ಬೆಂಗಳೂರು : ಕೊರೊನಾ ಸಾಂಕ್ರಾಮಿಕ ಸೋಂಕು ಬಂದ ಸಂದರ್ಭದಲ್ಲಿ ಆಯುರ್ವೇದ, ಸಿದ್ದ, ಯೋಗ, ಯುನಾನಿ, ಆಲೋಪತಿ ಎಷ್ಟು ಪ್ರಾಮುಖ್ಯತೆ ಪಡೆದವು ಎಂಬುದು ಎಲ್ಲರ ಅರಿವಿಗೆ ಬಂದಿದೆ. ಆಯುರ್ವೇದಕ್ಕೆ ಭಾರತದಲ್ಲಿ ಅಷ್ಟೇ ಅಲ್ಲ, ಇಡೀ ವಿಶ್ವದಲ್ಲೇ ಮಹತ್ವವಿದೆ. ಈ ಪದ್ಧತಿ ಕಾಯಿಲೆ ಬಂದಾಗ ಔಷಧಿ ಕೊಡುವುದಲ್ಲ, ಬದಲಿಗೆ ಕಾಯಿಲೆ ಮುಂದೆ ಬಾರದಂತೆ ತಡೆಯಲು ದೈಹಿಕವಾಗಿ ದೃಢವಾಗಿ ಮಾಡುವುದಾಗಿದೆ. ಆರೋಗ್ಯ ವಿಕಸನಕ್ಕೆ ಆಯುರ್ವೇದ ಮುಖ್ಯವಾಗುತ್ತೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಜತ ಮಹೋತ್ಸವದ ಅಂಗವಾಗಿ ಬೃಹತ್ ಧನ್ವಂತರಿ ಪ್ರತಿಮೆ ಅನಾವರಣ, ಪ್ರತಿಭಾ ಪುರಸ್ಕಾರ ಸೇರಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಾಂಕೇತಿಕವಾಗಿ 10 ಜನರಿಗೆ ಪ್ರತಿಭಾ ಪುರಸ್ಕಾರವನ್ನ ವಿತರಿಸಿ ಬಳಿಕ ಆರೋಗ್ಯ ಸಚಿವ ಸುಧಾಕರ್ ಮಾತನಾಡಿದ್ರು.
ಆಯುರ್ವೇದದಲ್ಲಿ ಸಂಶೋಧನೆ, ಆವಿಷ್ಕಾರ ಬಹಳ ಮುಖ್ಯವಾಗುತ್ತೆ. ಅಲೋಪತಿಯಲ್ಲಿ ಹೇಗೆ ರೀಸರ್ಚ್ ಪೇಪರ್ ಪ್ರಕಟ ಮಾಡ್ತಾರೆ. ಹಾಗೇ ಆರ್ಯುವೇದದಲ್ಲೂ ಆಗಬೇಕು. ಎಷ್ಟೇ ನಂಬಿಕೆ ಇದ್ದರೂ ಸಾಕ್ಷಿ ಆಧಾರಗಳು ಇಲ್ಲ ಅಂದರೆ ಜನರು ಹಿಂಜರಿಯುತ್ತಾರೆ. ಹೀಗಾಗಿ, ಆರ್ಯುವೇದದಲ್ಲಿ ಹೆಚ್ಚೆಚ್ಚು ಸಂಶೋಧನೆಯ ನಿಯಮ ಪಾಲಿಸಬೇಕು ಅಂದರು.
ವೈದ್ಯಕೀಯ ಕ್ಷೇತ್ರವೂ ಅಂತಾರಾಷ್ಟ್ರೀಯ ಖ್ಯಾತಿ ಪಡೆಯಬೇಕು ಎಂದರೆ ಸಂಶೋಧನೆಗಳು ಹೆಚ್ಚಾಗಬೇಕು. ಪ್ರತಿ ಮೆಡಿಕಲ್ ಕಾಲೇಜಿಗೆ ರಿಸರ್ಚ್ ಸೆಂಟರ್ ಅಂತ ಹೇಳ್ತೀವಿ. ಆದರೆ, ಎಷ್ಟು ಪೇಪರ್ಗಳು ರಿಸರ್ಚ್ ಆಗಿ ಏನ್ ಆಗ್ತಿದೆ ಅನ್ನೋದು ಯಾರಿಗೂ ಏನು ಗೊತ್ತಿಲ್ಲ. ಈ ಬಗ್ಗೆ ನಮ್ಗೆ ನಾವೇ ಪ್ರಶ್ನೆ ಮಾಡಿಕೊಳ್ಳಬೇಕು ಎಂದ್ರು.
ಹಳ್ಳಿಗಳಲ್ಲಿ ಸೇವೆ ಸಲ್ಲಿಸುವ ಸೇವಾಭಾವ ಹೆಚ್ಚಿಸಿಕೊಳ್ಳಿ : 2-5 ವರ್ಷಗಳ ಕಾಲ ಹಳ್ಳಿಗಳಲ್ಲಿ ಸೇವೆ ಸಲ್ಲಿಸುವ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಹೊಸ ವೈದ್ಯರು, ಕಿರಿಯ ವೈದ್ಯರು ಈ ಕುರಿತು ವಿಚಾರ ಮಾಡಬೇಕು. ವೈದ್ಯಕೀಯ ಕಾಲೇಜು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗ್ತಿದ್ದರೂ ಕೂಡ ಗ್ರಾಮೀಣ ಪ್ರದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ವೈದ್ಯರಿಲ್ಲ. ವೈದ್ಯರು ಗಟ್ಟಿ ಮನಸ್ಸು ಮಾಡಿ ನಗರ ಆಯ್ಕೆ ಬಿಟ್ಟು, ಗ್ರಾಮಾಂತರ ಪ್ರದೇಶಗಳಲ್ಲಿ ಸೇವೆ ಸಲ್ಲಿಸಬೇಕು ಎಂದ್ರು.
ಹಂಗಾಮಿ ಕುಲಪತಿ ನೇಮಕ ನನ್ನ ಗಮನಕ್ಕೆ ಬಂದಿರಲಿಲ್ಲ : ರಾಜೀವ್ ಗಾಂಧಿ ಆರೋಗ್ಯ ವಿವಿ ಹಂಗಾಮಿ ಉಪ ಕುಲಪತಿ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಹಂಗಾಮಿ ಕುಲಪತಿ ನೇಮಕ ನನ್ನ ಗಮನಕ್ಕೆ ಬಂದಿರಲಿಲ್ಲ. ಖಾಸಗಿ ಕಾಲೇಜಿನ ಒಬ್ಬರು ವಿವಿ ಹಂಗಾಮಿ ಕುಲಪತಿಯಾಗಿರುವುದು ಇದೇ ಮೊದಲು. ಈ 25 ವರ್ಷಗಳ ಇತಿಹಾಸದಲ್ಲೇ ಹೀಗೆ ಆಗಿರಲಿಲ್ಲ ಎಂದ್ರು.
ಘನತೆವೆತ್ತ ರಾಜ್ಯಪಾಲರು ಕೂಡ ನನ್ನ ಜೊತೆ ಮಾತನಾಡಬೇಕಿತ್ತು. ಕೋವಿಡ್‌ನಿಂದಾಗಿ ಬಹುಶಃ ಮಾತನಾಡಲು ಆಗಿರಲಿಲ್ಲ. ನಾನು ಪತ್ರ ಬರೆದಿದ್ದೇನೆ. ಇದನ್ನ ಸಾರ್ವಜನಿಕವಾಗಿ ಮಾತಾಡೋಕೆ ಆಗಲ್ಲ. ಈಗಾಗಲೇ ಇದರ ಬಗ್ಗೆ ಸಿಎಂ ಯಡಿಯೂರಪ್ಪ ಜೊತೆ ಮಾತನಾಡಿದ್ದೇನೆ. ಅವರು ಕೆಲವು ವಿಷಯಗಳನ್ನ ಹೇಳಿದ್ದು, ಅದನ್ನ ನಾನು ರಾಜ್ಯಪಾಲರ ಗಮನಕ್ಕೆ ತರೋ ಕೆಲಸ ಮಾಡುತ್ತೇನೆ ಅಂತ ಹಂಗಾಮಿ ಉಪ ಕುಲಪತಿ ನೇಮಕ ಮಾಡಿರೋದರ ಬಗ್ಗೆ ಬೇಸರ ವ್ಯಕ್ತಪಡಿಸಿದರು.