ಬೆಂಗಳೂರು: ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021ರ ಕ್ರೀಡಾಕೂಟ ಯಶಸ್ವಿಯಾಗಿ ನಡೆದಿದೆ. ಇಂದು ಕಂಠೀರವ ಸ್ಟೇಡಿಯಂನಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ.
ಸಮಾರಂಭದಲ್ಲಿ ಪ್ರಹ್ಲಾದ್ ಜೋಶಿ, ಅನುರಾಗ್ ಸಿಂಗ್ ಠಾಕೂರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ಗೃಹ ಸಚಿವ ಆರಗ ಜ್ಞಾನೇಂದ್ರ, ನಟ ಸುದೀಪ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಕ್ರೀಡಾಕೂಟದಲ್ಲಿ ದೇಶದ 209 ವಿಶ್ವವಿದ್ಯಾನಿಲಯಗಳಿಂದ 3886 ಕ್ರೀಡಾಪಟುಗಳು ಹಾಗೂ ಒಟ್ಟು 8000 ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಕ್ರೀಡಾಪಟುಗಳು ಸೇರಿದಂತೆ 8 ಸಾವಿರ ಜನರಿಗೆ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ಅಚ್ಚುಕಟ್ಟಾಗಿ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು, ಒಲಿಂಪಿಕ್ಸ್ ಮಟ್ಟದ ಸೌಲಭ್ಯಗಳು ಮತ್ತು ಆತಿಥ್ಯ ಸೇವೆಗಳನ್ನು ನೀಡಿರುವುದಕ್ಕೆ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಸಚಿವ ನಾರಾಯಣ ಗೌಡ ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಮುಖ್ಯವಾಗಿ 500 ವಿದ್ಯಾರ್ಥಿಗಳಿಂದ ʼಯೋಗ' ಪ್ರದರ್ಶನ ಮತ್ತು ʼಖೇಲೋ ಇಂಡಿಯಾ ಯೂನಿರ್ವಸಿಟಿ ಗೇಮ್ಸ್-2021ʼರ 500 ಸ್ಪರ್ಧಾಳುಗಳಿಂದ ʼಆಜಾದಿ ಕಾ ಅಮೃತ ಮಹೋತ್ಸವʼದ ನೃತ್ಯ ಮತ್ತು ಸಂಗೀತದ ಜೊತೆ ಬಹುವರ್ಣಗಳ ಲೇಸರ್ ಬೆಳಕಿನ ಪ್ರದರ್ಶನ ಇರಲಿದೆ. ಹಸಿರು ಕ್ರೀಡಾಕೂಟ ಎಂದು ಘೋಷಿಸಲಾಗಿದ್ದು, ಕ್ರೀಡಾಕೂಟದಲ್ಲಿ ಭಾಗವಹಿಸಿರುವ 3,886 ಕ್ರೀಡಾಪಟುಗಳು ತಲಾ ಒಂದೊಂದು ಗಿಡಗಳನ್ನು ನೆಡಬೇಕು ಎಂದು ತಿಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇದನ್ನೂ ಓದಿ: ರಂಜಾನ್: ಬೆಂಗಳೂರಿನ ಕೆಲವೆಡೆ ವಾಹನ ಸಂಚಾರ ಮಾರ್ಗ ಬದಲಾವಣೆ