ಬೆಂಗಳೂರು: ಪ್ರಧಾನಮಂತ್ರಿ ಉಜ್ವಲ್ ಯೋಜನೆ ಹಾಗೂ ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯಡಿ ಮೂರು ತಿಂಗಳ ಎಲ್‍ಪಿಜಿ ಗ್ಯಾಸ್ ಸಿಲಿಂಡರ್ಗಳನ್ನು ನೀಡಲು ಈಗಾಗಲೇ ಅನುಮತಿ ದೊರೆತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಪಿಎಲ್ ಕಾರ್ಡ್ ಹೊಂದಿರುವವರು ಮತ್ತು ಕಾರ್ಡ್ಗೆ ಅರ್ಜಿ ಸಲ್ಲಿಸಿರುವವರಿಗೂ ನಾಳೆಯಿಂದಲೇ 10 ಕೆಜಿ ಪಡಿತರ ಅಕ್ಕಿ ವಿತರಿಸಲಾಗುವುದು. ಶೇ. 90ರಷ್ಟು ಪಡಿತರ ಈಗಾಗಲೇ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆಯಾಗಿದೆ. ಇದು ರಾಜ್ಯದ ಇತಿಹಾಸದಲ್ಲಿ ದಾಖಲೆಯಾಗಿದೆ. 2.22 ಲಕ್ಷ ಜನ ಬಿಪಿಎಲ್ ಕಾರ್ಡ್ಗೆ ಅರ್ಜಿ ಹಾಕಿದ್ದರು. ಅದರಲ್ಲಿ 1.90 ಲಕ್ಷ ಅರ್ಜಿ ವಿಲೇವಾರಿ ಆಗಬೇಕು. ಅರ್ಜಿ ಹಾಕಿದವರಿಗೂ ನಾಳೆಯಿಂದ ತಲಾ 10 ಕೆಜಿ ಅಕ್ಕಿ ವಿತರಣೆಯಾಗುತ್ತದೆ ಎಂದರು.
ಮೇ ಹಾಗೂ ಜೂನ್ ತಿಂಗಳಲ್ಲೂ ತಲಾ ಹತ್ತು ಕೆಜಿ ಅಕ್ಕಿ ನೀಡಲಾಗುತ್ತದೆ. ಪಡಿತರ ಅರ್ಜಿ ಸಲ್ಲಿಸಿದವರು ಕಾಪಿ ತೋರಿಸಬೇಕು. ಒಟಿಪಿ ಪಡೆದು ಪಡಿತರ ನೀಡಲಾಗುತ್ತದೆ. ಮೇ 1ರಿಂದ ಎಲ್ಲಾ ಪಡಿತರ ಅಂಗಡಿಗಳಲ್ಲಿ 10 ಕೆಜಿ ಅಕ್ಕಿ, 1 ಕೆಜಿ ತೊಗರಿ ಬೇಳೆ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಎಪಿಎಲ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿರುವವರಿಗೂ ಒಂದು ಕೆಜಿಗೆ 15 ರೂ.ನಂತೆ 10 ಕೆಜಿ ಅಕ್ಕಿ ನಾಳೆಯಿಂದಲೇ ವಿತರಣೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಜನರು ಸಲ್ಲಿಸಿರುವ ಸ್ವೀಕೃತಿ ಅರ್ಜಿ ರಶೀದಿಯನ್ನು ತೋರಿಸಬೇಕು. ಇದಲ್ಲದೆ ಅವರ ಮೊಬೈಲ್ ನಂಬರ್ಗೆ ಬರುವ ಒಟಿಪಿ ನಂಬರ್ ಆಧಾರದ ಮೇಲೆ ಅಕ್ಕಿ ವಿತರಣೆ ಮಾಡಲಾಗುವುದು. ಈಗಾಗಲೇ ದಾಸ್ತಾನು ಗೋದಾಮುಗಳಿಂದ ಮಳಿಗೆಗಳಿಗೆ ಸಾಗಾಣೆ ಕಾರ್ಯ ಆರಂಭವಾಗಿದೆ ಎಂದರು.
ಈ ಯೋಜನೆಗಾಗಿ 148 ಕೋಟಿ ರೂ. ರಾಜ್ಯದ ಪಾಲು ಹಾಗೂ 148 ಕೋಟಿ ರೂ. ಕೇಂದ್ರದ ಪಾಲನ್ನು ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಸುಮಾರು 8.27 ಲಕ್ಷ ಕುಟುಂಬಗಳು ಪಡಿತರ ಪ್ರಯೋಜನ ಪಡೆಯಲಿದ್ದಾರೆ. ಈಗಾಗಲೇ ಆರ್ಥಿಕ ಇಲಾಖೆ ಮತ್ತು ಮುಖ್ಯಮಂತ್ರಿಗಳು ಇದಕ್ಕೆ ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದರು.