ಬೆಂಗಳೂರು : ರಾಜ್ಯದ ಯಾವುದೇ ಭಾಗದಲ್ಲಾದ್ರೂ ಬಂಡವಾಳ ಹೂಡಿಕೆ ಮಾಡಲು ಮುಂದಾಗುವ ಉದ್ಯಮಿಗಳಿಗೆ ಅಗತ್ಯ ನೆರವು ನೀಡಲು ಸರ್ಕಾರ ಸಿದ್ಧವಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಓದಿ: ಪೌರ ಕಾರ್ಮಿಕರ ಹಿತಕ್ಕೆ ವಿಶ್ರಾಂತಿ ಗೃಹ ನಿರ್ಮಾಣ : ಮಾಜಿ ಸಚಿವ ಕೋಟೆ ಶಿವಣ್ಣ
ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆ ಜೆಡಿಎಸ್ ಸದಸ್ಯ ಲಿಂಗೇಶ್ ಕೆ ಎಸ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಟೈಯರ್-2 ಮತ್ತು ಟೈಯರ್-3 ನಗರಗಳಲ್ಲಿ ಬಂಡವಾಳ ಹೂಡಲು ಉದ್ಯಮಿಗಳು ಬಂದರೆ ಅವರಿಗೆ ಜಮೀನು, ಭೂಮಿ, ವಿದ್ಯುತ್ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಸರ್ಕಾರ ಒದಗಿಸಲಿದೆ. ಹೂಡಿಕೆದಾರರ ಪರವಾಗಿ ನಮ್ಮ ಸರ್ಕಾರವಿದೆ ಎಂದರು.
ಹಾಸನ ಜಿಲ್ಲೆ ಬೇಲೂರಿನ ವ್ಯಾಪ್ತಿಯಲ್ಲಿರುವ ಎಂ.ಹುಣಸೆಕೆರೆ ಗ್ರಾಮದಲ್ಲಿ ಪ್ರವಾಸೋದ್ಯಮ ಇಲಾಖೆ ವಶದಲ್ಲಿರುವ 8 ಎಕರೆ ಜಮೀನಿನಲ್ಲಿ ಸಣ್ಣ ಕೈಗಾರಿಕೆ ಪ್ರಾರಂಭಿಸಬೇಕೆಂದು ಶಾಸಕ ಲಿಂಗೇಶ್ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಜಮೀನು ಪ್ರವಾಸೋದ್ಯಮ ಇಲಾಖೆಗೊಳಪಡಲಿದೆ.
ಕೆಐಎಡಿಬಿ ಮೂಲಕ ಜಮೀನನ್ನು ಪಡೆದುಕೊಂಡು ಇಲ್ಲಿ ಸಣ್ಣ ಕೈಗಾರಿಕೆಯನ್ನು ಪ್ರಾರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಟೈಯರ್-2 ಮತ್ತು 3 ನಗರಗಳಲ್ಲಿ ಸಣ್ಣ ಕೈಗಾರಿಕೆ ಪ್ರಾರಂಭವಾದರೆ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು.
ಜಿಯೋಗ್ರಾಫಿಕಲ್ ಇಂಡಿಕೇಷನ್ ಟ್ಯಾಗ್ ಹೊಂದಿದ ಉತ್ಪನ್ನಗಳ ಉತ್ತೇಜನ : ಜಿಯೋಗ್ರಾಫಿಕಲ್ ಇಂಡಿಕೇಷನ್ ಟ್ಯಾಗ್ ಹೊಂದಿದ ಉತ್ಪನ್ನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ದೇವನಹಳ್ಳಿ ಬಳಿ ಅಂತಾರಾಷ್ಟ್ರೀಯ ಮಳಿಗೆ ಕೇಂದ್ರವನ್ನು ಪ್ರಾರಂಭ ಮಾಡಲು ಉದ್ದೇಶಿಸಲಾಗಿದೆ ಎಂದು ಕಾಂಗ್ರೆಸ್ ಸದಸ್ಯ ಅಬ್ಬಯ್ಯ ಪ್ರಸಾದ್ ಅವರ ಪ್ರಶ್ನೆಗೆ ಸಚಿವ ಜಗದೀಶ್ ಶೆಟ್ಟರ್ ಉತ್ತರಿಸಿದರು.
ಪ್ರಾರಂಭಿಕ ಹಂತವಾಗಿ ದೇವನಹಳ್ಳಿ ಬಳಿ ಈ ಮಳಿಗೆ ಕೇಂದ್ರ ಪ್ರಾರಂಭವಾಗಲಿದೆ. ಮುಂದಿನ ದಿನಗಳಲ್ಲಿ ಇದನ್ನು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಮತ್ತಿತರ ಕಡೆ ಪ್ರಾರಂಭ ಮಾಡುವುದಾಗಿ ಹೇಳಿದರು. ಈ ಅಂತಾರಾಷ್ಟ್ರೀಯ ಮಳಿಗೆಗಳನ್ನು ತೆರೆಯುವುದರಿಂದ ನಮ್ಮಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳನ್ನು ನಾವು ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಪ್ರಯಾಣಿಕರಿಗೆ ಪರಿಚಯಿಸಲು ಅನುಕೂಲವಾಗುತ್ತದೆ. ಇದರಿಂದ ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ ಎಂದು ಅಭಿಪ್ರಾಯಪಟ್ಟರು.
ಪ್ರಮುಖವಾಗಿ ಈ ಮಳಿಗೆಗಳಲ್ಲಿ ಚನ್ನಪಟ್ಟಣದ ಗೊಂಬೆಗಳು, ನವಲಗುಂದ ಜಮಾಖಾನಾ, ಕೊಲ್ಲಾಪುರ ಚಪ್ಪಲಿಗಳು, ಉಡುಪಿ ಮಲ್ಲಿಗೆ, ಮಟ್ಟುಗುಳ್ಳ ಬದನೆಕಾಯಿ, ಉಡುಪಿ ಸೀರೆಗಳು, ಸಂಡೂರು ಲಂಬಾಣಿ ಎಂಬ್ರಾಡರಿ, ಬಿದರು ಉತ್ಪನ್ನಗಳು, ಕಮಲಾಪುರ್ ಕೆಂಪು ಬಾಳೆಹಣ್ಣು, ಮೈಸೂರು ಅಗರಬತ್ತಿ, ಮೈಸೂರು ಸ್ಯಾಂಡಲ್, ಮೈಸೂರು ರೋಸ್‍ವುಡ್, ಮೈಸೂರು ಟ್ರೆಡಿಷನಲ್ ಪೇಂಟಿಂಗ್ ಸೇರಿದಂತೆ ಮತ್ತಿತರ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ ಮೂಲಕ ಇಳಕಲ್ ಸೀರೆ, ಗುಳೇದಗುಡ್ಡ ಕಣ, ಮೊಳಕಾಲ್ಮೂರು ಸೀರೆ ಸೇರಿದಂತೆ ಮತ್ತಿತರ ಉತ್ಪನ್ನಗಳಿಗೆ ಜಿಯೋಗ್ರಫಿಕಲ್ ಇಂಡಿಕೇಷನ್ ಟ್ಯಾಗ್ ಮಾರುಕಟ್ಟೆ ಸೌಲಭ್ಯ ದೊರಕಿಸಿಕೊಡಲು ಪ್ರಾಥಮಿಕ ಅಧ್ಯಯನ ಕೈಗೊಳ್ಳಲಾಗಿದೆ ಎಂದರು.
ಇ-ಕಾಮರ್ಸ್ ಮೂಲಕ ಮಾರುಕಟ್ಟೆ ಒದಗಿಸಲು ಅಮೆಜಾನ್ ಮತ್ತು ಫ್ಲಿಪ್‍ಕಾರ್ಟ್ ಸಹಯೋಗದೊಂದಿಗೆ ಉತ್ತೇಜನ ನೀಡಲಾಗುತ್ತದೆ. ಕೇಂದ್ರ ಸರ್ಕಾರವು 1993ರ ಕಾನೂನಿನ ಪ್ರಕಾರ 370 ಉತ್ಪನ್ನಗಳನ್ನು ಜಿಯೋಗ್ರಾಫಿಕಲ್ ಇಂಡಿಕೇಷನ್ ಎಂದು ಗುರುತಿಸಿದೆ. ವಿಶೇಷವೆಂದ್ರೆ ದೇಶದಲ್ಲೇ ಅತಿ ಹೆಚ್ಚು ಕರ್ನಾಟಕದ ಸುಮಾರು 42 ಉತ್ಪನ್ನಗಳಿಗೆ ಜಿಯೋಗ್ರಾಫಿಕಲ್ ಇಂಡಿಕೇಷನ್ ಸಿಕ್ಕಿದೆ ಎಂದು ಹೇಳಿದರು.
ಹೊಸ ಕೈಗಾರಿಕಾ ನೀತಿ ಬಗ್ಗೆ ಪ್ರಚಾರ : ರಾಜ್ಯ ಸರ್ಕಾರದ ಹೊಸ ಕೈಗಾರಿಕಾ ನೀತಿಯ ಬಗ್ಗೆ ತಮಿಳುನಾಡು, ಕೇರಳದಲ್ಲಿ ರೋಡ್ ಶೋ ಮಾಡಿ ಹೆಚ್ಚು ಪ್ರಚಾರ ಮಾಡಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ಅವರ ಪ್ರಶ್ನೆಗೆ ಉತ್ತರಿಸಿದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಹೊಸ ಕೈಗಾರಿಕಾ ನೀತಿಯಿಂದ ಐದು ವರ್ಷಗಳಲ್ಲಿ 5 ಲಕ್ಷ ಕೋಟಿ ರೂ. ಬಂಡವಾಳ ನಿರೀಕ್ಷಿಸಿದ್ದು, 20 ಲಕ್ಷ ಉದ್ಯೋಗ ಸೃಷ್ಟಿಸುವ ಉದ್ದೇಶವಿದೆ.
2025ರವರೆಗೂ ಈ ನೀತಿ ಜಾರಿಯಲ್ಲಿರುತ್ತದೆ. ಕೈಗಾರಿಕಾ ನೀತಿಯಲ್ಲಿ ವಲಯವಾರು ವಿಂಗಡಣೆ ಮಾಡಲಾಗಿದ್ದು, ಹಿಂದುಳಿದ ತಾಲೂಕುಗಳು ಹಾಗೂ 2, 3ನೇ ವಲಯಕ್ಕೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದರು. ಏಕಗವಾಕ್ಷಿ ಮೂಲಕ ಕೈಗಾರಿಕೆಗೆ ಅನುಮೋದನೆ ನೀಡಲಾಗುತ್ತಿದೆ. ಹಿಂದುಳಿದ ಜಿಲ್ಲೆ ಮತ್ತು ತಾಲೂಕಿನಲ್ಲಿ ಕೈಗಾರಿಕೆ ಉತ್ತೇಜಿಸಲು ಹೆಚ್ಚು ಪ್ರೋತ್ಸಾಹ ಹಾಗೂ ಸಬ್ಸಿಡಿ ನೀಡಲಾಗುತ್ತಿದೆ ಎಂದು ಹೇಳಿದರು.
ಶಾಸಕ ಪಿ.ರಾಜೀವ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕುಡಚಿ ಕ್ಷೇತ್ರದ ಕೈಗಾರಿಕಾ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು, ಕೈಗಾರಿಕಾ ಸ್ಥಾಪನೆಗಾಗಿ ಯಾವುದೇ ಜಮೀನನ್ನು ಗುರುತಿಸಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಿಲ್ಲ ಎಂದು ತಿಳಿಸಿದರು.