ಬೆಂಗಳೂರು: ನಾನು ಸದನದಲ್ಲಿ ಗಟ್ಟಿ ಧ್ವನಿಯಲ್ಲಿ ಉತ್ತರ ಕೊಟ್ಟಿದ್ದಕ್ಕೆ ಇಂದು ಹಿಂದಕ್ಕೆ ಸರಿಯುವ ಪರಿಸ್ಥಿತಿ ಬಂದಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಯಲ್ಲಿಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ರು.
ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್, ಮುಳವಾಡ ಮುಖ್ಯ ಕಾಲುವೆ ವಿಷಯದ ಬಗ್ಗೆ ಮಾತನಾಡಿದ್ರು. ಅನಧಿಕೃತವಾಗಿ ಕಾಲುವೆ ಒಡೆದು ಬೇರೆಯವರಿಗೆ ನೀರು ಕೊಟ್ಟಿದ್ದಾರೆ. ನಾನು ಈ ಬಗ್ಗೆ ಫೋಟೋ ಸಮೇತ ಜಲಸಂಪನ್ಮೂಲ ಸಚಿವರಿಗೆ ಪತ್ರ ಬರೆದರೂ ಏನೂ ಪ್ರಯೋಜನವಾಗಿಲ್ಲ ಎಂದು ಸದನದ ಗಮನ ಸೆಳೆದರು. ಸದನದಲ್ಲಿ ಜಲಸಂಪನ್ಮೂಲ ಸಚಿವರು ಇಲ್ಲದಿದ್ದರೂ ಚಿಂತೆಯಿಲ್ಲ. ಸಣ್ಣ ನೀರಾವರಿ ಸಚಿವರಾಗಿ ನೀವಾದರೂ ಉತ್ತರ ಕೊಡಿ ಎಂದು ಸಚಿವ ಮಾಧುಸ್ವಾಮಿ ಅವರಿಗೆ ಮನವಿ ಮಾಡಿದರು.
ಓದಿ:ಹುಲಿ, ಚಿರತೆ, ಆನೆ, ಕಾಡು ಹಂದಿಗಳ ಕಾಟದ ಪ್ರಸ್ತಾಪ: ಕಂಗಾಲಾದ ವಿಧಾನಸಭೆ
ನನ್ನ ಇಲಾಖೆಗೆ ಸಂಬಂಧಿಸಿದ ಪ್ರಶ್ನೆ ಬಿಟ್ಟು ಬೇರೆ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗೆ ಹೇಗೆ ಉತ್ತರಿಸಲಿ ಎಂದು ಉತ್ತರ ಕೊಡದೆ ಸಚಿವರು ಜಾರಿಕೊಂಡರು. ಇದು ನಿಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ನನಗೂ ಗೊತ್ತು. ಆದರೂ ನೀವೇ ಉತ್ತರ ಕೊಡಿ ಎಂದು ಮತ್ತೊಮ್ಮೆ ಶಿವಾನಂದ್ ಪಾಟೀಲ್ ಮನವಿ ಮಾಡಿದಾಗ, ಇದು ನನ್ನ ಇಲಾಖೆಗೆ ಬರುವುದಿಲ್ಲ. ಆದರೂ ನೀವೇ ಉತ್ತರ ಕೊಡಿ ಎಂದು ಅಧಿಕಾರಿಗಳು ನೋಟಿಸ್ ಕೊಡ್ತಾರೆ ಎಂದು ಮಾಧುಸ್ವಾಮಿ ಹೇಳಿದರು.
ನಾನು ಗಟ್ಟಿಯಾಗಿ ಮಾತನಾಡಿದ್ದಕ್ಕೆ ಈಗ ಹಿಂದಕ್ಕೆ ಬಂದಿದ್ದೇನೆ ಎಂದು ಪರೋಕ್ಷವಾಗಿ ತಮ್ಮ ಬಳಿ ಇದ್ದ ಕಾನೂನು ಮತ್ತು ವ್ಯವಹಾರಗಳ ಖಾತೆಯನ್ನು ಹಿಂಪಡೆದಿರುವುದರ ಬಗ್ಗೆ ಅಸಮಾಧಾನ ಹೊರಹಾಕಿದರು.