ಬೆಂಗಳೂರು: ಕೇಂದ್ರ ಸರ್ಕಾರ ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಯೋಜನೆ ಘೋಷಿಸಿರುವುದು ಸ್ವಾಗತಾರ್ಹ ನಡೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ. ಗೋಪಾಲಯ್ಯ ಹೇಳಿದರು.
ನಗರದ ಶಂಕರಮಠ ವಾರ್ಡ್ನಲ್ಲಿ ಆಯೋಜಿಸಿದ್ದ ಅಟಲ್ ಸೇವಾ ಕೇಂದ್ರದ ಉದ್ಘಾಟನೆ, ಮಕ್ಕಳಿಗೆ ಶೈಕ್ಷಣಿಕ ಕಿಟ್ ಹಾಗೂ ದಿನಸಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಂಕಷ್ಟದ ಕಾಲದಲ್ಲಿ ಬಡವರ, ಶ್ರಮಿಕರ, ಕೂಲಿ ಕಾರ್ಮಿಕರ ಹಾಗೂ ಅಗತ್ಯವಿರುವ ಜನರ ಸೇವೆಗೆ ಕೆಲಸ ಮಾಡುತ್ತಿವೆ. ಕೇಂದ್ರ ಘೋಷಣೆ ಮಾಡಿದ ಪ್ಯಾಕೇಜ್ ಬಹಳಷ್ಟು ಜನರಿಗೆ ಅನುಕೂಲವಾಗಲಿದೆ. ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಮುಂಬರುವ ದಿನಗಳಲ್ಲಿ ಬಡವರಿಗೆ ತುಂಬಾ ಅನುಕೂಲ ಮಾಡಿಕೊಡಲಿದೆ ಎಂದು ಹೇಳಿದರು.
ಶಂಕರಮಠ ವಾರ್ಡ್ನ ಬಿಜೆಪಿ ಅಧ್ಯಕ್ಷ ಬಿ.ಎಮ್. ಶ್ರೀನಿವಾಸ್ ಹಾಗೂ ಬೆಂಗಳೂರು ಉತ್ತರದ ಜಯಸಿಂಹ ಸೇರಿದಂತೆ ಸಾವಿರಾರು ಕಾರ್ಯಕರ್ತರು ಕೊರೊನಾ ಸಂತ್ರಸ್ತರಿಗೆ ನೆರವು ನೀಡುಲು ಶ್ರಮಿಸುತ್ತಿದ್ದಾರೆ. ತೊಂದರೆಗಳು ಎದುರಾದ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ಮುಂಚೂಣಿಯಲ್ಲಿ ನಿಂತು ಪರಿಹಾರ ಕಾರ್ಯಗಳನ್ನು ನಡೆಸಿಕೊಡುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಶೈಕ್ಷಣಿಕ ಹಾಗೂ ಆಹಾರದ ಕಿಟ್ಗಳನ್ನು ವಿತರಿಸಿಲಾಯಿತು. ಮಾಜಿ ಉಪ ಮೇಯರ್ ಎಸ್. ಹರೀಶ್, ಮಾಜಿ ಶಾಸಕ ನೆ.ಲ. ನರೇಂದ್ರಬಾಬು, ಬಿ. ಜಯಸಿಂಹ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.