ ತೊಂದರೆ ಆಗುವ ಜಾಗ ಇರುತ್ತವೆ. ಕೆಲವು ಕಡೆ ಸ್ಕೂಲ್, ಕಾಲೇಜು, ಆಸ್ಪತ್ರೆಗಳು ಇರುತ್ತವೆ. ಇಲ್ಲಿ ಹಿಂದೂಗಳು ಭಜನೆ ಮಾಡುವುದು, ಮುಸ್ಲಿಂರು ಮೈಕ್ ಹಚ್ಚುವುದು ಆಗಬಾರದು. ಎಲ್ಲಿ ತೊಂದರೆ ಆಗುವುದಿಲ್ಲ, ಅಲ್ಲಿ ಹಚ್ಚಿಕೊಳ್ಳಲು ಕೋರ್ಟ್ ಅವಕಾಶ ಮಾಡಿಕೊಟ್ಟಿದೆ. ಅಲ್ಲಿ ಯಾವುದೇ ರೀತಿ ತೊಂದರೆ ಆಗುವುದಿಲ್ಲ ಎಂದರು.
400 ಸೀಟ್ನಲ್ಲಿ ಕಾಂಗ್ರೆಸ್ಗೆ ನಾಲ್ಕು ಸೀಟ್ ಬರಲಿಲ್ಲ : ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಪಕ್ಷದಲ್ಲಿ ಇರುವಷ್ಟು ಸೀಟ್ ಲೋಕಸಭೆಯಲ್ಲಿ ಬಂದಿಲ್ಲ. ಇದೇ ಮಾಡಿಕೊಂಡು ಹೋದ್ರೆ ಲೆಕ್ಕ ಇಲ್ಲದಂತೆ ಆಗುತ್ತದೆ. ಯುಪಿ ಚುನಾವಣೆಯಲ್ಲಿ 400 ಸೀಟ್ನಲ್ಲಿ ಕಾಂಗ್ರೆಸ್ಗೆ ನಾಲ್ಕು ಸೀಟ್ ಬರಲಿಲ್ಲ. ಹೀಗೆ ಹೋದ್ರೆ ಮುಂದಿನ ಜನಾಂಗಕ್ಕೆ ಕಾಂಗ್ರೆಸ್ ಇದೆಯೋ ಇಲ್ಲವೋ ಗೊತ್ತಾಗುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.