ಬೆಂಗಳೂರು: ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹ ಮಟ್ಟವನ್ನು 524.256 ಮೀಟರ್ ಗೆ ಎತ್ತರಿಸುವುದು, ಕೃಷ್ಣ ನ್ಯಾಯಾಧೀಕರಣದ ಅಂತಿಮ ತೀರ್ಪಿನ ಗೆಜೆಟ್ ಅಧಿಸೂಚನೆಗೆ ಒಳಪಟ್ಟಿದೆ. ನ್ಯಾಯಾಧೀಕರಣದ ತೀರ್ಪು ಕೇಂದ್ರ ಸರ್ಕಾರದಿಂದ ಅಧಿಸೂಚನೆಯಾಗಬೇಕಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಪುರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೃಷ್ಣ ಮೇಲ್ದಂಡೆ ಹಂತ-3ನೇ ಯೋಜನೆಗೆ ಸರ್ಕಾರ ನೀಡಿರುವ ಆಡಳಿತಾತ್ಮಕ ಅನುಮೋದನೆಯಂತೆ 9 ಉಪಯೋಜನೆಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕೊಪ್ಪಳ ಏತನೀರಾವರಿ ಯೋಜನೆಯಡಿ ಪ್ರಥಮ ಹಂತದಲ್ಲಿ 77 ಕೆರೆಗಳನ್ನು ತುಂಬಿಸಲು ಮೂರು ಪ್ಯಾಕೇಜ್ಗಳಡಿ ಕೈಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮುಂಗಾರು ಹಂಗಾಮಿಗೆ ನೀರು ಹರಿಸಲು ಉದ್ದೇಶಿಸಲಾಗಿದೆ ಎಂದರು.
ನ್ಯಾಯಾಧೀಕರಣದ ತೀರ್ಪು ಗೆಜೆಟ್ ಅಧಿಸೂಚನೆಯಾದ ನಂತರ ಹನಿನೀರಾವರಿ ಅಳವಡಿಕೆಯ ಕಾಮಗಾರಿ ಅನುಷ್ಠಾನಕ್ಕೆ ಕ್ರಮ ವಹಿಸಿ ರೈತರ ಜಮೀನಿಗೆ ನೀರು ಸಂಪರ್ಕ ಕಲ್ಪಿಸಲು ಯೋಜಿಸಲಾಗಿದೆ. ಮುರೋಳ ಏತನೀರಾವರಿಯಲ್ಲಿ ಹನಿ ನೀರಾವರಿ ವಿಫಲವಾಗಿದ್ದರೆ ಪುನರ್ ಪರಿಶೀಲನೆ ಮಾಡುವುದಾಗಿ ಸಚಿವರು ಭರವಸೆ ನೀಡಿದರು.
ಕಾಮಗಾರಿ ವಿಳಂಬ ಮಾಡಿದ ಗುತ್ತಿಗೆದಾರರಿಗೆ ದಂಡ : ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದ ಕಾಲುವೆ ಆಧುನೀಕರಣ ಕಾಮಗಾರಿಗೆ 117 ಕೋಟಿ ರೂ. ಅನುಮೋದನೆ ನೀಡಲಾಗಿದ್ದು, 2019ರ ಮಾರ್ಚ್‍ಗೆ ಮುಗಿಯಬೇಕಿತ್ತು ಎಂದು ಸಚಿವ ಗೋವಿಂದ ಕಾರಜೋಳ ಅವರು, ಶಾಸಕ ಅವಿನಾಶ್ ಉಮೇಶ್ ಜಾದವ್ ಪ್ರಶ್ನೆಗೆ ಉತ್ತರಿಸಿದರು.
ಕಾಮಗಾರಿ ವಿಳಂಬ ಮಾಡಿದ ಗುತ್ತಿಗೆದಾರರಿಗೆ ನಿತ್ಯ 750 ರೂ. ದಂಡ ವಿಧಿಸಲಾಗುತ್ತಿದೆ. 90.66 ಕೋಟಿ ರೂ. ಮೊತ್ತದ ಆರ್ಥಿಕ ಪ್ರಗತಿ ಸಾಧಿಸಿದ್ದು, ಉಳಿದ ಕಾಲುವೆ ಕಾಮಗಾರಿಗಳನ್ನು ಜುಲೈ ಅಂತ್ಯಕ್ಕೆ ಪೂರ್ಣಗೊಳಿಸಲಾಗುವುದು ಎಂದರು.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ 49 ಕೆರೆಗಳಿಗೆ ನೀರು ತುಂಬಿಸಲು 63.50 ಕೋಟಿ ರೂ. ಅಂದಾಜು ಪ್ರಸ್ತಾವನೆಯನ್ನು ಆಡಳಿತಾತ್ಮಕ ಅನುಮೋದನೆಗಾಗಿ ಕಾವೇರಿ ನೀರಾವರಿ ನಿಗಮದಿಂದ ಸ್ವೀಕೃತವಾಗಿದೆ ಎಂದು ಶಾಸಕ ಹೆಚ್. ಪಿ ಮಂಜುನಾಥ್ ಅವರ ಪ್ರಶ್ನೆಗೆ ಸಚಿವ ಕಾರಜೋಳ ಉತ್ತರಿಸಿದರು.
2019-20ನೇ ಸಾಲಿನ ಆಯವ್ಯಯದಲ್ಲಿ 50 ಕೋಟಿ ರೂ. ಒದಗಿಸುವ ಘೋಷಣೆಯಾಗಿತ್ತು. ಈ ಯೋಜನೆ ಕೋವಿಡ್ ಕಾರಣದಿಂದಾಗಿ ವಿಳಂಬವಾಗಿತ್ತು. ಈ ವರ್ಷ ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದರು.