ಬೆಂಗಳೂರು: 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಮೂರನೇ ಹಂತದ ಕೊರೊನಾ ವ್ಯಾಕ್ಸಿನ್ ನೀಡಿಕೆಯಲ್ಲಿ ಹಿರಿಯ ನಾಗರಿಕರು ಅಲ್ಲದೇ ಇದ್ದರೂ ಆರೋಗ್ಯ ಸಚಿವ ಡಾ. ಸುಧಾಕರ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಆರೋಗ್ಯ ಸಮಸ್ಯೆ ಹಾಗೂ ಫ್ರಂಟ್ ಲೈನ್ ಕೊರೊನಾ ವಾರಿಯರ್ಸ್ ಕೋಟಾದಡಿ ಲಸಿಕೆ ಪಡೆದುಕೊಂಡರು.
ವಿಕ್ಟೋರಿಯಾದ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನಾ ಸೂಪರ್ ಸ್ಪೆಷಾಲಿಟಿ (PMSSY) ಆಸ್ಪತ್ರೆಯಲ್ಲಿ ಆರೋಗ್ಯ ಸಚಿವ ಸುಧಾಕರ್, ದೇಸೀಯ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ನ ಮೊದಲ ಡೋಸೇಜ್ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಕೊರೊನಾ ತಡೆಗೆ ರಾಜ್ಯದಲ್ಲಿ ಬಿಗಿ ಕ್ರಮ ಅವಶ್ಯವಾಗಿದೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಡಿಸಿಗಳಿಗೆ ಅಗತ್ಯ ಸೂಚನೆ ಕೊಡಲಿದ್ದಾರೆ. ಆದರೆ ನೈಟ್ ಕರ್ಫ್ಯೂ ಹೇರಿಕೆ ಬಗ್ಗೆ ಯಾವುದೇ ಚಿಂತನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿದಿನ 300ರಿಂದ 400 ಸೋಂಕಿನ ಪ್ರಕರಣಗಳು ಕಂಡುಬರುತ್ತಿವೆ. ಸದ್ಯ ಸೋಂಕು ಬಹಳ ನಿಯಂತ್ರಣದಲ್ಲಿದೆ. ನೆರೆಯ ರಾಜ್ಯಕ್ಕೆ ಹೋಲಿಸಿಕೊಂಡರೆ ನಮ್ಮಲ್ಲಿ ಕಡಿಮೆ ಇದೆ. ಕಡ್ಡಾಯವಾಗಿ ಮಾಸ್ಕ್ ಬಳಸಿ, ಅಂತರ ಕಾಪಾಡಿ ಎಂದು ಮನವಿ ಮಾಡಿದರು.
ಓದಿ:ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡ ಸಿಎಂ
ದೇಶೀಯ ಲಸಿಕೆಯನ್ನ ಸಿಎಂ ಪಡೆದಿದ್ದಾರೆ. ವೈದ್ಯರ ಸಲಹೆಯಂತೆ ಅರ್ಧ ಗಂಟೆ ವಿಶ್ರಾಂತಿ ಪಡೆದಿದ್ದಾರೆ. ಬಿಪಿ, ಶುಗರ್ ಯಾವುದೂ ಹೆಚ್ಚಿಲ್ಲ. ಯಾವುದೇ ಅಡ್ಡ ಪರಿಣಾಮ ಇಲ್ಲ. ವ್ಯಾಕ್ಸಿನ್ ಪಡೆದು 60 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳುವಂತೆ ಸಿಎಂ ಸ್ಪಷ್ಟ ಸಂದೇಶ ನೀಡಿದ್ದಾರೆ. 60 ವರ್ಷ ಮೇಲ್ಪಟ್ಟ 50 ಲಕ್ಷ ಜನ ಇದ್ದಾರೆ. 45 ವರ್ಷ ಮೇಲ್ಪಟ್ಟವರು ಅನಾರೋಗ್ಯಕ್ಕೆ ಒಳಗಾಗಿದ್ದರೆ ಅವರೂ ಲಸಿಕೆ ಪಡೆಯಿರಿ ಎಂದು ಕರೆ ನೀಡಿದರು.