ಬೆಂಗಳೂರು: ಕೋವಿಡ್ ಸೋಂಕು ತಡೆಗಟ್ಟಲು ಹಾಗೂ ಹೆಚ್ಚಿನವರಿಗೆ ಲಸಿಕೆ ನೀಡಲು ಉದ್ಯೋಗಸ್ಥರಿರುವಲ್ಲಿಗೇ ಹೋಗಿ ಲಸಿಕೆ ನೀಡಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಇದಕ್ಕೆ ರಾಜ್ಯದಲ್ಲೂ ವ್ಯವಸ್ಥೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್ ನಿಯಂತ್ರಣ ಸಂಬಂಧ ಬೀದರ್, ಬೆಳಗಾವಿ, ವಿಜಯಪುರ, ಕಲಬುರಗಿ, ತುಮಕೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಮಂಡ್ಯ, ಮೈಸೂರು ಹಾಗೂ ಚಿತ್ರದುರ್ಗ ಜಿಲ್ಲಾಡಳಿತಗಳೊಂದಿಗೆ ವಿಡಿಯೋ ಸಂವಾದ ನಡೆಸಲಾಗಿದೆ ಎಂದರು.
1 ಕೋಟಿ ತಲುಪಲಿದೆ ಲಸಿಕೆ
ಕೇಂದ್ರ ಸರ್ಕಾರ ಉದ್ಯೋಗಸ್ಥರಿಗೆ, ಅರ್ಹರಿಗೆ ಅದೇ ಸ್ಥಳಗಳಲ್ಲಿ ಹೋಗಿ ಲಸಿಕೆ ನೀಡುವ ಅವಕಾಶ ಕೊಟ್ಟಿದೆ. ಈ ಕುರಿತು ದೊಡ್ಡ ಉದ್ಯಮಗಳು, ಐಟಿ ಉದ್ಯಮಗಳು ಮನವಿ ಮಾಡಿದ್ದವು. ಅದಕ್ಕೆ ಕೇಂದ್ರದಿಂದ ಮಂಜೂರಾತಿ ಸಿಕ್ಕಿದೆ. ಏಪ್ರಿಲ್ 11ರಿಂದ ಅವರಿರುವ ಸ್ಥಳದಲ್ಲೇ ಲಸಿಕೆ ನೀಡುವ ವ್ಯವಸ್ಥೆಯಾಗಲಿದೆ. ಇದರಿಂದಾಗಿ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಲಿದೆ. ಈವರೆಗೆ 50 ಲಕ್ಷ ಡೋಸ್ ತಲುಪಿಸಲಾಗಿದೆ. ಆದಷ್ಟು ಶೀಘ್ರ ಇನ್ನು 50 ಲಕ್ಷವಾಗಿ, ಒಂದು ಕೋಟಿ ತಲುಪಲಿದೆ ಎಂದರು.
ಕಳೆದೆರಡು ವಾರದಿಂದ ಗಮನಿಸಿದಾಗ ಕೆಲ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಾಗುತ್ತಾ ಹೋಗಿದೆ. ಕೆಲವು ಕಡೆ ಕೋವಿಡ್ ಪರೀಕ್ಷೆ ಕಡಿಮೆಯಾಗಿದೆ. ಸಾರಿ ಹಾಗೂ ಐಎಲ್ಐ ಪ್ರಕರಣ ಪತ್ತೆ ಕಡಿಮೆ ಹಾಗೂ ಲಸಿಕೆ ಮೊದಲಾದ ವಿಷಯ ಕುರಿತು ಚರ್ಚಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವರು ನೀಡಿದ ಮಾರ್ಗದರ್ಶನವನ್ನು ಈ ಜಿಲ್ಲೆಗಳಿಗೆ ತಿಳಿಸಲಾಗಿದೆ. ಎಲ್ಲರೂ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನಸಾಮಾನ್ಯರು ಸ್ವಯಂ ನಿಯಮ ಹಾಕಿಕೊಳ್ಳಬೇಕು ಎಂದರು.
ಹೀಗೆ ಮುಂದುವರೆದರೆ ಹಾಸಿಗೆ ಸಮಸ್ಯೆ
ಜನರು ತಮ್ಮಲ್ಲಿ ಬದಲಾವಣೆ ಮಾಡಿಕೊಂಡು ಸರ್ಕಾರಕ್ಕೆ ಸಹಕಾರ ನೀಡಬೇಕು. 2ನೇ ಅಲೆ ನಿರೀಕ್ಷೆಗೂ ಮೀರಿ ಹರಡುತ್ತಿದೆ. ಸೋಂಕು ಹೆಚ್ಚಾದರೆ ಹಾಸಿಗೆ ಲಭ್ಯತೆ ಕಷ್ಟವಾಗುತ್ತದೆ. ಕಳೆದೊಂದು ವರ್ಷದಿಂದ ಎಲ್ಲಾ ಸಿದ್ಧತೆ ಮಾಡಿಕೊಂಡಿರುವುದರಿಂದ ಅಂತಹ ಸಮಸ್ಯೆ ಇಲ್ಲ. ಆದರೆ ಇದೇ ರೀತಿ ಶೇ. 6, ಶೇ. 9ರಷ್ಟು ಪಾಸಿಟಿವಿಟಿ ದರ ಬಂದರೆ ಅಥವಾ ಶೇ. 20, ಶೇ. 25ರಷ್ಟು ಬಂದರೆ ಎಷ್ಟು ಜನ ಐಸಿಯುಗೆ ಹೋಗಬೇಕಾಗುತ್ತದೆ ಎಂದು ಯೋಚಿಸಬೇಕಾಗುತ್ತದೆ ಎಂದರು.
ಬೆಂಗಳೂರಿನಲ್ಲಿ 5 ಸಾವಿರ ಹತ್ತಿರಕ್ಕೆ ಪ್ರಕರಣಗಳ ಸಂಖ್ಯೆ ಬಂದಿದೆ. ಪಾಸಿಟಿವಿಟಿ ದರ ಶೇ. 5.56ರಷ್ಟಿದೆ. ಇಡೀ ರಾಜ್ಯದಲ್ಲಿ 35 ಸಾವಾಗಿದ್ದರೆ, 25 ಬೆಂಗಳೂರಿನಲ್ಲೇ ಆಗಿದೆ. ನಾಳೆ ಬಿಬಿಎಂಪಿ, ಬೆಂಗಳೂರು ನಗರ, ಗ್ರಾಮಾಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಪ್ರಧಾನಮಂತ್ರಿಗಳು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಲಿರುವ ಸಭೆಯಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಕೂಡ ಪಾಲ್ಗೊಂಡು ಚರ್ಚಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.