ಬೆಂಗಳೂರು : ರಾಜ್ಯದಲ್ಲಿ ಒತ್ತುವರಿಯಾಗಿರುವ ಸುಮಾರು ಮೂರು ಸಾವಿರ ಕೆರೆಗಳ ಗಡಿಯನ್ನು ಗುರುತಿಸಿ ಅವುಗಳನ್ನು ಪುನಶ್ಚೇತನ ಮಾಡಿ ನೀರು ತುಂಬಿಸುವ ಕೆಲಸ ಮಾಡುವುದಾಗಿ ಸಣ್ಣ ನೀರಾವರಿ ಸಚಿವ ಜೆ. ಸಿ ಮಾಧುಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಇಂದು ಪ್ರಶ್ನೋತ್ತರ ವೇಳೆ ಶಾಸಕ ವೀರಭದ್ರಯ್ಯ ಎಂ. ವಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಣ್ಣ ಕೆರೆಗಳನ್ನು ಪುನಶ್ಚೇತನಗೊಳಿಸಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ.
ನಮ್ಮ ಇಲಾಖೆ ವತಿಯಿಂದ ಈ ವರ್ಷದ ಒಟ್ಟು 3 ಸಾವಿರ ಕೆರೆಗಳನ್ನು ಸರ್ವೇಯರ್ಗಳ ಮೂಲಕ ಸರ್ವೇ ನಡೆಸಿ ಅವುಗಳನ್ನು ಪುನಶ್ಚೇತನಗೊಳಿಸುವ ಕಾರ್ಯ ನಡೆಯಲಿದೆ ಎಂದರು.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನಲ್ಲಿ ಒಟ್ಟು 56 ಕೆರೆಗಳಿವೆ. ಇವುಗಳ ಒತ್ತುವರಿಯನ್ನು ಗುರುತಿಸಲು ಸರ್ವೆ ಕಾರ್ಯ ಕೈಗೆತ್ತಿಕೊಳ್ಳಲು ಪ್ರಸ್ತುತ ಒಂದು ಕೆರೆಯ ಸರ್ವೆ ಕಾರ್ಯ ಮಾತ್ರ ಮುಗಿದಿದೆ. ಬಾಕಿ ಇರುವ 55 ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಳ್ಳಬೇಕಿದೆ ಎಂದರು.
ಕಂದಾಯ ಇಲಾಖೆ ನೆರವಿನೊಂದಿಗೆ ಕೆರೆಗಳ ಕಾರ್ಯ ಕೈಗೊಂಡು ಗಡಿ ಗುರುತಿಸಿ ಒತ್ತುವರಿ ಕಂಡು ಬಂದಲ್ಲಿ ತೆರವುಗೊಳಿಸಲಾಗುವುದು. ಬೌಂಡರಿ ಕಂದಕ, ಗಡಿ ಕಲ್ಲುಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಶಾದಿಮಹಲ್ ಕಟ್ಟಡ ಕಾಮಗಾರಿ ಪೂರ್ಣ : ರಾಜ್ಯದಲ್ಲಿ ನೆನಗುದಿಗೆ ಬಿದ್ದಿರುವ 153 ಶಾದಿಮಹಲ್‍ಗಳ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚಿಸಿ ಸೂಕ್ತ ತೀರ್ಮಾನವನ್ನು ಕೈಗೊಳ್ಳುವುದಾಗಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು, ಶಾಸಕ ಡಾ. ಅಜಯ್ ಸಿಂಗ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ರಾಜ್ಯದಲ್ಲಿ ಒಟ್ಟು 153 ಶಾದಿಮಹಲ್‍ಗಳ ಕಟ್ಟಡಗಳು ವಿವಿಧ ಕಾರಣಗಳಿಂದ ಪೂರ್ಣಗೊಂಡಿಲ್ಲ. ಇವುಗಳನ್ನು ಪೂರ್ಣಗೊಳಿಸಲು ಸುಮಾರು ಕನಿಷ್ಠ 58 ರಿಂದ 60 ಕೋಟಿ ರೂ. ಹಣ ಬೇಕು. ಸಿಎಂ ಜೊತೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
ಯಾವ ಕಟ್ಟಡಗಳನ್ನು ನಾವು ಪೂರ್ಣಗೊಳಿಸದೆ ಹಾಳಾಗಲಿ ಎಂದು ಬಿಡುವುದಿಲ್ಲ. 2020-21ರಲ್ಲಿ ಶಾದಿ ಮಹಲ್‍ಗಳ ಕಟ್ಟಡಗಳನ್ನು ಆರಂಭಿಸಿರಲಿಲ್ಲ. ಸುಮಾರು 123 ಶಾಸಕರು ಶಾದಿ ಮಹಲ್‍ಗಳ ಕಟ್ಟಡಗಳನ್ನು ಪೂರ್ಣಗೊಳಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಹಣಕಾಸಿನ ಲಭ್ಯತೆ ನೋಡಿಕೊಂಡು ಹಂತ ಹಂತವಾಗಿ ಕಟ್ಟಡ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು.
ಈ ಹಂತದಲ್ಲಿ ಕಾಂಗ್ರೆಸ್ ಸದಸ್ಯ ಅಮರೇಗೌಡ ಬಯ್ಯಾಪುರ ಅವರು ರಾಜ್ಯದ ಒಟ್ಟು 15 ಕಡೆ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ 10 ಕಡೆ ಶಾಲೆಗಳು, 5 ಕಡೆ ಹಾಸ್ಟೆಲ್‍ಗಳನ್ನು ನಿರ್ಮಿಸಿದ್ದಾರೆ. ಸರ್ಕಾರಕ್ಕೆ ಇದರ ಬಗ್ಗೆ ಮಾಹಿತಿಯೇ ಇಲ್ಲ ಎಂದು ಕಿಡಿಕಾರಿದರು.
ಇದಕ್ಕೆ ಆಕ್ಷೇಪಿಸಿದ ಸಚಿವ ಮಾಧುಸ್ವಾಮಿ, ಶಾದಿಮಹಲ್‍ಗೂ ನಿಮಗೂ ಏನು ಸಂಬಂಧ. ಬಸವೇಶ್ವರನಗರದಲ್ಲಿ ಬಸವನಗುಡಿ ಬಗ್ಗೆ ಕೇಳಿದ್ದರೆ ನಾನು ಉತ್ತರ ಕೊಡುತ್ತಿದ್ದೆ ಎಂದು ವ್ಯಂಗ್ಯವಾಡಿದರು.
ಓದಿ: ವಿಧಾನ ಪರಿಷತ್ ಸದಸ್ಯರ ಅನುದಾನ ಕಡಿತ: ಸರ್ಕಾರದ ವಿರುದ್ಧ ಶ್ರೀಕಂಠೇಗೌಡ ಆಕ್ರೋಶ