ಬೆಂಗಳೂರು: ನಾನು ರಾಜಕೀಯ ಮಾಡಲು ಸುದ್ದಿಗೋಷ್ಠಿ ಕರೆದಿಲ್ಲ. ನಾನು ಎಲ್ಲಿ ಮಲಗಿದೀನಿ ಅಂತ ಡಿಕೆಶಿ ನೋಡಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಟಾಂಗ್ ನೀಡಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮೀಣ ಜನರ ಸಮಸ್ಯೆಗಳಿಗೆ ಸಚಿವ ಈಶ್ವರಪ್ಪ ಸ್ಪಂದಿಸುತ್ತಿಲ್ಲ. ಎಲ್ಲಿ ಮಲಗಿದ್ದಾರೋ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕೆಗೆ ತಿರುಗೇಟು ನೀಡಿದರು. ಇವತ್ತು ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ ಕರೀತಾರೆ ಅನ್ನೋ ಕಲ್ಪನೆ ಸಹ ನನಗೆ ಇರಲಿಲ್ಲ. ಅವರು ರಾಜಕೀಯ ಮಾಡಲ್ಲ ಅಂತ ಹೇಳಿ ರಾಜಕೀಯ ಮಾಡ್ತಿದ್ದಾರೆ ಎಂದು ಟಾಂಗ್ ನೀಡಿದರು.
ನರೇಗಾ ಯೋಜನೆಯಲ್ಲಿ ಕೇಂದ್ರದಿಂದ 1,861.59 ಕೋಟಿ ರೂ. ಹಣ ಬಿಡುಗಡೆ:
ನರೇಗಾ ಕೂಲಿ ಕಾರ್ಮಿಕರಿಗೆ 1,039. 97 ಕೋಟಿ ರೂ. ಬಾಕಿ ಹಣ ಕೊಡಬೇಕಿದೆ ಹಾಗೂ ಸಾಮಾಗ್ರಿ ವೆಚ್ಚಕ್ಕಾಗಿ 821 ಕೋಟಿ ರೂ. ಮಂಜೂರು ಮಾಡಲಾಗಿದೆ. ರಾಜ್ಯ ಸರ್ಕಾರದಿಂದಲೂ 257 ಕೋಟಿ ರೂ. ಅನುದಾನ ಇದೆ. ಹಿಂದೆ ಕೆಲವರಿಗೆ ಕೂಲಿ ಮತ್ತು ಸಲಕರಣೆಗಳ ಬಿಲ್ ಬಾಕಿ ಇತ್ತು. ಎಲ್ಲವನ್ನೂ ಪಾವತಿಸಿದ ಬಳಿಕ 1079 ಬಾಕಿ ಹಣ ಉಳಿಯಲಿದೆ. ಅದನ್ನು ಈ ವರ್ಷ ಬಳಸಲಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಒಬ್ಬ ಕೂಲಿ ಕಾರ್ಮಿಕನಿಗೆ 249 ರೂ. ದಿನಕ್ಕೆ ಕೂಲಿ ಇತ್ತು. ಈಗ 275 ರೂ.ಗೆ ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದಿರುವ ಹಣ ಬಳಕೆ ಮಾಡಿಕೊಳ್ತೇವೆ. ಕೊರೊನಾದಿಂದಾಗಿ ನರೇಗಾ ಕೂಲಿ ಹಣದಲ್ಲಿ ಹೆಚ್ಚಳ ಆಗಿದೆ ಎಂದರು.
ಕುಡಿಯುವ ನೀರು:
ರಾಜ್ಯದ 49 ಬರಪೀಡಿತ ತಾಲೂಕುಗಳಲ್ಲಿ ಕುಡಿಯುವ ನೀರಿಗೆ ಅನುದಾನ ನೀಡಲಾಗುತ್ತಿದ್ದು, ಕುಡಿಯುವ ನೀರಿಗಾಗಿ ತಾಲೂಕಿಗೆ ತಲಾ 1 ಕೋಟಿ ರೂ. ಕೊಡಲಾಗುವುದು ಎಂದು ಮಾಹಿತಿ ನೀಡಿದರು.
ಟಾಸ್ಕ್ ಫೋರ್ಸ್ ರಚನೆ: ಗ್ರಾಮ ಪಂಚಾಯಿತಿಗಳಲ್ಲಿ ಕೊರೊನಾ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದೇವೆ. ಗ್ರಾಮಗಳಲ್ಲೂ ಸಮಿತಿಗಳನ್ನು ಮಾಡಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಜನಪ್ರತಿನಿಧಿಗಳ ವೇತನದಲ್ಲಿ ಕಡಿತ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲೂ ಸಹ ಸಿಎಂ ಈ ಬಗ್ಗೆ ಹೇಳಿದ್ದಾರೆ. ಜನಪ್ರತಿನಿಧಿಗಳ ವೇತನದಲ್ಲಿ ಕಡಿತ ಮಾಡಿದರೆ ನಮ್ಮೆಲ್ಲರ ಬೆಂಬಲ ಇರಲಿದೆ ಎಂದರು.