ಬೆಂಗಳೂರು: ಕ್ರೀಡಾಪಟುಗಳಿಗೆ ಪದಕ ಗೆದ್ದ ಅಧಾರದಲ್ಲಿ ಪ್ರೋತ್ಸಾಹ ಧನ ನೀಡುತ್ತೇವೆ ಎಂದು ಸರ್ಕಾರ ನಿಗದಿಪಡಿಸಿದ್ರೆ ಆ ಹಣ ನೀಡಬೇಕು, ಇಲ್ಲದಿದ್ರೆ ಭರವಸೆ ಕೊಡಬಾರದು. ಈ ಬಗ್ಗೆ ಕೂಡಲೇ ಪರಿಶೀಲಿಸುತ್ತೇನೆಂದು ಪ್ರವಾಸೋದ್ಯಮ ಮತ್ತು ಕ್ರೀಡಾ ಸಚಿವ ಸಚಿವ ಸಿ.ಟಿ ರವಿ ತಿಳಿಸಿದ್ದಾರೆ.
ದೇಶ-ವಿದೇಶಗಳಲ್ಲಿ ಪದಕ ಗೆದ್ದಿರುವ ಕ್ರೀಡಾಪಟುಗಳಿಗೆ ಪದಕಗಳ ಆಧಾರದಲ್ಲಿ ರಾಜ್ಯ ಸರ್ಕಾರ ನೀಡುವ ಪ್ರೋತ್ಸಾಹ ಧನವನ್ನು ಕಳೆದ ಮೂರು ವರ್ಷಗಳಿಂದ ನೀಡದೆ ಕ್ರೀಡಾಪಟುಗಳ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಕ್ರೀಡಾಪಟುಗಳು ಆರೋಪ ಮಾಡಿದ್ರು. ಈ ಸುದ್ದಿಯನ್ನು ಈಟಿವಿ ಭಾರತ ಎಕ್ಸ್ಕ್ಲೂಸಿವ್ ಆಗಿ ವರದಿ ಮಾಡಿತ್ತು. ಇದೀಗ ಈಟಿವಿ ಭಾರತ ರಾಜ್ಯದ ಕ್ರೀಡಾಪಟುಗಳ ಅರೋಪದ ವಿಚಾರವಾಗಿ ಕ್ರೀಡಾ ಸಚಿವರಾದ ಸಿ ಟಿ ರವಿ ಅವರನ್ನು ಎಕ್ಸ್ಕ್ಲೂಸಿವ್ ಆಗಿ ಸಂದರ್ಶನ ಮಾಡಿದ್ದು, ರಾಜ್ಯದ ಕ್ರೀಡಾಪಟುಗಳ ಅರೋಪಕ್ಕೆ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.
ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಚಿವರು, ನಾನು ಕ್ರೀಡಾ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿ ಕೇವಲ ನಾಲ್ಕು ತಿಂಗಳುಗಳಾಗಿದ್ದು, ಸದ್ಯ ಲಾಕ್ಡೌನ್ ಆಗಿದೆ. ಅಲ್ಲದೇ ಈ ವಿಷಯವನ್ನು ಯಾವುದೇ ಅಧಿಕಾರಿಗಳು ನನ್ನ ಗಮನಕ್ಕೆ ತಂದಿಲ್ಲ. ಈಗ ನೀವು ನನ್ನ ಗಮನಕ್ಕೆ ತಂದಿದ್ದು, ಈ ಬಗ್ಗೆ ನಾನು ತಿಳಿದುಕೊಳ್ಳುತ್ತೇನೆ. ಸರ್ಕಾರ ಕ್ರೀಡಾಪಟುಗಳಿಗೆ ಪದಕ ಗೆದ್ದ ಅಧಾರದಲ್ಲಿ ಪ್ರೋತ್ಸಾಹ ಧನ ನೀಡುತ್ತೇವೆ ಎಂದು ಸರ್ಕಾರ ನಿಗದಿಪಡಿಸಿದ್ರೆ ಆ ಹಣ ನೀಡಬೇಕು. ಈ ಕುರಿತಂತೆ ಕೂಲಂಕಷವಾಗಿ ಪರಿಶೀಲಿಸುತ್ತೇನೆಂದು ತಿಳಿಸಿದರು.
ಜೊತೆಗೆ, ಯಾವ ಹಿನ್ನೆಲೆಯಲ್ಲಿ ಹಣ ಕೊಟ್ಟಿಲ್ಲ, ಎಷ್ಟು ಕ್ರೀಡಾಪಟುಗಳಿಗೆ ಹಣ ಬಿಡುಗಡೆ ಮಾಡಬೇಕು, ಎಲ್ಲವನ್ನೂ ತಿಳಿದುಕೊಂಡು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕೂಡಲೇ ಹಣ ಬಿಡುಗಡೆ ಮಾಡಿಸುತ್ತೇನೆ ಎಂದು ಕ್ರೀಡಾಪಟುಗಳಿಗೆ ಸಚಿವರು ಭರವಸೆ ನೀಡಿದ್ರು. ಅಲ್ಲದೇ, ಪ್ರೋತ್ಸಾಹ ಧನ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳು ಇಲಾಖೆಯಲ್ಲಿ ಹಣ ಇಲ್ಲವೆಂದು ಹೇಳಿದ್ದಾರೆ. ಎನ್ನುವ ಕ್ರೀಡಾಪಟುಗಳ ಅರೋಪಕ್ಕೆ ಪ್ರತಿಕ್ರಿಯಿಸಿ, ಯಾವ ಕಾರಣಕ್ಕೆ ಹಣ ನೀಡಿಲ್ಲ, ಒಂದು ವೇಳೆ ಹಣ ಬಿಡುಗಡೆ ಆಗಿದ್ದು, ಕ್ರೀಡಾಪಟುಗಳ ಕೈಸೇರಿಲ್ಲ ಎಂದಾದಲ್ಲಿ ಅದರ ವಿರುದ್ಧವೂ ಕೂಡಾ ಕ್ರಮ ಕೈಗೊಳ್ಳುತ್ತೇವೆ. ಇಲಾಖೆ ಸದೃಢವಾಗಿದೆ, ಯಾವುದೇ ಆತಂಕ ಬೇಡ. ಈ ವಿಷಯ ನನ್ನ ಗಮನಕ್ಕೆ ನಿಮ್ಮ ಮೂಲಕ ಗೊತ್ತಾಗಿದ್ದು, ಕೂಡಲೇ ಕ್ರಮ ಕೈಗೊಳ್ಳುತ್ತೇನೆ ಎಂದು ಈಟಿವಿ ಭಾರತ ಮೂಲಕ ಸಚಿವರು ಕ್ರೀಡಾಪಟುಗಳಿಗೆ ಅಭಯ ನೀಡಿದ್ರು.